ಜ್ಯೋತಿ ಧ್ಯಾನ – ಪ್ರದರ್ಶನ
ಜ್ಯೋತಿ ಧ್ಯಾನ – ಪ್ರದರ್ಶನ
ಜ್ಯೋತಿ ಶಾಶ್ವತ ಪರಿಪೂರ್ಣ ಭಗವಂತನ ಸಂಕೇತ.
ಧ್ಯಾನಮಾಡಲು ಒಂದು ನಿರ್ದಿಷ್ಟ ಸಮಯ ಹಾಗು ನಿರ್ದಿಷ್ಟ ಸ್ಥಳವಿರಬೇಕು. ಮುಂಜಾನೆ ೪ ರಿಂದ ೬ ಗಂಟೆ, ಬ್ರಹ್ಮ ಮುಹೂರ್ತ ಸಮಯ. ಅತ್ಯಂತ ಉತ್ತಮ. ಏಕೆಂದರೆ ಆಗ ಪರಿಸರ ಶಾಂತವಾಗಿರುತ್ತದೆ ಹಾಗು ದೇಹ ಕೂಡ ವಿಶ್ರಾಂತವಾಗಿರುತ್ತದೆ. ಸಾಯಂಕಾಲ ಮುಸ್ಸಂಜೆಯ ಸಮಯ ಕೂಡ ಧ್ಯಾನಕ್ಕೆ ಸೂಕ್ತವಾಗಿರುತ್ತದೆ.
ಸ್ಥಿರ ಹಾಗೂ ನೇರವಾಗಿರುವ ಪ್ರಕಾಶಮಾನವಾದ ಜ್ವಾಲೆ ಇರುವ ದೀಪವನ್ನು ನಿಮ್ಮ ಮುಂದೆ ಇಟ್ಟುಕೊಳ್ಳಿರಿ.
ಮಕ್ಕಳು ನೇರವಾಗಿ, ವಿಶ್ರಾಂತಿ ಸ್ಥಿತಿಯಲ್ಲಿ ಕುಳಿತುಕೊಳ್ಳಬೇಕು. ನಿಮ್ಮ ಮುಂದೆ ಇರುವ ಜ್ವಾಲೆಯನ್ನು ನೋಡಿರಿ. ನಿಧಾನವಾಗಿಯೂ ಲಯಬದ್ಧವಾಗಿಯೂ ಉಸಿರಾಡಿರಿ. ನಿಧಾನಾವಾಗಿ ಕಣ್ಣು ಮುಚ್ಚಿಕೊಳ್ಳಿ. ಸ್ವಲ್ಪ ಅಭ್ಯಾಸವಾದ ನಂತರ, ಕಣ್ಣು ಮುಚ್ಚಿಕೊಂಡಾಗಲೂ ನೀವು ಜ್ವಾಲೆಯನ್ನು ನೋಡಬಹುದು (ದೃಶ್ಶೀಕರಿಸಿಕೊಳ್ಳ ಬಹುದು). ಜ್ಯೋತಿ ಪರಿಶುದ್ಧವಾದದ್ದು, ಅದು ಜ್ಞಾನ ಹಾಗು ವಿವೇಕದ ಸಂಕೇತ.
ಈ ಪವಿತ್ರ ಜ್ವಾಲೆಯನ್ನು ಹಣೆಯ ಮಧ್ಯೆ, ಹುಬ್ಬುಗಳ ನಡುವೆ ದೃಶ್ಶೀಕರಿಸಿಕೊಳ್ಳಿರಿ. ಈಗ ಕ್ರಮೇಣ ಆ ಜ್ವಾಲೆಯನ್ನು ನಿಮ್ಮೊಳಗೆ ತೆಗೆದುಕೊಳ್ಳಿರಿ. ಅದು ನಿಮ್ಮ ಹಣೆಯನ್ನು ಪ್ರೇಮ ಹಾಗು ಒಳ್ಳೆಯತನದ ಸುವರ್ಣ ಪ್ರಕಾಶದಿಂದ ತುಂಬಿಕೊಳ್ಳುತ್ತದೆ.
ನಿಧಾನವಾಗಿ ಆ ಜ್ವಾಲೆಯನ್ನು ನಿಮ್ಮೊಳಗೆ ಗಂಟಲ ಮುಖಾಂತರ ಶರೀರದ ಮಧ್ಯೆ ಹೃದಯದ ಮಟ್ಟಕ್ಕೆ ತನ್ನಿರಿ. ಇದನ್ನು ಸಾಮಾನ್ಯವಾಗಿ ಆಧ್ಯಾತ್ಮಿಕ ಹೃದಯ ಪ್ರವೇಶವೆಂದು ಪರಿಗಣಿಸಲಾಗಿದೆ. ಇದನ್ನು ಪದ್ಮಪುಷ್ಪದ ಮೊಗ್ಗೆಂದು ಭಾವಿಸಿರಿ. ಈ ಜ್ವಾಲೆಯ ಶಾಖ ಹಾಗು ಪ್ರಕಾಶ ಅದರ ಮೇಲೆ ಬಿದ್ದಾಗ, ಅದರ ದಳಗಳು ಒಂದೊಂದಾಗಿ ಅರಳುತ್ತವೆ. ಈಗ ಈ ಜ್ವಾಲೆ ಇನ್ನುಷ್ಟು ಕೆಳಗೆ ಬಂದು ಪುಷ್ಪದ ಮಧ್ಯೆ ಬರುತ್ತದೆ. ಆ ಪುಷ್ಪ ಕ್ರಮೇಣ ಅದೃಶ್ಯವಾಗುತ್ತದೆ. ಈಗ ಉಳಿದಿರುವುದು ಆಧ್ಯಾತ್ಮಿಕ ಹೃದಯದ ಆಳದಲ್ಲಿ ಸ್ಥಾಪಿತವಾಗಿರುವ, ಪ್ರೇಮ ಮತ್ತು ವಾತ್ಸಲ್ಯವನ್ನು ಎಲ್ಲೆಡೆ ಹರಡುತ್ತಿರುವ ಪವಿತ್ರ ಜ್ಞಾನ ಜ್ಯೋತಿ.
ಈಗ ನಾವು ಆ ಜ್ವಾಲೆಯನ್ನು ನಮ್ಮ ಶರೀರದ ವಿವಿಧ ಅಂಗಗಳನ್ನು ಪವಿತ್ರ ಹಾಗು ಪರಿಶುದ್ಧಗೊಳಿಸಲು ಅವುಗಳ ಸಮೀಪ ತರಬೇಕು. ನಮ್ಮೆರಡು ಕಣ್ಣುಗಳ ಬಳಿ ಆ ಜ್ವಾಲೆಯನ್ನು ತರಬೇಕು. ಆಗ ಅವುಗಳಲ್ಲಿ ದಿವ್ಯ ಜ್ಯೋತಿ ತುಂಬುತ್ತದೆ. ಈಗ ನಾವು ನಮ್ಮ ಸುತ್ತಲೂ ಒಳ್ಳೆಯದನ್ನೇ ನೋಡುತ್ತೇವೆ. ಆ ಜ್ವಾಲೆಯನ್ನು ನಮ್ಮೆರಡು ಕಿವಿಗಳ ಸಮೀಪ ತಂದು, ಅವುಗಳನ್ನು ಪರಿಶುದ್ಧಗೊಳಿಸಬೇಕು. ಈಗ ಕಿವಿಗಳು ಒಳ್ಳೆಯ ಧ್ವನಿಗಳನ್ನು, ಭಕ್ತಿ ಸಂಗೀತಗಳನ್ನು, ಅಹ್ಲಾದಕರ ಶಬ್ದಗಳನ್ನು ಆಲಿಸುತ್ತೇವೆ, ವಿನಹ ಕೆಟ್ಟ ಸಂಗೀತವನ್ನಾಗಲಿ, ಇನ್ನೊಬ್ಬರ ಟೀಕೆಯನ್ನಲ್ಲ.
ಒಳ್ಳೆಯದ್ದನ್ನೇ ನೋಡಿ, ಕೆಟ್ಟದ್ದನ್ನು ನೋಡಬೇಡಿ.
ಒಳ್ಳೆಯದ್ದನ್ನೇ ಕೇಳಿರಿ, ಕೆಟ್ಟದ್ದನ್ನು ಕೇಳಬೇಡಿ.
ಒಳ್ಳೆಯದ್ದನ್ನೇ ಮಾತನಾಡಿರಿ, ಕೆಟ್ಟದ್ದನ್ನು ಮಾತನಾಡಬೇಡಿ.
ಒಳ್ಳೆಯದ್ದನ್ನೇ ಆಲೋಚಿಸಿರಿ, ಕೆಟ್ಟದ್ದನ್ನು ಆಲೋಚಿಸಬೇಡಿ.
ಒಳ್ಳೆಯದ್ದನ್ನೇ ಮಾಡಿರಿ, ಕೆಟ್ಟದ್ದನ್ನು ಮಾಡಬೇಡಿ.
ಈಗ ನಾವು ಜ್ವಾಲೆಯನ್ನು ನಾಲಿಗೆ ಹಾಗೂ ಬಾಯಿಯ ಸಮೀಪ ತರಬೇಕು ಆಗ ಅಲ್ಲಿ ಪರಿಶುದ್ಧ ಪ್ರಕಾಶ ತುಂಬುತ್ತದೆ. ಈಗ ನಾವು ಮೃದುವಾಗಿಯೂ, ಮಧುರವಾಗಿಯೂ ಮಾತನಾಡುತ್ತೇವೆ ಹಾಗೂ ಭಗವಂತನಿಗಾಗಿ ಭಕ್ತಿಪೂರ್ವಕವಾಗಿ ಹಾಡುತ್ತೇವೆ. ಕೇವಲ ಆರೋಗ್ಯಕರ ಆಹಾರ ಹಾಗು ಪಾನೀಯಗಳ ಸೇವನೆಯನ್ನು ಮಾಡುತ್ತೇವೆ. ನಮ್ಮ ಮನಸ್ಸೆನ್ನೆಲ್ಲ ಪ್ರೇಮ ಜ್ಯೋತಿ ಆವರಿಸಲಿ.
ಇದೇ ರೀತಿ, ನಾವು ಆ ಜ್ವಾಲೆಯನ್ನು ನಮ್ಮೆರಡೂ ತೋಳುಗಳ ಸಮೀಪ ಕೈ ಬೆರಳುಗಳ ತನಕ ತೆಗೆದುಕೊಂಡು ಹೋಗಬೇಕು. ಆಮೇಲೆ ಆ ಜ್ಯೋತಿಯನ್ನು ಎರಡೂ ಕಾಲುಗಳ ಸಮೀಪ ಪಾದಾಂಗುಲಿಗಳ ತನಕ ತಂದು, ಅವುಗಳಿಗೆ ಪವಿತ್ರ ಜ್ಯೋತಿಯನ್ನು ತಲುಪಿಸೋಣ. ಆಗ ನಾವು ಕೈ ಗಳಿಂದ ಏನೇ ಮಾಡಿದರೂ, ನಮ್ಮ ಪಾದಗಳು ನಮ್ಮನ್ನು ಎಲ್ಲೇ ಕೊಂಡೊಯ್ದರೂ, ಅದು ಸದಾ ಒಳಿತಿಗಾಗಿಯೇ ಇರುತ್ತದೆ. ಈಗ ಆ ಜ್ವಾಲೆಯನ್ನು ಪುನಃ ಅದರ ಜಾಗ, ಆಧ್ಯಾತ್ಮ ಹೃದಯಕ್ಕೆ ತನ್ನಿರಿ.
ನಮ್ಮ ಸಮಸ್ತ ಶರೀರ ದಿವ್ಯ ಜ್ಯೋತಿಯಿಂದ ತುಂಬಿರುತ್ತದೆ. ಈಗ ಪ್ರೇಮದ ಸಹಾನೂಭೂತಿಯನ್ನು ಅರಿವಿಗೆ ತಂದುಕೊಳ್ಳಿರಿ. ಈಗ ನಾವು ಪ್ರೇಮವನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಈಗ ನಿಮ್ಮಿಂದ ಪ್ರಸರಿಸುವ ಜ್ಯೋತಿ ವಿಸ್ತರಿಸುತ್ತಾ ನಿಮ್ಮ ಶರೀರವನ್ನೆಲ್ಲವನ್ನೂ, ಅದರಾಚೆ ಕೂಡ ಆವರಿಸುತ್ತದೆ ಎಂದು ಊಹಿಸಿರಿ. ನಿಮ್ಮನ್ನೂ ಪ್ರೇಮ ಜ್ಯೋತಿ ಆವರಿಸಿದೆ ಎಂದು ಭಾವಿಸಿರಿ. ಮೊದಲಿಗೆ ಜ್ಯೋತಿ ನನ್ನೊಳಗಿತ್ತು. ಈಗ ನಾನೇ ಆ ಜ್ಯೋತಿ.
ಆ ಜ್ಯೋತಿ ವಿಸ್ತಾರವಾಗುತ್ತಾ ನಿಮಗೆ ಪ್ರೀತಿ ಪಾತ್ರರಾದವರನ್ನೂ, ತಾಯಿ, ತಂದೆ, ಗುರುಗಳನ್ನೂ, ಸಹೋದರ, ಸಹೋದರಿಯರನ್ನೂ ಆವರಿಸಲಿ. ಅವರನ್ನೆಲ್ಲಾ ನಿಮ್ಮ ಪ್ರೇಮದಲ್ಲಿ ಆವರಿಸಿರುವುದನ್ನು ನೋಡಿರಿ. ಈಗ ಆ ಜ್ಯೋತಿ ಇನ್ನಷ್ಟು ವಿಸ್ತಾರವಾಗುತ್ತಾ ನಿಮ್ಮ ಮಿತ್ರರನ್ನೂ, ಬಂಧು ಬಳಗದವರನ್ನೂ ಹಾಗೂ ಸಾಕು ಪ್ರಾಣಿಗಳನ್ನೂ ಆವರಿಸಲಿ. ಆ ಜ್ಯೋತಿ ನೀವು ಜಗಳಮಾಡುವವರನ್ನೂ ತಲುಪಿ, ಅವರೆಲ್ಲಾ ನಿಮ್ಮ ಮಿತ್ರರಾಗಿ ಪರಿವರ್ತನೆಗೊಳ್ಳಲಿ.
ಈಗ ಆ ಜ್ಯೋತಿಯನ್ನು ಸುತ್ತಲೂ ಕಳುಹಿಸಿ, ಅದು ಇಡೀ ವಿಶ್ವವನ್ನೇ ಆವರಿಸಲಿ. ಪ್ರೇಮ, ಶಾಂತಿ ಹಾಗೂ ಆನಂದವನ್ನು ಅನುಭವಿಸಿ. “ನೀವು ಹಾಗೂ ಜ್ಯೋತಿ ಒಂದೇ” ಎಂದು ಭಾವಿಸಿರಿ.
ನಿಧಾನವಾಗಿ ಆ ಜ್ವಾಲೆಯನ್ನು ಹಿಂತೆಗೆದುಕೊಂಡು ನಿಮ್ಮೊಳಗೆ ತಂದುಬಿಡಿ. ಸ್ವಲ್ಪ ಸಮಯ ಅಲ್ಲೇ ಇಟ್ಟುಬಿಡಿ. ಶಾಂತತೆಯನ್ನೂ, ಆನಂದವನ್ನೂ ಆಸ್ವಾದಿಸಿರಿ. ಈಗ ಹಿಂತಿರುಗುವ ಸಮಯ ಆಯಿತು. ಎರಡೂ ಕರಗಳನ್ನೂ ನಮಸ್ಕಾರ ಮಾಡುವ ಭಂಗಿಯಲ್ಲಿ ಸ್ಪರ್ಶಿಸಿರಿ, ಒಂದಕ್ಕೊಂದನ್ನು ನಿಧಾನವಾಗಿ ಉಜ್ಜಿರಿ, ಹಾಗೂ ನಿಧಾನವಾಗಿ ಮುಚ್ಚಿದ ಕಣ್ಣುಗಳನ್ನು ಉಜ್ಜಿರಿ. ಸಾವಕಾಶವಾಗಿ ಕಣ್ಣುಗಳನ್ನು ತೆರೆಯಿರಿ.
ಈ ಧ್ಯಾನದ ಸಮಯವನ್ನು ಮಗು ಇಷ್ಟ ಪಟ್ಟರೆ, ಆ ಮಗು ತುಂಬಾ ಶಕ್ತಿಯನ್ನು ಹಾಗೂ ಶಾಂತಿ ಮತ್ತು ನೆಮ್ಮದಿಯನ್ನು ಪಡೆಯುತ್ತದೆ. ಅವರು ಇದನ್ನು ಸ್ಪೂರ್ತಿದಾಯಕ ಪ್ರಕ್ರಿಯೆ ಎಂದು ತಿಳಿದುಕೊಳ್ಳುತ್ತಾರೆ. ಅವರಿಗೆ ಪರೀಕ್ಷೆ ಬರೆಯುವ ಮೊದಲು ಹಾಗೂ ರಾತ್ರಿ ಪ್ರಾರ್ಥನೆ ಮಾಡುವ ಮೊದಲು ಮೌನಾಚರಣೆಯನ್ನು ಅಭ್ಯಾಸ ಮಾಡಲು ಹೇಳಿರಿ.