ಕಳೆದು ಹೋದದ್ದು ಪುನಃ ದೊರೆಯಿತು
ಫಾದರ್ ಲೆವಿ ಸಂತೋಷದಿಂದ ಬದುಕುತ್ತಿದ್ದ ಒಬ್ಬ ಸಜ್ಜನ. ಜೀವಮಾನವೆಲ್ಲ ಕಷ್ಟಪಟ್ಟು ದುಡಿದು, ಒಂದು ದೊಡ್ಡ ಜಮೀನಿಗೆ ಒಡೆಯನೂ ಆದ. ಈ ಸಂಪತ್ತಿನೊಂದಿಗೆ ಅವನಿಗೆ ಇಬ್ಬರು ಗಂಡು ಮಕ್ಕಳು ಇದ್ದರು. ಅವರಿಗೆ ಮದುವೆ ಮಾಡಿ, ಜೀವನದಲ್ಲಿ ನೆಲೆಗೊಳ್ಳುವಂತೆ ಮಾಡಬೇಕೆಂದು ಲೆವಿ ಕಾಯುತ್ತಿದ್ದ. ಮುಂದೆ ಮೊಮ್ಮಕ್ಕಳನ್ನು ಹೊಂದಿ, ಆನಂದದಿಂದ ಜೀವಿಸಬೇಕೆಂದು ಅವನ ಬಯಕೆ. ತನ್ನ ಜಮೀನು, ಕುರಿಗಳು, ದನ-ಕರುಗಳು, ದ್ರಾಕ್ಷಿ ತೋಟ ಮೊದಲಾದವುಗಳನ್ನು ನೋಡಿ, ಅವನಿಗೆ ಬಹಳ ಹೆಮ್ಮೆ ಮತ್ತು ಸಂತೋಷವೆನಿಸುತ್ತಿತ್ತು.
ಆದರೆ ಲೆವಿಯ ಈ ಸಂತೋಷವು ಬಹಳ ಕಾಲ ಉಳಿಯಲಿಲ್ಲ. ಅವನ ಹಿರಿಯ ಮಗ ಇರುವುದರಲ್ಲೇ ತೃಪ್ತಿ ಪಡುತ್ತಾ, ಪ್ರತಿದಿನವೂ ಜಮೀನಿನಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದ. ಆದರೆ ಲೆವಿಯ ಚಿಕ್ಕ ಮಗನಿಗಾದರೋ, ಅದಾವುದರಲ್ಲೂ ಆಸಕ್ತಿಯಿರಲಿಲ್ಲ. ಆ ಕೆಲಸವೆಂದರೆ ಅವನಿಗೆ ತುಂಬಾ ಬೇಸರ. ಜಮೀನು, ತೋಟ ಮೊದಲಾದವು ನೀರಸವೆನಿಸುತ್ತಿತ್ತು. ಅವು ಯಾವ ಉತ್ಸಾಹ, ಕುತೂಹಲ ಮತ್ತು ಬದಲಾವಣೆಗಳನ್ನೂ ಕೊಡುತ್ತಿಲ್ಲವೆಂದು ಅವನಿಗೆ ಅನ್ನಿಸುತ್ತಿತ್ತು. ಸದಾಕಾಲ ಚಟುವಟಿಕೆಗಳಿಂದ, ಮೋಜಿನಿಂದ ತುಂಬಿರುವ ದೊಡ್ಡ ನಗರಗಳಿಗೆ ಹೋಗಿ ಅಲ್ಲಿದ್ದರೆ, ಸಂತೋಷವಾಗಿರಬಹುದೆಂದು ಅವನಿಗೆ ಅನ್ನಿಸತೊಡಗಿತು. ಹಾಗಾಗಿ, ಒಂದು ತೀರ್ಮಾನದೊಡನೆ, ತಂದೆಯ ಬಳಿಗೆ ಬಂದು ಹೇಳಿದ, “ತಂದೆಯೇ! ನನ್ನ ಪಾಲಿಗೆ ಬರಬೇಕಾದ ಹಣವನ್ನು, ನನಗೆ ಕೊಟ್ಟುಬಿಡಿ. ನನಗೀಗ ಅದು ಬೇಕಾಗಿದೆ. ನಾನು ಮನೆಬಿಟ್ಟು ದೂರ ಹೋಗಲು ನಿರ್ಧರಿಸಿದ್ದೇನೆ,” ಎಂದು.
ತಂದೆ ಲೆವಿಗೆ ಇದನ್ನು ಕೇಳಿ ಬಹಳ ದುಃಖವಾಯಿತು. ಯುವಕ ಸೈಮನ್ ಗೆ, ಹಣವು ಸದಾ ಕಾಲ ಸಂತೋಷ ಕೊಡಲಾರದು, ಎಂದು ಅವನಿಗೆ ತಿಳಿದಿತ್ತು. ಆದರೆ, ಮಗನ ಮೇಲಿನ ಅಪಾರ ಪ್ರೀತಿಯಿಂದಾಗಿ, ಅವನನ್ನು ಮನೆಬಿಟ್ಟು ಹೋಗಕೂಡದೆಂದು ಒತ್ತಾಯ ಮಾಡಲು ಇಷ್ಟಪಡಲಿಲ್ಲ. ಅಷ್ಟೇ ಅಲ್ಲದೇ, ಸೈಮನ್ನನು ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳಲು ಕಲಿಯಲಿ, ಎಂದೂ ಸಹ ಅನ್ನಿಸಿತು. ಮಗನ ಮೇಲಿನ ಅಪಾರ ಪ್ರೀತಿ ಮತ್ತು ತನ್ನ ಅನುಭವ ಜ್ಞಾನದಿಂದಾಗಿ, ಅವನನ್ನು ತಡೆಯಲು ಲೆವಿಯು ಪ್ರಯತ್ನಿಸಲಿಲ್ಲ.
ತಂದೆ ಲೆವಿಯು, ತನ್ನ ಜಮೀನಿನಲ್ಲಿ ಸ್ವಲ್ಪ ಭಾಗ, ಕುರಿಗಳು ಮತ್ತು ದನಕರುಗಳು,- ಇವೆಲ್ಲವನ್ನೂ ಸಮವಾಗಿ ಮೂರು ಪಾಲು ಮಾಡಿ, ಕಾನೂನಿನ ಪ್ರಕಾರವಾಗಿ ಸೈಮನ್ ಗೆ ಸೇರಬೇಕಾದುದನ್ನು ಅವನಿಗೆ ಕೊಟ್ಟದ್ದು ಮಾತ್ರವಲ್ಲದೇ, ಬೆಳ್ಳಿ ನಾಣ್ಯಗಳು ತುಂಬಿದ್ದ ಒಂದು ಚೀಲವನ್ನೂ ಸಹ ಕೊಟ್ಟ.
ಸೈಮನ್ ಗಾದರೋ, ಆದಷ್ಟು ಬೇಗ ಅಲ್ಲಿಂದ ಹೊರಟು ಬಿಡುವ ಆತುರ. ಒಳ್ಳೆಯ ಉಡುಪನ್ನು ಧರಿಸಿ, ಬೆಳ್ಳಿ ನಾಣ್ಯಗಳ ಚೀಲವನ್ನು ಸೊಂಟದೊಳಗೆ ಭದ್ರವಾಗಿ ಸೇರಿಸಿ, ತಂದೆಗೆ ಹೋಗಿಬರುತ್ತೇನೆಂದು ಸಹ ಹೇಳದೇ, ಅಲ್ಲಿಂದ ಅವಸರವಾಗಿ ಹೊರಟು ಬಿಟ್ಟ. ಅವನು ದೂರದಲ್ಲಿ ಕಣ್ಮರೆಯಾಗುವವರೆಗೂ, ತಂದೆ ಲೆವಿ ನೋಡುತ್ತಲೇ ನಿಂತಿದ್ದ. ಮಗನು ತನ್ನಿಂದ ದೂರವಾದ ನೋವು ಅವನನ್ನು ಕಾಡಿತು. ಆದರೆ, ಅವನು ಮತ್ತೆ ಹಿಂತಿರುಗಿ ಬರಬಹುದೆಂಬ ನಿರೀಕ್ಷೆಯಿಂದ ಕಾಯುವುದನ್ನು ಬಿಟ್ಟರೇ , ಬೇರೇನೂ ಮಾಡಲಾಗದೇ ಹೋದ.
ಆ ಯುವಕ ಸೈಮನ್ ನ, ಬಳಿ ಅವನ ತಂದೆ ಕೊಟ್ಟಿದ್ದ ಹಣವು, ಅನೇಕ ಸ್ನೇಹಿತರನ್ನು ಅವನ ಕಡೆಗೆ ಆಕರ್ಷಿಸಿತು. ಅವರುಗಳ ದೃಷ್ಟಿಯಲ್ಲಿ, ಜೇವನವೆಂದರೆ, ನೃತ್ಯ, ಸಂಗೀತ, ಔತಣ, ಕುಡಿತಗಳ ಉತ್ಸಾಹ ಭರಿತ ಸಂತೋಷ ಕೂಟಗಳನ್ನು ಏರ್ಪಡಿಸಿ ಮೋಜು ಮಾಡುವುದು.
ಇಂತಹ ಮೋಜಿನ ಜೀವನ ನಡೆಸುತ್ತಾ, ಸೈಮನ್ನನು ತನ್ನ ತಂದೆಯು ಕಷ್ಟಪಟ್ಟು ಗಳಿಸಿದ್ದ ಹಣವನ್ನು ದುಂದು ವೆಚ್ಚ ಮಾಡತೊಡಗಿದ.
ಮೊದಲಿಗೆ ಅದರ ಬಗ್ಗೆ ಸೈಮನ್ ಚಿಂತಿಸಲಿಲ್ಲ. ತನ್ನ ಸ್ನೇಹಿತರಿಗಾಗಿ ಅದೆಷ್ಟು ಹಣವನ್ನು ಅವನು ಖರ್ಚುಮಾಡಿ ಅವರನ್ನು ಸಂತೋಷಪಡಿಸಿದ್ದ! ಹಾಗಾಗಿ ಸಮಯ ಬಂದಾಗ, ಅವರೂ ಸಹ ತನ್ನನ್ನು ನೋಡಿಕೊಳ್ಳುತ್ತಾರೆ ಎಂದು ನಂಬಿದ. ಆದರೆ, ಅವನು ತನ್ನ ಸ್ನೇಹಿತರ ಬಳಿ ಸಹಾಯ ಕೇಳಲು ಹೋದಾಗ, ಅವನಿಗೆ ದೊಡ್ಡ ಆಘಾತವೇ ಕಾದಿತ್ತು. ತಮಗೂ, ಅವನಿಗೂ ಯಾವ ಸಂಬಂಧವೂ ಇಲ್ಲವೆಂದು ಹೇಳಿ, ಅವನನ್ನು ಓಡಿಸಿದರು. ಹಣವೂ ಹೋಯಿತು, ಸ್ನೇಹಿತರೆನಿಸಿಕೊಂಡವರೂ ದೂರವಾದರು. ತನ್ನ ಬಳಿ ಇದ್ದ ಒಳ್ಳೆಯ ಉಡುಪುಗಳನ್ನೂ ಸಹ ಮಾರಿದ, ಕೊನೆಗೆ ಕೈಯಲ್ಲಿ ಏನೂ ಉಳಿಯದಂತಾಯಿತು.
ನಗರದ ರಸ್ತೆಗಳಲ್ಲಿ ಸುತ್ತುತ್ತಿದ್ದ ಸೈಮನ್ನನ ಪರಿಸ್ಥಿತಿ ಬಹಳ ಶೋಚನೀಯವಾಯಿತು. ಅಲ್ಲಿ ಅವನಿಗೆ ತನ್ನವರು ಎಂದು ಯಾರೂ ಇರಲಿಲ್ಲ, ಸಹಾಯಕ್ಕಾಗಿ ಯಾರನ್ನೂ ಎದುರು ನೋಡುವಂತಿರಲಿಲ್ಲ. ಯಾವುದೋ ದೂರದ ಪ್ರದೇಶದಲ್ಲಿ, ಅವನೊಬ್ಬ ಪರಕೀಯನಾದ. ಹಣ, ಸ್ನೇಹಿತರು ಯಾರೂ ಇಲ್ಲದ ಒಬ್ಬಂಟಿಗನಾದ.
ಹಾಗಾಗಿ, ಅವನು ಆ ನಗರವನ್ನು ಬಿಟ್ಟು ಹೊರಡಲೇಬೇಕಾಯಿತು. ಹಳ್ಳಿಗಳ ಕಡೆ ಹೋದರೆ, ಅಲ್ಲಿ ಯಾರಾದರೂ ರೈತರು ತನಗೆ ಕೆಲಸವನ್ನು ಕೊಡಬಹುದು, ಜಮೀನಿನಲ್ಲಿ ಕೆಲಸ ಮಾಡಿದ ಅನುಭವವೂ ತನಗಿರುವುದರಿಂದ ಚೆನ್ನಾಗಿ ದುಡಿಯಬಹುದು, ಎಂದು ಅವನು ಭಾವಿಸಿದ. ಆದರೆ ಅಲ್ಲೂ ಅವನಿಗೆ ಯಾರೂ ಕೆಲಸಕೊಡಲಿಲ್ಲ. ಚಿಂದಿ ಬಟ್ಟೆಗಳನ್ನು ಹಾಕಿಕೊಂಡು, ಹಸಿವಿನಿಂದ ಅಲೆಯುತ್ತಿದ್ದ ಅವನನ್ನು ಕಂಡು, ಕೊನೆಗೂ ಒಬ್ಬ ರೈತನಿಗೆ ಕನಿಕರವೆನಿಸಿ, ತುಂಬಾ ಕೀಳುದರ್ಜೆಯದೆಂದು ಭಾವಿಸುತ್ತಿದ್ದ ಹಂದಿಕಾಯುವ ಕೆಲಸವನ್ನು ಅವನಿಗೆ ಕೊಟ್ಟ. ಆದರೆ ಹಸಿವಿನ ಬಾಧೆಯಿಂದಾಗಿ, ಅವನು ಅದಕ್ಕೆ ಒಪ್ಪಿಕೊಳ್ಳದೇ ಬೇರೆ ದಾರಿಯಿರಲಿಲ್ಲ. ಕ್ಯಾರಬ್ ಮರದಲ್ಲಿ ಬೆಳೆದ ಕಾಯಿಗಳಿಂದ ಸುಲಿದ ಒರಟು ಬೀಜಗಳನ್ನು ಹಂದಿಗಳಿಗೆ ಆಹಾರವಾಗಿ ಕೊಡಲಾಗುತ್ತಿತ್ತು. ಇವು ಸಿಹಿಯಾಗಿ, ಬಟಾಣಿ ಕಾಳುಗಳ ಹಾಗಿರುತ್ತಿತ್ತು. ಸೈಮನ್ನನ ಹಸಿವಿನ ತೀವ್ರತೆಯು ಎಷ್ಟಿತ್ತೆಂದರೆ, ಅವನು ಹಂದಿಯ ಆಹಾರವನ್ನು ಸಹ ತಿಂದು ಹೊಟ್ಟೆ ತುಂಬಿಸಿಕೊಳ್ಳಲು ತಯಾರಿದ್ದ.
ಹಂದಿಗಳನ್ನು ಕಾಯುತ್ತಿರುವಾಗ, ಸೈಮನ್ ಗೆ ಆಲೋಚಿಸಲು ಸ್ವಲ್ಪ ಸಮಯ ದೊರೆಯಿತು. ಅವನ ಆಲೋಚನೆಗಳು ಹೀಗೆ ಸಾಗಿದವು, ‘ಓ! ನಾನೆಂತಹ ಮೂರ್ಖ! ನನ್ನ ತಂದೆಯ ಬಳಿ ಕೆಲಸಮಾಡುವವರೂ ಸಹ ನನಗಿಂತ ಒಳ್ಳೆಯ ಸ್ಥಿತಿಯಲ್ಲಿದ್ದಾರೆ. ನಾನು ನನ್ನ ತಂದೆಯ ಬಳಿಗೆ ವಾಪಸ್ಸು ಹೋಗಬೇಕು, ನಾನು ದೇವರಿಗೆ ದ್ರೋಹ ಮಾಡಿದವನು, ಹಾಗೂ ಅವರನ್ನು ಗೌರವಿಸದ, ಅವಿಧೇಯ ಮತ್ತು ಕೆಟ್ಟ ಮಗನೆಂದು ಒಪ್ಪಿಕೊಳ್ಳಬೇಕು. ನಾನೀಗಾಗಲೇ ನನ್ನ ಭಾಗದ ಆಸ್ತಿಯನ್ನು ತೆಗೆದುಕೊಂಡು ಬಿಟ್ಟಿರುವುದರಿಂದ, ತಂದೆಯು ನನ್ನನ್ನು ಮಗನೆಂದು ಸ್ವೀಕರಿಸುತ್ತಾನೆ ಎಂದು ಎದುರು ನೋಡಲಾಗುವುದಿಲ್ಲ. ಹಾಗಾಗಿ, “ತಂದೆಯೇ! ನಾನು ನಿಮ್ಮ ಮಗನೆನ್ನಿಸಿಕೊಳ್ಳಲು ಯೋಗ್ಯನಲ್ಲ. ನಿಮ್ಮ ಕೈಕೆಳಗೆ ಒಬ್ಬ ಕೆಲಸದಾಳಾಗಿ ನನ್ನನ್ನು ತೆಗೆದು ಕೊಳ್ಳಿ.” ಎಂದು ಪ್ರಾರ್ಥಿಸಬೇಕು.’
ಹೀಗೆ ಆಲೋಚಿಸಿದ ಸೈಮನ್, ಬಹು ದೂರದಲ್ಲಿದ್ದ ತನ್ನ ಊರಿನ ಕಡೆಗೆ ಕೂಡಲೇ ವಾಪಸ್ಸು ಹೊರಟ. ಧೂಳು ತುಂಬಿದ ರಸ್ತೆಗಳಲ್ಲಿ ನಡೆಯುತ್ತಾ, ದಾರಿಯಲ್ಲಿ ಸಿಕ್ಕಿದ ಚೂರುಪಾರು ಆಹಾರವನ್ನು ತಿನ್ನುತ್ತಾ, ರಾತ್ರಿಯಲ್ಲಿ ರಸ್ತೆಯ ಬದಿಯಲ್ಲಿ ಮಲಗುತ್ತಾ ಪ್ರಯಾಣ ಮುಂದುವರೆಸಿದ. ಧರಿಸಿದ ಚಿಂದಿ ಬಟ್ಟೆಗಳಲ್ಲಿ ಕೊಳಕು ಬಿಕ್ಷುಕನಂತೆ ಕಾಣುತ್ತಿದ್ದ ಅವನನ್ನು, ತಂದೆ ಲೆವಿಯ ಹೆಮ್ಮೆಯ ಪುತ್ರನೆಂದು ಯಾರೂ ಗುರುತಿಸಲಾಗುತ್ತಿರಲಿಲ್ಲ.
ಆದರೆ ಅಂತಹ ಒಬ್ಬ ವ್ಯಕ್ತಿ ಇದ್ದ, ಅವನೇ ತಂದೆ ಲೆವಿ. ತನ್ನ ಚಿಕ್ಕ ಮಗನು ತನ್ನಿಂದ ದೂರವಾದಾಗಲಿಂದ, ಆ ದುಃಖದಲ್ಲೇ ಕೊರಗುತ್ತಿದ್ದ. ಪ್ರತಿದಿನವೂ ತನ್ನ ಮನೆಯ ಚಾವಣಿಯ ಮೇಲೆ ಕುಳಿತು, ದೂರದವರೆಗೆ ನೋಡುತ್ತಾ, ತನ್ನ ಮಗನು ಹಿಂತಿರುಗಿಬರುವನೆಂಬ ಒಂದು ನಂಬಿಕೆಯಿಂದ ಕಾಯುತ್ತಿದ್ದ. ಒಂದು ದಿನ, ಊರಿನ ಕಡೆಗೆ ಕುಂಟುತ್ತಾ ನಡೆದು ಬರುತ್ತಿದ್ದ ವ್ಯಕ್ತಿಯು ತನ್ನ ಮಗನೇ ಎಂದು, ಆ ತಂದೆಯ ಹೃದಯ ಕೂಡಲೇ ಗುರುತಿಸಿತು. ವೇಗವಾಗಿ ಕೆಳಗಿಳಿದು ಬಂದ ಲೆವಿ, ತನ್ನ ಅಂತಸ್ತು, ಸ್ಥಾನಮಾನಗಳನ್ನು ಲೆಕ್ಕಿಸದೇ, ರಸ್ತೆಯಲ್ಲಿ ವೇಗವಾಗಿ ಓಡಿದ. ಸೈಮನ್ ನನ್ನು ಬಿಗಿಯಾಗಿ ಅಪ್ಪಿಕೊಂಡು, ಆನಂದದಿಂದ ಕಣ್ಣೇರು ಹಾಕತೊಡಗಿದ.
ಸೈಮನ್ ತನ್ನ ತಂದೆಯಿಂದ ಇಂತಹ ಸ್ವಾಗತವನ್ನು ನಿರೀಕ್ಷಿಸಿರಲಿಲ್ಲ. ತಾನೆಂತಹ ಮೂರ್ಖನೆಂದು ಹೇಳತೊಡಗಿದ, “ತಂದೆಯೇ, ನಾನು ದೇವರೆದುರು ಬಹಳ ಪಾಪ ಮಾಡಿರುವೆ. ನಿಮಗೆ ಅವಿಧೇಯನಾಗಿದ್ದು, ಅಗೌರವ ತೋರಿಸಿದೆ. ನಿಮ್ಮ ಮಗನೆಂದು ಕರೆಸಿಕೊಳ್ಳಲು ನಾನು ಯೋಗ್ಯನಲ್ಲ. ನಿಮ್ಮ ಕೆಲಸದವರಲ್ಲಿ ಒಬ್ಬನಾಗಿ ಇರಲು ನನಗೆ ಅವಕಾಶ ಕೊಡಿ.”
ಆದರೆ, ತಂದೆ ಲೆವಿಯು ಅದಾವುದನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಕೈತಟ್ಟಿ ಸೇವಕರನ್ನು ಕರೆದು, ಅವರಿಗೆ ಆಜ್ಞೆ ಮಾಡಿದ, “ಬೇಗ ಹೋಗಿ, ನನ್ನ ಮಗನು ಮನೆಗೆ ಹಿಂತಿರುಗಿ ಬಂದಿದ್ದಾನೆ. ಅವನಿಗೆ ಅತ್ಯಂತ ಒಳ್ಳೆಯ ಉಡುಪನ್ನು ತನ್ನಿ. ನನ್ನ ಒಂದು ಉಂಗುರವನ್ನೂ ಸಹ ತನ್ನಿ. ಅದು ಅವನು ನನ್ನ ಅಧಿಕಾರಿ ಎಂದು ಸೂಚಿಸಲಿ. ಒಂದು ಜೊತೆ ಒಳ್ಳೆಯ ಚಪ್ಪಲಿಯನ್ನೂ ತನ್ನಿ. ಬರಿಗಾಲಲ್ಲಿ ಅವನು ಹೀಗೆ ಓಡಾಡುವುದನ್ನು ಸಹಿಸಲು ಆಗದು. ಚೆನ್ನಾಗಿ ಕೊಬ್ಬಿರುವ ಕರುವನ್ನು ಕಡಿದು, ಒಳ್ಳೆಯ ರುಚಿಕರ ಭಕ್ಷ ಭೋಜ್ಯಗಳನ್ನು ತಯಾರಿಸಿ. ನಾವಿಂದು ಎಲ್ಲರೂ ಒಂದಾಗಿ ಊಟಮಾಡಿ ಆನಂದಿಸೋಣ. ಮರಣ ಹೊಂದಿದನೆಂದು ಭಾವಿಸಿದ ಮಗನು ಜೀವಂತವಾಗಿ ಬಂದಿದ್ದಾನೆ. ಕಳೆದು ಹೋದವನು ಪುನಃ ಸಿಕ್ಕಿದ್ದಾನೆ,” ಎಂದು.
ಒಡೆಯನ ಆಜ್ಞೆಯನ್ನು ನೆರವೇರಿಸಲು ಸೇವಕರು ಆತುರದಿಂದ ಓಡಿದರು. ಸ್ವಲ್ಪ ಸಮಯದಲ್ಲೇ ಈ ಸುದ್ದಿಯು ಮನೆಯವರಿಗೆಲ್ಲಾ ತಿಳಿಯಿತು. ಅವರೆಲ್ಲರೂ ಸಹ ತಂದೆ ಲೆವಿಯ ಆನಂದದಲ್ಲಿ ಭಾಗಿಗಳಾದರು. ಅದೆಂತಹ ಅಪೂರ್ವ ಔತಣ! ಬಹಳ ಆನಂದದಿಂದ ಊಟ ಹಾಗೂ ಪಾನೀಯಗಳನ್ನು ಸೇವಿಸಿದ ನಂತರ, ವಾದ್ಯಗಾರರು ಕೊಳಲನ್ನು ನುಡಿಸತೊಡಗಿದರು. ಅದಕ್ಕೆ ತಕ್ಕಹಾಗೆ, ಎಲ್ಲರೂ ಕೈತಟ್ಟುತ್ತಾ, ಹಾಡುತ್ತಾ ವರ್ತುಲಾಕಾರದಲ್ಲಿ ನೃತ್ಯಮಾಡಲು ಆರಂಭಿಸಿದರು. ಆ ಸಂತೋಷದಲ್ಲಿ, ಅವರು ಅದೆಷ್ಟು ಗದ್ದಲ ಮಾಡುತ್ತಿದ್ದರೆಂದರೆ, ಅದರ ಸದ್ದು ಬಹು ದೂರದವರೆಗೆ ಕೇಳಿಸುತ್ತಿತ್ತು. ಹಿರಿಯ ಮಗ ಜೂಡ್, ದಿನವೆಲ್ಲಾ ಹೊಲದಲ್ಲಿ ದುಡಿದು, ಬಹುವಾಗಿ ದಣಿದು ಮನೆಗೆ ಹಿಂತಿರುಗಿ ಬರುತ್ತಿದ್ದ. ಮನೆಯನ್ನು ಸಮೀಪಿಸಿದಾಗ ಆ ಗದ್ದಲ, ಸಂಗೀತ, ನೃತ್ಯಗಳ ಸದ್ದು ಹೆಚ್ಚಾಗಿ, ಅಲ್ಲಿದ್ದ ಸೇವಕರನ್ನು ಕಾರಣವೇನೆಂದು ಕೇಳಿದ. ಸೈಮನ್ನನು ಹಿಂತಿರುಗಿ ಬಂದಿದ್ದಾನೆಂದೂ, ಆ ಸಂತೋಷಕ್ಕಾಗಿಯೇ, ಅವನಿಗಾಗಿ ಆ ಔತಣಕೂಟವೆಂದೂ ಅವರಿಂದ ತಿಳಿಯಿತು. ಅದನ್ನು ಕೇಳಿದ ಜೂಡ್ ಗೆ ಪ್ರಚಂಡ ಕೋಪವು ಬಂದಿತು.
ಸೇವಕರು ಓಡಿಹೋಗಿ ಜೂಡ್ ನು ಮನೆಗೆ ಬಂದಿರುವ ವಿಷಯವನ್ನು ತಂದೆ ಲೆವಿಗೆ ತಿಳಿಸಿದರು. “ಅವನೂ ಬಂದು ಆ ಔತಣ ಕೂಟದಲ್ಲಿ ಭಾಗವಹಿಸಿ, ಗೌರವವನ್ನು ಸ್ವೀಕರಿಸಬೇಕೆಂದು ತಿಳಿಸಿ,” ಎಂದು ಲೆವಿಯು ಅವರಿಗೆ ಆಜ್ಞೆ ಮಾಡಿದ. ಅದನ್ನು ತಿಳಿಸಿದ ಸೇವಕರ ಮೇಲೆ ಜೂಡ್ ಮತ್ತಷ್ಟು ಕೋಪದಿಂದ ಕೂಗಾಡಿದ, “ಆ ಅಪ್ರಯೋಜಕ ಮಗ ಹಿಂತಿರುಗಿ ಬಂದಿದ್ದನೆಂದು, ನಾನೂ ಸಹ ಕುಣಿದಾಡಬೇಕೆ? ಆ ಸೋಮಾರಿ, ಅಯೋಗ್ಯನನ್ನು ನಾನು ಗೌರವಿಸಿ ಸಂತೋಷ ಪಡಬೇಕೆ?” ಎಂದು.
ಸೇವಕರು ಜೂಡ್ ಹೇಳಿದುದನ್ನು ಒಡೆಯನಿಗೆ ಹೋಗಿ ತಿಳಿಸಿದರು. ಆಗ, ತನ್ನ ಹಿರಿಯ ಮಗನನ್ನು ಕರೆತರಲು, ಸ್ವತಃ ಲೆವಿ ಯೇ ಹೊರಗೆ ಹೋಗಿ, ಅವನನ್ನು ಪ್ರೀತಿಯಿಂದ ಮಾತನಾಡಿಸಿ, ಕರೆದ. ಆದರೆ, ಬಹಳ ಕೋಪದಲ್ಲಿದ್ದ ಜೂಡ್, ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಆ ಕೋಪದಲ್ಲಿ, ತಂದೆಯೊಡನೆ ಗೌರವದಿಂದ ಮಾತಾಡುವುದನ್ನು ಸಹ ಮರೆತ. ತಂದೆಯು ಎಷ್ಟೇ ವಿನಂತಿಸಿದರೂ ಅವನ ಕೋಪ ಇಳಿಯಲಿಲ್ಲ. “ನಾನು ಇಷ್ಟು ವರ್ಷಗಳ ಕಾಲ, ಹೊಲದಲ್ಲಿ ಆಳಾಗಿ ದುಡಿದೆ. ನಿಮಗೆ ವಿಧೇಯನಾಗಿದ್ದು, ಸೇವೆ ಮಾಡಿದೆ. ಆದರೆ, ನೀವೆಂದಾದರೂ ನನಗಾಗಿ ಇಂತಹ ಒಂದು ಔತಣ ಕೂಟವನ್ನು ಏರ್ಪಡಿಸಿದಿರಾ? ನನ್ನ ಸ್ನೇಹಿತರೊಡನೆ ಆನಂದವಾಗಿರಲು ಅವಕಾಶ ಕೊಟ್ಟಿರಾ? ಇಲ್ಲ! ಆದರೆ ಇಂದು ಆ ನಿಷ್ಪ್ರಯೋಜಕ ಮಗ ಬಂದನೆಂದು, ನೀವೇನು ಮಾಡಿದಿರಿ? ಅವನಿಗಾಗಿ ಇಂತಹ ದೊಡ್ಡ ಔತಣ. ಅವನಾದರೋ ನಿಮ್ಮ ಹಣವನ್ನು ನೀರಿನಂತೆ ವೆಚ್ಚಮಾಡಿ, ನಗರದಲ್ಲಿ ಮೋಜು ಮಾಡಿದವನು,” ಎಂದು ಜೂಡ್, ತಂದೆಯ ಮೇಲೆ ಕೋಪದಿಂದ ಕಿರುಚುತ್ತಾ, ಆರೋಪಗಳನ್ನು ಮಾಡುತ್ತಾ ಹೋದ.
ತಂದೆ ಲೆವಿಗೆ ಸೈಮನ್ ಮೇಲಿದ್ದಷ್ಟೇ ಪ್ರೀತಿಯು ಜೂಡ್ ಮೇಲೂ ಇತ್ತು. ಜೂಡ್ ನ ಮನಸ್ಥಿತಿಯನ್ನೂ, ಕೋಪದ ಕಾರಣವನ್ನೂ ಅರ್ಥ ಮಾಡಿಕೊಂಡ ಲೆವಿಯು ಅದಕ್ಕೆ ಒರಟಾಗಿ ಉತ್ತರ ಕೊಡಲಿಲ್ಲ. ಅದಕ್ಕೆ ಬದಲಾಗಿ ಜೂಡ್ ನ ಹೆಗಲ ಮೇಲೆ ಪ್ರೀತಿಯಿಂದ ಕೈಹಾಕಿ, ಅವನನ್ನು ಸಂತೈಸುತ್ತಾ ಹೇಳಿದ, “ಜೂಡ್! ನೀನು ನನ್ನ ಪ್ರೀತಿಯ ಮಗ. ನೀನು ಸದಾ ನನ್ನೊಡನೆಯೇ ಇದ್ದೀಯೆ. ನೀನೇ ನನ್ನ ಭರವಸೆ. ನನಗಿರುವುದೆಲ್ಲವೂ ನಿನ್ನದೇ. ಸೈಮನ್ ಗೆ ಇನ್ನು ಅದರಲ್ಲಿ ಯಾವ ಭಾಗವೂ ಇಲ್ಲ. ಆದರೆ, ಅವನೂ ಸಹ, ನಿನ್ನಂತೆಯೇ ನನ್ನ ಮಗ. ಅವನನ್ನು ಸ್ವಾಗತಿಸುವುದು ಸರಿಯಾದ ಕ್ರಮ. ನೀನಿರುವಂತೆ, ಅವನೂ ಸಹ ನನ್ನ ಜೊತೆಯಲ್ಲಿ ಇದ್ದರೆ, ಅದರಿಂದ ನನಗೆ ಬಹಳ ಸಂತೋಷವಾಗುವುದು. ಮರಣ ಹೊಂದಿರುವನೆಂದು ಭಾವಿಸಿದ ವ್ಯಕ್ತಿ ಪುನಃ ಬದುಕಿ ಬಂದಂತೆ. ಅವನಿಲ್ಲಿಂದ ಹೊರಟುಹೋದಾಗ, ಅವನನ್ನು ಜೀವಂತವಾಗಿ ಪುನಃ ನೋಡುವೆನೆಂಬ ನಂಬಿಕೆಯು ನನಗಿರಲಿಲ್ಲ. ಸತ್ತವನು ಬದುಕಿ ಬಂದಿದ್ದಾನೆ, ಕಳೆದು ಹೋದವನು ಮತ್ತೆ ದೊರೆತಿದ್ದಾನೆ. ನನ್ನ ಪ್ರೀತಿಯ ಜೂಡ್! ಒಳಗೆ ಬಂದು ಔತಣದಲ್ಲಿ ಭಾಗವಹಿಸಿ, ಆ ಸಂತೋಷವನ್ನು ಹಂಚಿಕೊ,” ಎಂದು.
ಪ್ರಶ್ನೆಗಳು
- ತಂದೆ ಲೆವಿಯ ಕಿರಿಯ ಮಗನ ಸ್ವಭಾವವನ್ನು ವಿವರಿಸಿ.
- ಆಸ್ತಿಯಲ್ಲಿ ತನ್ನ ಭಾಗವು ಬೇಕೆಂದು ಅವನು ಕೇಳಿದಾಗ, ತಂದೆ ಲೆವಿಯು ಏನು ಮಾಡಿದನು?
- ಕಳೆದುಹೋಗಿದ್ದ ಮಗನು, ತಂದೆ ಲೆವಿಗೆ ಮತ್ತೆ ಯಾವಾಗ ಸಿಕ್ಕಿದನು? ಆಗ ಲೆವಿಯು ಏನು ಮಾಡಿದನು?
- ಲೆವಿಯ ಹಿರಿಯ ಮಗನು ತಂದೆಯ ಮೇಲೆ ಏಕೆ ಬಹಳ ಸಿಟ್ಟು ಮಾಡಿಕೊಂಡನು? ಅದಕ್ಕೆ ಲೆವಿಯು ಕೊಟ್ಟ ಉತ್ತರವೇನು?
[ಮೂಲ :- ಮಕ್ಕಳಿಗಾಗಿ ಕಥೆಗಳು – ೨
ಶ್ರೀ ಸತ್ಯಸಾಯಿ ಪುಸ್ತಕ ಪ್ರಕಾಶನ, ಪ್ರಶಾಂತಿ ನಿಲಯಂ]