ವಿಶ್ವಾಮಿತ್ರ
ನಮ್ಮ ಮಹಾಕಾವ್ಯ, ಪುರಾಣಗಳಲ್ಲಿ ಬರುವ ಪ್ರಸಿದ್ಧ ಮುನಿಗಳಲ್ಲಿ ವಿಶ್ವಾಮಿತ್ರರು ಒಬ್ಬರು. ಆದರೆ ಶೀಘ್ರ ಕೋಪ ಮತ್ತು ಮತ್ಸರದ ಕಾರಣದಿಂದ, ಹಲವು ವರ್ಷಗಳ ತಮ್ಮ ತಪಸ್ಸಿನ ಫಲದಿಂದ ಲಭ್ಯವಾದ ಶಕ್ತಿ-ಸಾಮರ್ಥ್ಯವನ್ನು ಕಳೆದುಕೊಂಡರು. ಕೋಪ ಮತ್ತು ಅಸೂಯೆ ಅವರ ತಪಸ್ಸಿನ ಫಲವನ್ನು ವ್ಯರ್ಥಗೊಳಿಸಿತು.
ಪ್ರಾರಂಭದಲ್ಲಿ ರಾಜರಾಗಿದ್ದ ವಿಶ್ವಾಮಿತ್ರರಿಗೆ ವಸಿಷ್ಠ ಮುನಿಗಳ ಬಗ್ಗೆ ಮತ್ಸರವಿತ್ತು. ವಸಿಷ್ಠರಲ್ಲಿ ಬಯಸಿದ್ದನ್ನು ನೀಡುವ ಹಸುವಿತ್ತೆಂಬುದೇ ಈ ಮತ್ಸರಕ್ಕೆ ಕಾರಣವಾಗಿತ್ತು. ಅನಂತರ ಮುನಿಗಳಾದ ಮೇಲೂ ವಸಿಷ್ಠರ ಬಗ್ಗೆ ಅಸೂಯೆ ಇತ್ತು. ಸಕಲ ಮಾನವರು ಮತ್ತು ದೇವತೆಗಳು ವಸಿಷ್ಠರನ್ನು ಬ್ರಹ್ಮರ್ಷಿಗಳೆಂದು ಗೌರವಿಸುತ್ತಿದ್ದರು, ತನ್ನನ್ನು ಕೇವಲ ‘ರಾಜರ್ಷಿ’ ಎಂದು ಕರೆಯುತ್ತಿದ್ದರು ಎಂಬುದು ಈ ಅಸೂಯೆಗೆ ಕಾರಣವಾಗಿತ್ತು. ಹಲವು ವರ್ಷಗಳವರೆಗೆ ಕಠಿಣ ತಪಸ್ಸನ್ನು ಆಚರಿಸಿದರೂ, ತಾನು ಕೇವಲ ರಾಜರ್ಷಿ, ತನಗೆ ‘ಬ್ರಹ್ಮರ್ಷಿ’ ಬಿರುದು ಸಿಗಲಿಲ್ಲವೆಂಬುದರಿಂದಾಗಿ ವಿಶ್ವಾಮಿತ್ರರು ಕೋಪಾವಿಷ್ಟರಾಗಿದ್ದರು. ಆದ್ದರಿಂದ ಒಮ್ಮೆ ವಿಶ್ವಾಮಿತ್ರರು ವಸಿಷ್ಠರನ್ನು ಸಂಹಾರ ಮಾಡುವ ಕೆಟ್ಟ ಯೋಚನೆ ಮಾಡಿದರು.
ಒಂದು ಬೆಳದಿಂಗಳ ರಾತ್ರಿ. ವಿಶ್ವಾಮಿತ್ರರು ವಸಿಷ್ಠರ ಆಶ್ರಮದತ್ತ ಹೆಜ್ಜೆ ಹಾಕಿದರು. ಅಲ್ಲಿ ವಸಿಷ್ಠರನ್ನು ಕಾಣದೆ, ಅವರಿಗಾಗಿ ಹುಡುಕಾಡಿದರು. ಪತ್ನಿಯೊಂದಿಗೆ ಬೆಳದಿಂಗಳ ಸೊಬಗನ್ನು ಸವಿಯುತ್ತಿದ್ದ ವಸಿಷ್ಠರನ್ನು ವಿಶ್ವಾಮಿತ್ರರು ಮರದ ಮರೆಯಲ್ಲಿ ನಿಂತು ನೋಡಿದರು. ಖಡ್ಗಧಾರಿಯಾದ ವಿಶ್ವಾಮಿತ್ರರು ವಸಿಷ್ಠರನ್ನು ಕೊಲ್ಲಲು ಹೊಂಚು ಹಾಕುತ್ತಿದ್ದರು. ಆಗ ಆ ಮುನಿ ದಂಪತಿಗಳ ಸಂಭಾಷಣೆಯನ್ನು ಕೇಳಿಸಿಕೊಂಡರು. ಮುನಿಸತಿ ಅರುಂಧತಿ, ”ಪ್ರಿಯ ವಲ್ಲಭ, ಈ ವನಪ್ರದೇಶ ಅದೆಷ್ಟು ಪ್ರಶಾಂತವಾಗಿದ್ದು, ತಂಪಿನಿಂದ ಕೂಡಿದ್ದು ಮನಕ್ಕೆ ಮುದ ನೀಡುತ್ತದೆಯಲ್ಲವೇ? ಈ ಪರಿಸರ ಆಪ್ಯಾಯಮಾನವಾಗಿದ್ದು, ಮನೋಲ್ಲಾಸದ ಜೊತೆಗೆ ಹರ್ಷ, ಚೈತನ್ಯವನ್ನು ನೀಡುತ್ತಿದೆ” ಎಂದು ಪ್ರಿಯ ಪತಿ ವಸಿಷ್ಠರಲ್ಲಿ ತನ್ನ ಸಂತೋಷ ಹಂಚಿಕೊಂಡಳು. ಅದಕ್ಕೆ ಪ್ರತಿಯಾಗಿ ವಸಿಷ್ಠರು, ”ಪ್ರಿಯ ಮಡದಿ, ನೀನು ಹೇಳುತ್ತಿರುವುದು ಸತ್ಯ ವಿಚಾರ. ಇಲ್ಲಿನ ಈ ಪ್ರಶಾಂತ, ಸುಮನೋಹರ ಪರಿಸರಕ್ಕೆ ಕಾರಣ ವಿಶ್ವಾಮಿತ್ರರ ತಪಸ್ಸಿನ ಪ್ರಭಾವ” ಎಂದು ವಿಶ್ವಾಮಿತ್ರರು ಗುಣಗಾನ ಮಾಡಿದರು.
ದಂಪತಿಗಳ ಸಂಭಾಷಣೆ ಕೇಳಿಸಿಕೊಂಡ ವಿಶ್ವಾಮಿತ್ರರಿಗೆ ಅಲ್ಲಿ ನಿಲ್ಲಲಾಗಲಿಲ್ಲ. ಕೈಯಲ್ಲಿದ್ದ ಖಡ್ಗ ಎಸೆದು, ಓಡಿ ಹೋಗಿ ವಸಿಷ್ಠರ ಕಾಲಿಗೆ ಅಡ್ಡಬಿದ್ದು, ಕ್ಷಮೆ ಯಾಚಿಸಿದರು. ವಸಿಷ್ಠರನ್ನು ಸಂಹರಿಸುವ ಯೋಚನೆಯಲ್ಲಿ ಬಂದಿದ್ದ ವಿಶ್ವಾಮಿತ್ರರು ಪಶ್ಛಾತ್ತಾಪದ ಉರಿಯಲ್ಲಿ ಬೆಂದುಹೋದರು. ಮಹರ್ಷಿ ವಸಿಷ್ಠರು ಪ್ರೀತಿಯಿಂದ ವಿಶ್ವಾಮಿತ್ರರ ಭುಜಹಿಡಿದು, ”ಬ್ರಹ್ಮರ್ಷಿ ವಿಶ್ವಾಮಿತ್ರರೇ, ಏಳಿ” ಎಂದು ಹರಸಿದರು. ವಿಶ್ವಾಮಿತ್ರರ ಆನಂದಕ್ಕೆ ಪಾರವೇ ಇರಲಿಲ್ಲ. ಕೊನೆಗೂ ವಸಿಷ್ಠರ ಬಾಯಿಂದ ಬ್ರಹ್ಮರ್ಷಿ ಪದ ಕೇಳಿಸಿಕೊಂಡದ್ದಕ್ಕೆ, ಹಲವು ವರ್ಷಗಳ ತಮ್ಮ ತಪಸ್ಸಿನ ಫಲ ಫಲಿಸಿದ್ದಕ್ಕೆ ಅತಿಶಯವಾದ ಆನಂದ ಅನುಭವಿಸಿದರು.
ಕೋಪ ಮತ್ತು ಅಸೂಯೆ ಎಂಬ ದುರ್ಗುಣ ತ್ಯಜಿಸಿದ್ದರಿಂದ ವಿಶ್ವಾಮಿತ್ರರು ಬ್ರಹ್ಮರ್ಷಿ ಬಿರುದಿಗೆ ಪಾತ್ರರಾದರು.
ಪ್ರಶ್ನೆಗಳು
- ರಾಜನಾಗಿದ್ದ ವಿಶ್ವಾಮಿತ್ರರಿಗೆ ವಸಿಷ್ಠರ ಬಗೆಗೆ ಏಕೆ ಅಸೂಯೆ ಉಂಟಾಯಿತು?
- ವಿಶ್ವಾಮಿತ್ರರು ತಮ್ಮ ತಪೋ ಮಹಿಮೆಯನ್ನು ಹೇಗೆ ಕಳೆದುಕೊಂಡರು?
- ಹೇಗೆ ಅವರು ಪರಿವರ್ತಿತರಾದರು?
- ವಿಶ್ವಾಮಿತ್ರರು ಯಾವಾಗ ಬ್ರಹ್ಮರ್ಷಿ ಬಿರುದಿಗೆ ಪಾತ್ರರಾದರು?
[ಮೂಲ:- ಮಕ್ಕಳಿಗಾಗಿ ಕಥೆಗಳು-೨
ಶ್ರೀ ಸತ್ಯಸಾಯಿ ಪುಸ್ತಕ ಪ್ರಕಾಶನ, ಪ್ರಶಾಂತಿ ನಿಲಯಂ]