ಗಣೇಶ ಚತುರ್ಥಿ
ಭಾರತೀಯರು ಆಚರಿಸುವ ಎಲ್ಲಾ ಪವಿತ್ರ ಹಬ್ಬಗಳು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮಹತ್ವವನ್ನು ಹೊಂದಿರುತ್ತವೆ. ಪ್ರತಿಯೊಂದು ಪವಿತ್ರ ಹಬ್ಬವೂ ಸಹ ದೈವತ್ವದಿಂದ ತುಂಬಿರುವುದೆಂದು ಪರಿಗಣಿಸಬಹುದು. ಇಂತಹ ಹಬ್ಬದ ದಿನಗಳಲ್ಲಿ ಪ್ರತಿಯೊಂದು ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ ಹಾಗೂ ಪ್ರತಿಯೊಬ್ಬರೂ ಸ್ನಾನ ಮಾಡಿ ಪರಿಶುಭ್ರರಾಗಿ ವಿಶೇಷ ಪೂಜೆಯನ್ನು ಮಾಡಿ, ತೆಂಗಿನಕಾಯಿಯನ್ನು ದೇವರಿಗೆ ನೈವೇದ್ಯವಾಗಿ ಸಮರ್ಪಿಸಿ, ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುವುದುಂಟು.
ಗಣೇಶ ಚತುರ್ಥಿಯ ಮಹತ್ವವನ್ನು ವಿಭಿನ್ನ ಜನರು ವಿಭಿನ್ನ ರೀತಿಗಳಲ್ಲಿ ವಿವರಿಸುವರು. ಗಣೇಶನ ಪ್ರತಿಮೆಯ ಮಹತ್ವವನ್ನು ಈ ರೀತಿ ಬಣ್ಣಿಸಬಹುದು; ಗಣೇಶನಿಗೆ ಆನೆಯ ಮುಖವನ್ನು ಅದರ ಅಸಾಧಾರಣ ಬುದ್ಧಿವಂತಿಕೆ, ಜ್ಞಾನ ಮತ್ತು ವಿವೇಕವನ್ನು ಹೊಂದಿರುವ ವಿಶೇಷ ಗುಣಗಳಿಂದಾಗಿ ಕೊಡಲಾಗಿದೆ. ಆನೆಯು ಸದಾ ಎಚ್ಚರವಾಗಿರುತ್ತದೆ ಹಾಗೂ ಸುತ್ತಮುತ್ತಲಿನ ಬಗ್ಗೆ ಸದಾ ಜಾಗರೂಕತೆಯಿಂದ ಇರುತ್ತದೆ. ಇದರ ಜ್ಞಾಪಕಶಕ್ತಿಯು ತುಂಬಾ ಪ್ರಬಲವಾಗಿರುತ್ತದೆ. ಆನೆಯು ದಟ್ಟವಾದ ಅರಣ್ಯಗಳಲ್ಲಿ ಠೀವಿಯಿಂದ ಸಂಚರಿಸುತ್ತದೆ. ಇದರ ಹಾದಿಯು ಬೇರೆ ಪ್ರಾಣಿಗಳು ಹಾದುಹೋಗಲು ಜಾಡಾಗುತ್ತದೆ. ಅದಕ್ಕೇ ತಿಳಿಯದಂತೆ ಬೇರೆಯವರಿಗೆ ದಾರಿದೀಪವಾಗಿರುತ್ತದೆ.
ಗಣೇಶ ಎಲ್ಲರಿಗೂ ಮಾರ್ಗದರ್ಶನ ನೀಡ
ವನು. ಗಣಪತಿಯನ್ನು “ಬುದ್ಧಿವಿನಾಯಕ” ಮತ್ತು “ಸಿದ್ಧಿವಿನಾಯಕ” ಎಂದು ವರ್ಣಿಸಲಾಗಿದೆ. (ವಿನಾಯಕ ಬುದ್ಧಿವಂತನು, ವಿನಾಯಕ ಸಾಧಿಸಿದವನು)
ಹೆಸರೇ ಸೂಚಿಸುವಂತೆ ವಿನಾಯಕ ಎಂದರೆ ಅಸಾಧಾರಣ ನಾಯಕ ಎಂದು (ವಿ – ಅಸಾಧಾರಣ, ನಾಯಕ-ಮುಖ್ಯಸ್ಥ). ವಿನಾಯಕ ಎಲ್ಲಾ ಗಣಗಳ ಮುಖ್ಯಸ್ಥನಾಗಿರುವನು (ಆತ್ಮಗಳ ಯಜಮಾನ) ಆದ್ದರಿಂದಲೇ ಗಣಪತಿಯು ರುದ್ರಗಣ, ಭದ್ರಗಣ ಹಾಗೂ ಇತರ ಗಣಗಳಿಗೆ ಮುಖ್ಯಸ್ಥನಾಗಿರುವನು. ಮಾನವನಲ್ಲಿರುವ ಆಂತರಂಗಿಕ ಹಾಗೂ ಬಹಿರಂಗದ ದಿವ್ಯ ಶಕ್ತಿಗಳ ಒಡೆಯನಾಗಿರುತ್ತಾನೆ.
ಮಹರ್ಷಿ ವೇದವ್ಯಾಸರು ಮಹಾಭಾರತವನ್ನು ಬರೆಯಲು ಗಣೇಶನಲ್ಲಿ ವಿನಂತಿಸಿಕೊಂಡಾಗ ಗಣೇಶನು ಯಾವುದೇ ವಿಳಂಬವಿಲ್ಲದೆ ತಕ್ಷಣ ಒಪ್ಪಿಕೊಳ್ಳುತ್ತಾನೆ. ಹೀಗೆ ಬರೆಯಲು ವಿಳಂಬವಾಗಬಾರದೆಂದು ತನ್ನ ದಂತವನ್ನೇ ಮುರಿದು ಲೇಖನಿಯನ್ನಾಗಿಸಿ ಬರೆಯಲು ಪ್ರಾರಂಭಿಸುತ್ತಾನೆ. ಹೀಗೆ ಗಣೇಶನು ಇತರರಿಗೆ ಸಹಾಯ ಮಾಡಲು ಸದಾ ಸಿದ್ಧವಾಗಿರುತ್ತಾನೆ.
ವಿನಾಯಕನು ಜ್ಞಾನ ಹಾಗೂ ಸಾಧನೆಯ ಸಾಕಾರರೂಪವಾಗಿರುತ್ತಾನೆ. ಗಣೇಶನನ್ನು ಪೂಜಿಸುವುದರ ಮಹತ್ವವೇನಿರಬಹುದು? ಮನುಷ್ಯನ್ನು ತನ್ನ ಜೀವನದ ಹಾದಿಯಲ್ಲಿ ಅನೇಕ ಅಡೆತಡೆಗಳನ್ನು ಎದುರಿಸುತ್ತಾನೆ. ಹೀಗಾಗಿ ವಿಘ್ನೇಶ್ವರನೆಂದೂ ಕರೆಯಲ್ಪಡುವ ಗಣಪತಿಗೆ ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಪ್ರಾರ್ಥನೆಯನ್ನು ಸಲ್ಲಿಸುವರು. ಆದ್ದರಿಂದಲೇ ಎಲ್ಲಾ ವರ್ಗದ ಜನರಿಗೂ ಗಣೇಶನು ಪ್ರಮುಖ ದೈವವಾಗಿರುತ್ತಾನೆ. ಯಾವುದೇ ಪೂಜೆ, ವ್ರತ ಇತರೆ ಆಚರಣೆಗಳಲ್ಲಿ ವಿನಾಯಕನಿಗೇ ಪ್ರಥಮ ಪೂಜೆಯನ್ನು ನೀಡಲಾಗುತ್ತದೆ. ಮೂರು ಲೋಕಗಳನ್ನು ಯಾರು ಮೊದಲು ಪ್ರದಕ್ಷಿಣೆ ಹಾಕುವರು ಎಂಬ ಪರೀಕ್ಷೆಯನ್ನು ಗಣೇಶ ಮತ್ತು ಅವನ ಸಹೋದರ ಸುಬ್ರಮಣ್ಯರಿಗೆ ಕೊಟ್ಟಾಗ, ಗಣೇಶನು ತಂದೆ, ತಾಯಿಯರೇ ಮೂರೂ ಲೋಕಗಳಿಗಿಂತಲೂ ಶ್ರೇಷ್ಠರು ಎಂದು ಭಕ್ತಿಯಿಂದ ತಂದೆ ತಾಯಿಯರಾದ ಶಿವ ಪಾರ್ವತಿಯರಿಗೆ ಮೂರು ಬಾರಿ ಪ್ರದಕ್ಷಿಣೆ ಮಾಡಿ ನಿರೂಪಿಸಿದನು ಹಾಗು ಪರೀಕ್ಷೆಯಲ್ಲಿ ಗೆದ್ದನು.
ದೇವರುಗಳನ್ನು ಸ್ಥಾಪಿಸಿದಾಗ ಮತ್ತು ಆರಾಧಿಸಿದಾಗ ಗಣೇಶನೇ ಮುಂದಿರುವಂತೆ, ಗಣೇಶ ಚತುರ್ಥಿ ಹಬ್ಬವು ಇತರೆ ದೇವರುಗಳ ಹಬ್ಬಗಳಾದ ನವರಾತ್ರಿ, ದೀಪಾವಳಿ, ಸಂಕ್ರಾಂತಿ, ಶಿವರಾತ್ರಿ ಇವೆಲ್ಲಕ್ಕಿಂತ ಮೊದಲೇ ಆಚರಿಸಲ್ಪಡುತ್ತದೆ.
ಗಣೇಶನಲ್ಲಿರುವ ಅಚಲ ಅನಂತ ಸತ್ಯವನ್ನು ಅರಿತು ಶ್ರದ್ಧಾ ಭಕ್ತಿ ಮತ್ತು ವಿಶ್ವಾಸದಿಂದ ಆರಾಧಿಸಿ ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸಿ, ಯಶಸ್ಸನ್ನು ಅನುಗ್ರಹಿಸೆಂದು ಪ್ರಾರ್ಥಿಸುವುದೇ ಹಬ್ಬದ ಈ ದಿನದ ಆದ್ಯ ಕರ್ತವ್ಯವಾಗಿರುತ್ತದೆ.
ಗಣೇಶ ಚತುರ್ಥಿ ಆಚರಣೆಯ ದಿನಕ್ಕೆ ಖಗೋಳ ಶಾಸ್ತ್ರದ ಬೆಂಬಲವನ್ನೂ ಕಾಣಬಹುದು. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ಅಂದರೆ ನಾಲ್ಕನೆಯ ದಿನದಂದು ರಾತ್ರಿ ವೇಳೆಗೆ ಆನೆಯ ತಲೆಯ ಆಕಾರವನ್ನು ಹೊಂದಿರುವ ನಕ್ಷತ್ರ ಪುಂಜವು ಪ್ರಕಾಶಮಾನವಾಗಿ ಗೋಚರಿಸುತ್ತದೆ.
ಮನುಷ್ಯನು ಮೂರು ಪ್ರವೃತ್ತಿಗಳಿಗೆ ಬದ್ಧನಾಗಿರುತ್ತಾನೆ. ಮೊದಲನೆಯದು (ಕಾಮ ಅಥವಾ ಆಸೆ) ಏನನ್ನಾದರೂ ಪಡೆಯಲೇಬೇಕೆಂಬ ಹಂಬಲ, ಈ ಹಂಬಲ ವಿಫಲಗೊಂಡಾಗ ಕ್ರೋಧವು (ಕೋಪ) ಹೆಡೆಯೆತ್ತುತ್ತದೆ. ಒಂದು ವೇಳೆ ಹಂಬಲಿಸಿದ್ದನ್ನು ಪಡೆಯಲು ಸಫಲರಾದರೆ ದುರಾಸೆಯು ಅವನನ್ನು ಕಾಡುತ್ತದೆ. ಒಂದು ವೇಳೆ ಆ ಆಸೆಯು ಪ್ರಯೋಜನಕಾರಿಯಾಗಿದ್ದರೆ ದೇವರು ಅನುಗ್ರಹಿಸುತ್ತಾನೆ. ಗಣೇಶನಿಗೆ ಆಸೆ, ಕೋಪ, ದುರಾಸೆ ಇವುಗಳಿರುವುದಿಲ್ಲ. ಒಳ್ಳೆಯ ಮತ್ತು ಆಧ್ಯಾತ್ಮಿಕ ಗುರಿಗಳನ್ನು ಬಯಸುವ ಎಲ್ಲರಿಗೂ ಗಣೇಶನ ಅನುಗ್ರಹವು ಲಭ್ಯವಿರುವುದು.
ಗಣೇಶನು ಆರಿಸಿಕೊಂಡಿರುವ ವಾಹನ ಮೂಷಿಕ ಅಥವಾ ಇಲಿ. ಮೂಷಿಕವು ಕೇವಲ ವಸ್ತುಗಳ ವಾಸನೆಯಿಂದಲೇ ವಿನಾಶಕ್ಕೆ ಕಾರಣವಾಗುತ್ತದೆ. ಮಾನವನು ಆಸೆಗಳ ಬಲಿಪಶುವಾಗಿರುತ್ತಾನೆ. (ಹಿಂದಿನ ಜೀವನದಲ್ಲಿ ಮನಸ್ಸಿನಲ್ಲಿ ಮುದ್ರಿತವಾಗಿರುವ ಆದ್ಯತೆಗಳು ಮತ್ತು ಒಲುಮೆ) ಮಾನವನ ಹಾದಿ ತಪ್ಪಿಸಿ ದುರದೃಷ್ಟ ದೌರ್ಭಾಗ್ಯಗಳನ್ನುಂಟು ಮಾಡುವ ಆಸೆಗಳನ್ನು ಗಣೇಶನು ಅಡಗಿಸಿ ದೂರಮಾಡುವನು.
ಬೃಹದಾಕಾರದ ಗಣೇಶನು ಅತೀ ಸಣ್ಣದಾದ ಮೂಷಿಕದ ಮೇಲೆ ಅದಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಸವಾರಿ ಮಾಡುವುದರ ಮೂಲಕ ಎಲ್ಲರಲ್ಲಿರುವುದೂ ಒಂದೇ ಆತ್ಮ ಎಂದು ನಿರೂಪಿಸುತ್ತಾನೆ ಹಾಗೂ ಆಕಾರ ಅಥವಾ ಗಾತ್ರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ತೋರಿಸಿಕೊಡುತ್ತಾನೆ. ಇಲಿಯು, ಕೋಪ ಹೆಮ್ಮೆ ಮತ್ತು ಸ್ವಾರ್ಥದಂತಹ ಕೆಟ್ಟ ಗುಣಗಳನ್ನು ಸಂಕೇತಿಸುತ್ತದೆ. ಹೀಗೆ ಇಲಿಯ ಮೇಲೆ ಸವಾರಿಮಾಡುವ ಮೂಲಕ ಗಣೇಶನು ಮಾನವನೂ ಕೂಡ ಇಂತಹ ಕೆಟ್ಟ ಗುಣಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ತಿಳಿಸಿಕೊಡುತ್ತಾನೆ.
ಗಣೇಶನಿಗೆ ವಾಹನವಾದ ಮೂಷಿಕನೂ ಸಹ ನಾವು ಗಣೇಶನಿಗೆ ಸಲ್ಲಿಸುವ ಪೂಜೆಯನ್ನು ಹಂಚಿಕೊಳ್ಳುತ್ತದೆ. ದೇವರುಗಳ ಜೊತೆಗಿರುವುದರಿಂದ, ದೇವರ ವಾಹನಗಳು, ಒಡವೆಗಳು, ದೇವರ ಆಯುಧಗಳು, ದೇವರುಗಳ ಸೇವಕರು ವಿಶೇಷ ಮಾನ್ಯತೆ ಪಡೆದು ಪೂಜ್ಯವಾದ ಸ್ಥಾನಮಾನಗಳನ್ನು ಹೊಂದಿರುತ್ತಾರೆ. ಆನೆ, ಸಿಂಹ, ಗರುಡ, ಹಾವು ಇನ್ನೂ ಮುಂತಾದ ಪ್ರಾಣಿಗಳು ಹೀಗಾಗಿಯೇ ದಿವ್ಯತೆಯನ್ನು ಪಡೆದುಕೊಂಡಿರುತ್ತವೆ.
ಆನೆಯ ವಿಶಾಲವಾದ ತಲೆ, ದೇವರು ವಿಶಾಲ ಮನಸ್ಸಿನವನು ಎಂಬುದನ್ನು ಸೂಚಿಸುತ್ತದೆ. ಅವನು ತನ್ನ ಭಕ್ತರ ಚಟುವಟಿಕೆಗಳಿಗೆ ಸಹಾನುಭೂತಿ ಹೊಂದಿದವನೂ, ಸಹಿಷ್ಣುತೆ ಉಳ್ಳವನೂ ಆಗಿರುವನು ಎಂಬುದನ್ನು ತೋರಿಸುತ್ತದೆ.
ಗಣೇಶನ ನಾಲ್ಕು ಕೈಗಳು ದೇವರ ಅಲೌಕಿಕ ಶಕ್ತಿಗಳನ್ನು ನಿರೂಪಿಸುತ್ತದೆ. ಕಣ್ಣಿಗೆ ಕಾಣುವ ಎರಡು ಕೈಗಳೇ ಅಲ್ಲದೆ ತನ್ನ ಭಕ್ತರನ್ನು ಆಶೀರ್ವದಿಸಿ ವಿಪತ್ತುಗಳಿಂದ ಪಾರು ಮಾಡುವ ಇನ್ನೆರಡು ಅದೃಶ್ಯ ಕೈಗಳನ್ನು ಗಣೇಶನು ಹೊಂದಿರುವನು. ಒಂದು ಕೈಯಲ್ಲಿ ಪಾಶ ಅಥವಾ ಹಗ್ಗವನ್ನು ಹೊಂದಿರುವನು. ಈ ಪಾಶದಿಂದ ತನ್ನ ಭಕ್ತರಿಗೆ ದೇವರನ್ನು ಪಡೆಯುವ ಸನ್ಮಾರ್ಗವನ್ನು ನಿರ್ದೇಶಿಸುವನು. ಗಣೇಶ ಇನ್ನೊಂದು ಕೈಯಲ್ಲಿ ಅಂಕುಶವನ್ನು ಆಯುಧವಾಗಿ ಹೊಂದಿರುವನು. ಇದನ್ನು ತನ್ನ ಭಕ್ತರ ಅಜ್ಞಾನವನ್ನು ನಾಶಗೊಳಿಸಿ ಸನ್ಮಾರ್ಗಗಳತ್ತ ನಡೆಯಲು ಪ್ರಚೋದಿಸುತ್ತಾನೆ ಮತ್ತೊಂದು ಹಸ್ತದಲ್ಲಿ ಸಿಹಿಯಾದ ಮೋದಕಗಳನ್ನು ಹಿಡಿದಿರುತ್ತಾನೆ. ಭಕ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗು ಯಾರು ಆನಂದವನ್ನು ಸವಿಯಲು ತನ್ನನ್ನು ಸೇರುವರೋ ಅವರಿಗಾಗಿ ಈ ಸಿಹಿ ಮೋದಕಗಳನ್ನು ಹಿಡಿದಿರುತ್ತಾನೆ. ಇನ್ನು ತನ್ನ ನಾಲ್ಕನೇ ಹಸ್ತದಿಂದ ಭಕ್ತರನ್ನು ಆಶಿರ್ವದಿಸಿ ಅವರಿಗೆ ಅರ್ಹವಾದ ವರಗಳನ್ನು ಅನುಗ್ರಹಿಸುತ್ತಾನೆ.
ಗಣೇಶನ ಕಿವಿಗಳೂ ಸಹ ವಿಶಾಲವಾಗಿರುತ್ತದೆ. ಇದರಿಂದ ತನ್ನ ಎಲ್ಲ ಭಕ್ತರ ಪ್ರಾರ್ಥನೆಗಳನ್ನು ಕೇಳುವನು. ಇನ್ನು ತನ್ನ ಭಾರಿ ಗಾತ್ರದ ಹೊಟ್ಟೆಯು ಇಡೀ ಪ್ರಪಂಚವೇ ತನ್ನಲ್ಲಿರುವುದನ್ನು ನಿರೂಪಿಸುತ್ತದೆ.
ಗಣೇಶನು ಇನ್ನು ಒಂದು ಕಾರ್ಯವನ್ನು ನಿರ್ವಹಿಸಿಕೊಂಡಿರುವನು. ಪರಮೇಶ್ವರನು ಅತೀ ಪ್ರಸನ್ನನಾಗಿ ನಟರಾಜನಾಗಿ ನಾಟ್ಯ ಮಾಡುವಾಗ, ಶ್ರುತಿ ಲಯಗಳಿಗೆ ಒಡೆಯನಾದ ಗಣೇಶನು ಮೃದಂಗವನ್ನು ನುಡಿಸುವನು. ಗಣೇಶನಿಗೇ ಪ್ರಥಮ ಪೂಜೆಯನ್ನು ಸಲ್ಲಿಸಿದಾಗ ಮಿಕ್ಕೆಲ್ಲಾ ದೇವರುಗಳು ಪ್ರಸನ್ನಗೊಳ್ಳುವುದರಲ್ಲಿ ಸಂಶಯವೇ ಇಲ್ಲ.
[Source- Balvikas Guru Handbook Published by Sri Sathya Sai Books & Publication Trust, ‘Dharmakshetra’, Mahakali Caves Road, Andheri, Mumbai.]