ಶ್ರೀ ಬಸವೇಶ್ವರ

Print Friendly, PDF & Email
ಶ್ರೀ ಬಸವೇಶ್ವರ

ಶ್ರೀ ಬಸವೇಶ್ವರರು ಒಬ್ಬ ದೊಡ್ಡ ಧಾರ್ಮಿಕ ಮುಂದಾಳುವಾಗಿದ್ದರು. ಅವರು ಒಬ್ಬ ಸಂತರು, ಕವಿಗಳು, ಆಳವಾದ ಆಧ್ಯಾತ್ಮ ಜೀವಿಯಾಗಿದ್ದರು. ಅವರು ಒಬ್ಬ ಅನೇಕ ಅದ್ವಿತೀಯ ಅನೇಕ ದೃಷ್ಟಿಕೋನಗಳಿಂದ ಕೂಡಿದ ವ್ಯಕ್ತಿಯಾಗಿದ್ದರು. ಅವರು ಧರ್ಮ ಮತ್ತು ಸಾಮಾಜಿಕ ಸುಧಾರಣೆಗಳ ಸಮನ್ವಯದಿಂದ ಸಮಾಜವು ಆಧ್ಯಾತ್ಮಿಕ ತಳಹದಿಯ ಮೇಲೆ ಭದ್ರವಾಗಿ ನಿಲ್ಲುವುದೆಂದು ತಿಳಿಸಿದರು. ‘ವೀರಶೈವ’ ಎಂಬ ಮತದ ಸಂಸ್ಥಾಪಕರಾದ ಇವರು ಕರ್ನಾಟಕದಲ್ಲಿ ಜನಜನಿತರಾದರು. ಈ ಮತವು ಆಳವಾಗಿ ಕರ್ನಾಟಕದಲ್ಲಿ ಬೆಳೆದು ಈಗಲೂ ಅವರ ಅನುಯಾಯಿಗಳು ಅನೇಕರಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿ ಬಸವೇಶ್ವರರು, ಆಧ್ಯಾತ್ಮಿಕ ಮಾರ್ಗದಲ್ಲಿ, ಪೂಜನೀಯ ಸ್ಥಾನವನ್ನು ಪಡೆದಿದ್ದಾರೆ.

ವೇದಾಂತದ ಮುಖ್ಯವಾದ ಎರಡು ರೀತಿಯ ತತ್ವಶಾಸ್ತ್ರದ ಪ್ರಕಾರ ರಾಮಾನುಜ, ಮಾಧವ ವಲ್ಲಭ ಮತ್ತು ಚೈತನ್ಯ ಮೊದಲಾದವರು ‘ವಿಷ್ಣು ಅಥವಾ ನಾರಾಯಣನೇ’ ಕೊನೆಯ ಸತ್ಯವೆಂದಿದ್ದಾರೆ – ಅವರೇ ವೈಷ್ಣವರು.

ಇನ್ನೊಂದು ಪಂಗಡದವರು ‘ಶಿವನೇ ಕೊನೆಯ ಅಂತ್ಯ ಸತ್ಯ’ ಎಂದಿದ್ದಾರೆ. ಶಿವನೇ ರುದ್ರ, ಶಂಕರ, ಮಹದೇವ, ಹರ, ಈಶ್ವರ ಎಂಬ ಅನೇಕ ನಾಮಗಳಿಂದ ಕರೆಯಲ್ಪಟ್ಟಿದ್ದಾನೆ. ಅವರೇ ಶೈವರು. ಭಾರತದ ದಕ್ಷಿಣಭಾಗದಲ್ಲಿ ಎರಡು ಬಗೆಯ ಶೈವರಿದ್ದಾರೆ. ಒಂದು ಶೈವ ಪಂಗಡದವರು ಶೈವ ಸಿದ್ಧಾಂತವನ್ನು ಅದರ ಅಂತರಾರ್ಥವನ್ನು ಬರೆದ ಶೈವ ಸಂತರುಗಳಾದ ನಾಯನಾರ್ ಅವರ ಅನುಯಾಯಿಗಳು ಅವರು 63 ಜನ ಇದ್ದರು. ಎಲ್ಲರೂ ಅತ್ಯಂತ ದೈವ ಭಕ್ತರು. ಅವರಲ್ಲಿ ಐದು ಜನ ಮುಖ್ಯವಾದವರು 1)ತಿರುಮಲರು 2)ಅಪ್ಪರು 3)ಸಂಬಂಧರು 4)ಸುಂದರ ಮೂರ್ತಿ 5)ಮಾನಿಕ ವಾಜಗರು.

ಎರಡನೆಯ ರೀತಿಯ ‘ಶೈವ’ ಪಂಗಡದವರು ಉತ್ತರ ಕರ್ನಾಟಕ ಮತ್ತು ಮೈಸೂರಿನಲ್ಲಿ ಇರುವ ವೀರಶೈವರು ಈ ಮತವನ್ನು ಸ್ಥಾಪಿಸಿದವರು ಶ್ರೀ ಬಸವೇಶ್ವರರು, ವೀರಶೈವ ಪದದ ಅರ್ಥ ದೃಢವಾದ ಮನಸ್ಸಿನ ಶೈವ ಭಕ್ತರು – ಶಿವನ ಆರಾಧಕರು. ಅವರು ಶಿವನನ್ನಲ್ಲದೆ ಬೇರೆ ಯಾವ ದೇವರನ್ನಾಗಲೀ, ದೇವಿಯನ್ನಾಗಲೀ ಪೂಜಿಸುವುದಿಲ್ಲ. ಅವರನ್ನು ಲಿಂಗಾಯಿತರೆಂದೂ ಕರೆಯುವರು ಏಕೆಂದರೆ ಅವರು ‘ಲಿಂಗ’ವನ್ನು ಪೂಜಿಸುವರು. ಲಿಂಗವು ಶಿವನ ಚಿಹ್ನೆಯಾಗಿದೆ. ಅವರು ಅದನ್ನಲ್ಲದೆ ಯಾವ ಮೂರ್ತಿಯನ್ನೂ ಪೂಜಿಸುವುದಿಲ್ಲ. ಅವರು ಅದನ್ನು ದೇಹದ ಮೇಲೆ ಕುತ್ತಿಗೆಯಲ್ಲಿ ದಾರದಿಂದ ಧರಿಸಿರುತ್ತಾರೆ. ಅದ್ದರಿಂದ ಅವರು ಒಂದು ಹೆಸರಿನಲ್ಲಿ ಒಬ್ಬ ದೇವರನ್ನು ಮಾತ್ರ ಆರಾಧಿಸುತ್ತಾರೆ. ಅವರು ಪೂರ್ಣ ಸಸ್ಯಾಹಾರಿಗಳು. ಮೊದಲೇ ವೀರಶೈವಮತದ ಬೇರುಗಳು ಇದ್ದರೂ, ಅದರಲ್ಲಿ ಸರಿಯಾದ ಕ್ರಮದ ಬದಲಾವಣೆಗಳನ್ನು ಬಸವೇಶ್ವರರೇ ಮಾಡಿದರು. ಅದರ ಪ್ರಚಾರ ಆಗಲೇ ಶುರುವಾಯಿತು.

ಬಸವೇಶ್ವರರು ಬ್ರಾಹ್ಮಣನಾಗಿ ಜನಿಸಿದರೂ, ಎಲ್ಲಾ ಮತಗಳನ್ನೂ ತ್ಯಜಿಸಿ, ಮೇಲು ಕೀಳು ಎಂಬ ಭಾವನೆಗಳನ್ನು ಅಂತ್ಯಗೊಳಿಸಿ ಅಸಮಾನತೆ ಮತ್ತು ಪಶುಗಳನ್ನು ಸಮಾರಂಭಗಳಲ್ಲಿ ಬಲಿಕೊಡುವ ಕ್ರಮಗಳನ್ನು ನಿಷೇಧಿಸಿದರು. ದೇವರನ್ನು ಪಡೆಯಲು ಭಕ್ತಿಯೊಂದೇ ಏಕೈಕ ಮಾರ್ಗವೆಂದು ತಿಳಿಸಿದರು.

ಅವರ ಜೀವನ

ಬಸವೇಶ್ವರರು ಕ್ರಿ.ಶ. 1131ರಲ್ಲಿ ಬಿಜಾಪುರ ಜಿಲ್ಲೆಯ ಇಂಗಳೇಶ್ವರ ಬಂಗೇವಾಡಿ ಎಂಬ ಊರಿನಲ್ಲಿ ಜನಿಸಿದರು. ಮಾದಿರಾಜ ಮತ್ತು ಮಾದಲಾಂಬೆ ಎಂಬ ಭಕ್ತ ದಂಪತಿಯರೇ ಬಸವೇಶ್ವರರ ತಂದೆ ತಾಯಿಗಳು. ಮಾದಲಾಂಬೆಯು ಅನೇಕ ಪೂಜೆ, ವ್ರತಗಳನ್ನು ಮಾಡಿ ಪಡೆದವರ ದಾನವೇ ಬಸವೇಶ್ವರರು. ಬಸವ ಅಥವ ನಂದಿಯಾಗಿ ಪೂಜೆಯ ವರಪ್ರಸಾದದಿಂದ ಹುಟ್ಟಿದ ಇವರನ್ನು ಬಸವೇಶ್ವರರೆಂದು ನಾಮಕರಣ ಮಾಡಿದರು. ನಂದಿಯು ಶಿವನ ವಾಹನ. ಮಗು ಹುಟ್ಟಿದ ತಕ್ಷಣ ಅಳಲಿಲ್ಲ. ಕಣ್ಣು ತೆರೆಯಲಿಲ್ಲ. ಇದು ತಂದೆ ತಾಯಿಗೆ ಆತಂಕವನ್ನು ತಂದಿತು. ಅವರು ಮಗು ಹುಟ್ಟು ಕುರುಡ ಮತ್ತು ಮೂಗನಿರಬಹುದೆಂದು ತಿಳಿದು ಶಿವನನ್ನು ಪ್ರಾರ್ಥಿಸತೊಡಗಿದರು. ಕೃಷ್ಣ ಮತ್ತು ಮಲಪ್ರಭ ನದಿಗಳ ಸಂಗಮದ ಹತ್ತಿರದಲ್ಲಿರುವುದೇ ಕೂಡಲ ಸಂಗಮವೆಂಬ ಸ್ಥಳ, ಅದರ ಹತ್ತಿರದಲ್ಲಿ ಸಂತರಾದ ‘ಜಟವೇದ’ ಎಂಬುವರು ಒಂದು ಅರಣ್ಯ – ಶಾಲೆ (ಗುರುಕುಲ) ಯನ್ನು ನಡೆಸುತ್ತಿದ್ದರು. ಅವರು ಒಂದು ದಿನ ಬಸವೇಶ್ವರರ ಮನೆಗೆ ಬಂದರು. ಬಸವೇಶ್ವರರ ತಂದೆ ತಾಯಿಗಳು ಅವರ ಪಾದಗಳಿಗೆ ವಂದಿಸಿ ತಮ್ಮ ಮಗುವಿನ ನ್ಯೂನತೆಯನ್ನು ತಿಳಿಸಿ, ಆ ಮಗುವನ್ನು ಗುಣಪಡಿಸಿ ಆಶೀರ್ವದಿಸಬೇಕೆಂದು ಸಂತರಲ್ಲಿ ಬೇಡಿಕೊಂಡರು. ಸಂತ ಜಟವೇದರು ಮಗುವಿನ ಹಣೆಗೆ ಪವಿತ್ರವಾದ ವಿಭೂತಿಯಯನ್ನು ಹಚ್ಚಿ ಮಗುವಿನ ಕಿವಿಗಳಲ್ಲಿ ಪಂಚಾಕ್ಷರಿ ಮಂತ್ರವಾದ “ಓಂ ನಮಃ ಶಿವಾಯ” ಎಂದು ಪಿಸುಗುಟ್ಟಿದರು. ಏನಾಶ್ಚರ್ಯ, ಮಗು ಮಂತ್ರೋಪದೇಶವಾದ ಕೂಡಲೇ ತನ್ನ ಕಣ್ಣುಗಳನ್ನು ತೆರೆಯಿತು. ಮಗುವಿನ ಮುಖದಲ್ಲಿ ದೈವಿಕ ಕಳೆ ಮೂಡಿ ಬಂದಿತು. ತನ್ನ ಕಿವುಡು ಮೂಗು ಮಗುವು ಆರೋಗ್ಯ ಹೊಂದಿತು ಎಂದು ತಾಯಿ ಕುಣಿದಾಡಿದಳು. ಆಗ ಸಂತ ಜಟವೇದರು ಈ ರೀತಿ ತಿಳಿಸಿದರು. ಈ ಮಗುವು ಕುರಡ, ಕಿವುಡ ಮೂಗ ಯಾವುದೂ ಅಲ್ಲ. ಆದರೆ ಅವನು ಯೋಗ ನಿದ್ರೆಯಲ್ಲಿದ್ದನು. ಆದರೆ ನಾನು ಅವನನ್ನು ಪ್ರಾಪಂಚಿಕ ಸ್ಥಿತಿಗೆ ತಂದನು, ಎಂದು ಹೇಳಿದರು.

ಮಗುವು ಬೆಳೆದಂತೆ ಅವನನ್ನು ಕೂಡಲ ಸಂಗಮದ ಸಂತ ಜಟವೇದರ ಬಳಿ ವಿದ್ಯಾಭ್ಯಾಸಕ್ಕೆ ಕಳುಹಿಸಲಾಯಿತು. ಗುರುವಿನಡಿಯಲ್ಲಿ ಬಸವೇಶ್ವರನು ಎಲ್ಲಾ ಪುರಾಣಗಳನ್ನೂ, ಶಾಸ್ತ್ರಗಳನ್ನೂ ಕಲಿತನು. ಅಲ್ಲಿ ಅವನು ಶಿವನನ್ನು ಕುರಿತು ತಪಸ್ಸನ್ನು ಮಾಡಿದನು.

ಒಂದು ದಿನ ಕಲ್ಯಾಣಿಯ ಬಿಜ್ಜಳ ದೊರೆಯ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವೇಶ್ವರನ ಚಿಕ್ಕಪ್ಪನಾದ ಬಲದೇವನು ಕಲ್ಯಾಣಿಯ ರಾಜ್ಯದ ಕೋಶಾಧಿಕಾರಿಯಾಗಿ ಕೆಲಸಮಾಡಲು ಬಸವನನ್ನು ಕರೆದುಕೊಂಡು ಹೋಗಲು ಬಸವೇಶ್ವರನ ಮನೆಗೆ ಬಂದನು. ಬಸವೇಶ್ವರನಿಗೆ ಗುರುಕುಲವನ್ನು ಬಿಟ್ಟು ಹೋಗಲು ಇಷ್ಟವಿರಲಿಲ್ಲ. ಆದರೆ ಅಂದು ರಾತ್ರಿ ಕನಸಿನಲ್ಲಿ ಶಿವನು ಕಾಣಿಸಿಕೊಂಡು ಕಲ್ಯಾಣಿಗೆ ಹೋಗಿ ಕಾರ್ಯಪ್ರವೃತ್ತನಾಗಬೇಕೆಂದೂ, ಅಲ್ಲೇ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಬೇಕೆಂದೂ ತಿಳಿಸಿದನು. ಅಲ್ಲಿ ನೀನು ಒಂದು ದೊಡ್ಡ ಸಂಸ್ಥೆಯನ್ನು ಕಟ್ಟಬೇಕಾಗಿದೆ. ಇದು ನನ್ನ ಅಪೇಕ್ಷೆ ಎಂದು ಹೇಳಿ ಅದನ್ನು ನೀನು ಚೆನ್ನಾಗಿ ಮಾಡಲಿರುವೆ ಎಂದು ಹೇಳಿದನು.

ಬಸವೇಶ್ವರನು ಗುರುಕುಲವನ್ನು ಬಿಡುವ ಮುಂಚೆ ನಂದೀಶ್ವರನ ಮುಂದೆ ಕೂತು ಧ್ಯಾನ ಮಾಡುತ್ತಿದ್ದಾಗ ನಂದೀಶ್ವರನು ತಲೆಯನ್ನಾಡಿಸಿ ತನ್ನ ಒಪ್ಪಿಗೆಯನ್ನು ಸೂಚಿಸಿದನು. ನಂದೀಶ್ವರನು ಬಾಯನ್ನು ತೆರೆದು ನಾಲಗೆಯನ್ನು ಚಾಚಿದಾಗ ಅದರ ತುದಿಯಲ್ಲಿದ ಒಂದು ಶಿವಲಿಂಗವು ಕೈ ನೀಡಿದ ಬಸವನ ಬೊಗಸೆಯಲ್ಲಿ ಬಿದ್ದಿತು. ಗುರು ಸಂತ ಜಟವೇದರ ಆಶೀರ್ವಾದ ಪಡೆದು ಶಿವಲಿಂಗವನ್ನು ಧರಿಸಿ ಕಲ್ಯಾಣಿಯ ರಾಜ್ಯದ ಕೋಶಾಧಿಕಾರಿಯಾಗಲು ಪ್ರಯಾಣಮಾಡಿದನು. ಆಧ್ಯಾತ್ಮಿಕ ಪ್ರವೃತ್ತಿಯುಳ್ಳ ಗಂಗಾಂಬಿಕೆ ಎಂಬುವಳನ್ನು ಬಸವೇಶ್ವರರು ಮದುವೆಯಾದರು.

ಕಲ್ಯಾಣಿಯ ರಾಜನ ಗ್ರಂಥಾಲಯದಲ್ಲಿ ಒಮ್ಮೆ ಒಂದು ತಾಮ್ರದ ತಟ್ಟೆಯಲ್ಲಿ ಬರೆದ ಒಂದು ಫಲಕ ದೊರೆಯಿತು, ಆಸ್ಥಾನದ ಯಾವ ಪಂಡಿತರಿಗೂ ಅದನ್ನು ಓದಲು ಆಗಲಿಲ್ಲ. ರಾಜನು ಬಸವೇಶ್ವರನು ಜ್ಞಾನ ಮಟ್ಟವನ್ನು ಅರಿತಿದ್ದರಿಂದ ಅವನನ್ನು ಅದನ್ನು ಓದಿ ಹೇಳಲು ಕರೆಸಿದನು. ಅದರಲ್ಲಿ ರಾಜನ ಸಿಂಹಾಸನದ ಕೆಳಗೆ ಅಗೆದರೆ ಬೇಕಾದಷ್ಟು ಐಶ್ಚರ್ಯದ ರಾಶಿ ಸಿಗುವುದೆಂದು ಅದರಲ್ಲಿ ಬರೆದಿತ್ತು. ಅದರಂತೆ ಮಾಡಿದಾಗ ಬೇಕಾದಷ್ಟು ಹಣ, ಬೆಲೆ ಬಾಳುವ ವಜ್ರ ವೈಢೂರ್ಯಗಳು ದೊರೆತವು. ದೊರೆಗೆ ಆನಂದವುಂಟಾಗಿ ಇದಕ್ಕೆ ಕಾರಣನಾದ ಬಸವೇಶ್ವರನನ್ನು ಮಂತ್ರಿಯನ್ನಾಗಿ ಮಾಡಿ ಆ ಐಶ್ವರ್ಯವನ್ನು ಪ್ರಜೆಗಳ ಒಳಿತಿಗೆ ಉಪಯೋಗಿಸುವಂತೆ ಅವನಿಗೆ ಅಪ್ಪಣೆ ಮಾಡಿದನು.

ಬಸವೇಶ್ವರರು ಒಳ್ಳೆಯ ಕಾರ್ಯ ನಿರ್ವಾಹಕರು, ಪ್ರಜೆಗಳ ಅನುಕೂಲಕ್ಕಾಗಿ ಅನೇಕ, ಕಾರ್ಯಗಳನ್ನು ರಾಜ್ಯದಲ್ಲಿ ಮಾಡಿಸಿದರು. ಕೆರೆಗಳ ನಿರ್ಮಾಣ, ರಸ್ತೆಗಳ ನಿರ್ಮಾಣ ಮುಂತಾದ ಕಾರ್ಯಗಳನ್ನು ಮಾಡಿಸಿದರು. ಅಲ್ಲದೆ, ಮತೀಯ ಮತ್ತು ಸಾಮಾಜಿಕ ಸುಧಾರಣೆಗಳನ್ನು ಮಾಡಿದರು. ಅವರು ‘ವೀರಶೈವ ಮತ’ ಎಂಬ ಮತಧರ್ಮದ ಸಂಸ್ಥಾಪಕರಾದರು. ಈ ಮತದಲ್ಲಿ ಎಲ್ಲಾ ವರ್ಗದ ಕಸುಬಿನ ಹೆಣ್ಣು ಗಂಡುಗಳೆಂದು ಭೇದವಿಲ್ಲದೆ ಎಲ್ಲರಿಗೂ ಪ್ರವೇಶವಿತ್ತು. ಭಗವಾನ್ ಬುದ್ಧನ ನಂತರ ಇಂತಹ ಮತೀಯತೆ, ಮೇಲು ಕೀಳು, ಲಿಂಗಬೇಧವಿಲ್ಲದ ಮತ ಇದೊಂದೇ ಎಂದರೆ ತಪ್ಪಾಗಲಾರದು. ಅಸ್ಪಶ್ಯರು, ಬ್ರಾಹ್ಮಣರು, ನಾಪಿತ ಎಲ್ಲರೂ ಒಂದಾಗಿ ಬಾಳಲು ದಾರಿ ತೋರಿತು. ಅವರಲ್ಲೇ ಅಂತರ್ಜಾತೀಯ ವಿವಾಹಕ್ಕೆ ಅನುಮಾಡಿ ಕೊಟ್ಟಿತು. ಜಾತೀಯತೆ ಮತ್ತು ಸಾಮಾಜಿಕ ಅಂತಸ್ತುಗಳ ಸಮಾನತೆಯಲ್ಲಿ ಭೇದ ಇರಬಾರದು ಎಂದು ಬಸವೇಶ್ವರರು ಬೋಧಿಸಿದರು. ಹೇಗೆ ಮಹಾವೀರ ಮತ್ತು ಗೌತಮ ಬುದ್ಧ ಅಹಿಂಸೆಗೆ ಮಹತ್ವ ನೀಡಿದರೋ ಅದರಂತೆ ಬಸವೇಶ್ವರರೂ ಜೀವನದ ಪವಿತ್ರತೆಯನ್ನು ಎತ್ತಿ ಹಿಡಿದು ಬಲಿ ಹಿಡಿಯುವುದು ತಪ್ಪೆಂದು ಬೋಧಿಸಿದರು.

ಬಸವೇಶ್ವರರು ಸ್ವತಃ ಕವಿಗಳಾಗಿದ್ದರು. ಅನೇಕ ವಚನಗಳನ್ನು ರಚಿಸಿದ್ದಾರೆ. ಇತರರು ವಚನಗಳನ್ನು ರಚಿಸಲು ಉತ್ಸಾಹ ನೀಡಿದರು. ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಬೆಲೆಯುಳ್ಳ ಭಾಗವಾಗಿವೆ. ಬಸವೇಶ್ವರರು ಪ್ರೇಮ ಮತ್ತು ಕರುಣೆಯೇ ಮೂರ್ತಿವೆತ್ತಂತಿದ್ದರು. ಒಮ್ಮೆ ಕೆಲವು ಕಳ್ಳರು ಇವರ ಹಸುಗಳನ್ನು ಕದ್ದುಕೊಂಡು ಹೋದರು. ಇದನ್ನು ತಿಳಿದಾಗ ಬಸವೇಶ್ವರರು ಆಳುಗಳನ್ನು ಕರೆದು ಕರುಗಳನ್ನು ಕರೆದುಕೊಂಡು ಹೋಗಿ ಕಳ್ಳರಿಗೇ ತಲುಪಿಸಿ ಆಗ ಕರುಗಳು ತಮ್ಮ ತಾಯಿಯೊಂದಿರೊಡನೆ ಇರಲಿ,” ಎಂದರು.

ಸಂಧ್ಯಾಕಾಲದಲ್ಲಿ ದಿನದ ಕೆಲಸಮುಗಿಸಿಕೊಂಡು ಎಲ್ಲಾ ಭಕ್ತರೂ (ಶರಣರು) ಬಸವೇಶ್ವರರ ಮನೆಯಲ್ಲಿ ಸೇರಿ ಶಿವನ ನಾಮಸಂಕೀರ್ತನೆ ಮಾಡಿ ಒಟ್ಟಿಗೆ ಊಟಮಾಡಿ ಅವರವರ ಮನೆಗಳಿಗೆ ತೆರಳುತ್ತಿದ್ದರು.
ಒಂದು ಸಲ ಒಂದು ಗೂಳಿಕಾಳಗದ ಪಂದ್ಯವನ್ನು ಕಲ್ಯಾಣಿಯಲ್ಲಿ ಮಾಡಿದ್ದರು. ಒಂದು ಸಣ್ಣ ಬಾಲಕನು ತನ್ನ ಕೈಯಲ್ಲಿರುವ ಆಟದ ಗೂಳಿಯು ಪಂದ್ಯದಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಅಳುತ್ತಾ ದೊರೆಯಲ್ಲಿ ದೂರು ಹೇಳಿದನು. ಅದಕ್ಕೆ ದೊರೆಯು ಇದು ಒಂದು ಆಟದ ಸಾಮಾನು ಅದನ್ನು ಶಿವನೂ ಓಡುವಂತೆ ಮಾಡಲಾರ ಎಂದು ಹಾಸ್ಯ ಮಾಡಿದನು. ಆಗ ಬಸವೇಶ್ವರರು ಶಿವನು ಮಾಡಲಾಗದ ಯಾವುದೂ ಇಲ್ಲ ಎಂದು ಹೇಳಿ ಆ ಆಟದ ಗೂಳಿಯನ್ನು ಮುಟ್ಟಿದರು ಮತ್ತು ಅದನ್ನು ಪಂದ್ಯದ ಮಾರ್ಗದಲ್ಲಿ ಇಡಲು ಹೇಳಿದರು. ಅದೇನಾಶ್ಚರ್ಯ ಆಟದ ಸಾಮಾನಿನ ಗೂಳಿ ಇತರ ನಿಜ ಗೂಳಿಗಳನ್ನೆಲ್ಲಾ ಗೆದ್ದು ಪಂದ್ಯದಲ್ಲಿ ಮುಂದೆ ಬಂತು. ಈ ಘಟನೆಯು ನಡೆದ ಮೇಲೆ ಬಸವೇಶ್ವರರು ಸಾಮಾನ್ಯ ಮನುಷ್ಯರಲ್ಲ ಅವರು ಅಸಾಮಾನ್ಯ ದೈವೀ ಪುರುಷರು ಎಂದು ಅಂದಿನಿಂದ ಬಸವ ಎಂದು ಕರೆಯುತ್ತಿದ್ದ ಎಲ್ಲರೂ ‘ಬಸವೇಶ್ವರ’ ಎಂದು ಕರೆಯಲು ಪ್ರಾರಂಭಿಸಿದರು.

ಬಸವೇಶ್ವರರು ಸಮಾಜದ ದುಷ್ಟ ಆಚಾರಗಳನ್ನು ಅಳಿಸಲು ಪ್ರಯತ್ನಿಸಿ ಜನರಲ್ಲಿ ಪರಿಶುದ್ಧವಾದ ಆಧ್ಯಾತ್ಮಿಕತೆಯನ್ನು ಬೆಳೆಸಿದರು. ಅವರು ಜನರಲ್ಲೂ ಮತ್ತು ದೊರೆಯಲ್ಲೂ ಪ್ರೀತಿ ಪಾತ್ರರಾಗಿ, ಜನಾನುರಾಗಿಯದ್ದುದನ್ನು ಕಂಡು ಅನೇಕರು ಹೊಟ್ಟೆಕಿಚ್ಚು ಪಡಲು ಪ್ರಾರಂಭಿಸಿದರು. ಇಂತಹ ಸಮಯದಲ್ಲಿ ಒಬ್ಬ ಬ್ರಾಹ್ಮಣನ ಮಗಳು ಒಬ್ಬ ಅಸ್ಪಶ್ಯನ ಮಗನನ್ನು ಮದುವೆಯಾದಳು. ದೊರೆಗೂ ಇಂತಹ ಅಂತರ್ಜಾತೀಯ ವಿವಾಹಕ್ಕೆ ಸಮ್ಮತಿ ಕೊಡಲು ಇಷ್ಟವಿರಲಿಲ್ಲ. ಮದು ಮಕ್ಕಳನ್ನು ತಂದೆ ತಾಯಿಗಳನ್ನು ಸೆರೆಮನೆಗೆ ಕಳುಹಿಸಲಾಯಿತು. ಇದರಿಂದ ರೋಷಗೊಂಡ ಜನರು ದೊರೆಯನ್ನು ಕೊಂದರು. ಈ ರೀತಿಯ ಕ್ರೂರ ಹಿಂಸೆಗಳು ಸಮಾಜದಲ್ಲಿ ಅತಿಯಾದಾಗ ಬಸವೇಶ್ವರರು ಮಂತ್ರಿ ಪದವಿ ತ್ಯಜಿಸಿ, ಬೇಜಾರಿನಿಂದ ಮತ್ತು ದುಃಖದಿಂದ ಕೂಡಲ ಸಂಗಮಕ್ಕೆ ಬಂದು ಶಿವನ ಕುರಿತು ತಪಸ್ಸು ಮಾಡಲು ಪ್ರಾರಂಭಿಸಿದರು. ಒಂದು ಗುಂಪಿನ ಜನರು ಬಸವೇಶ್ವರರು ಮಾಡಿದ ಮೇಲುಕೀಳು ಎಂಬುದಿಲ್ಲ ಎಲ್ಲರೂ ಸಮಾನರು ಎಂಬ ಭಾವನೆ ಸರಿಯಿಲ್ಲ. ಆದುದರಿಂದ ಬಸವೇಶ್ವರರನ್ನು ಮಂತ್ರಿ ಪದವಿಯಿಂದ ಹೊರಹಾಕುವಂತೆ ರಾಜನನ್ನು ಬಲವಂತ ಮಾಡಿದರು ಎಂದು ಹೇಳುತ್ತಾರೆ.

ಭಕ್ತಿಯೇ ಮೂರ್ತಿವೆತ್ತಂತ್ತಿದ್ದ ಬಸವೇಶ್ವರರನ್ನು ‘ಭಕ್ತಿ ಭಂಡಾರಿ ಬಸವಣ್ಣ’ ಎಂದು ಕರೆದಿದ್ದಾರೆ.

ಅವರ ಬೋಧನೆಗಳು:

ದೇವರು ಸತ್ಯಸ್ವರೂಪಿ ಮತ್ತು ಸರ್ವವ್ಯಾಪಿ. ಅವನು ಬಡಬಾಗ್ನಿ (ನೀರಿನಲ್ಲಿರುವ ಬೆಂಕಿಯಂತೆ) ಯಂತೆಯೂ, ಹೂಗಳಲ್ಲಿರುವ ಪರಿಮಳದಂತೆಯೂ ಇದ್ದಾನೆ. ದೇವರ ಇರುವಿಕೆಯನ್ನು ಈಗಲೇ ಇಲ್ಲಿಯೇ ಅನುಭವಿಸಬಹುದು. ದೇವರಲ್ಲಿ ಸತ್ಯವಾದ ವ್ಯಾಕುಲತೆಯ ಬೇಡಿಕೆಗೆ ಉತ್ತರ ದೊರೆಯುತ್ತದೆ.

ಬಸವೇಶ್ವರರ ವಚನಗಳು:
  1. ನರೆ ಕೆನ್ನೆಗೆ ತೆರೆಗಲ್ಲಕೆ, ಶರೀರ ಗೂಡು ವೋಗದ ಮುನ್ನ,
    ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ,
    ಕಾಲಮೇಲೆ ಕೈಯ್ಯನೂರಿ ಕೋಲು ಹಿಡಿಯದ ಮುನ್ನ,
    ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ,
    ಪೂಜಿಸು ಕೂಡಲ ಸಂಗಮ ದೇವನ ||

ದೇಹ ಮುಪ್ಪಡರಿ ಮೃತ್ಯುವಶವಾಗುವ ಮುನ್ನವೇ ಭಗವಂತನನ್ನು ಪೂಜಿಸಬೇಕು. ಕೆನ್ನೆಯಲ್ಲಿ ನರೆಕೂದಲು, ಸುಕ್ಕುಗಟ್ಟಿದ ಗಲ್ಲ, ಶರೀರವೆಲ್ಲಾ ಬಾಡಿ ಗೂಡಾಗುವ ಮೊದಲು, ಹಲ್ಲುಗಳು ಉದುರಿ ಹೋಗಿ ಬೆನ್ನು ಬಾಗುವ ಮೊದಲು, ಇನ್ನೊಬ್ಬರ ನೆರವಿಗೆ (ಹಂಗಿಗೆ) ಬೀಳುವ ಮೊದಲು, ಕಾಲ ಮೇಲೆ ಕೈಯ್ಯನ್ನೂರಿ ಮೇಲೆದ್ದು ಕೋಲು ಹಿಡಿದು ನಡೆಯುವ ಮೊದಲು, ಮುಪ್ಪಿನಿಂದ ದೇಹದ ಸ್ಥಿತಿ ಕೆಡುವ ಮೊದಲು ಮತ್ತು ಮೃತ್ಯು ಬಂದು ಕರೆದೊಯ್ಯುವ ಮೊದಲೇ ಕೂಡಲ ಸಂಗಮದೇವನನ್ನು ಪೂಜಿಸು.

  1. ಅಂಗೈಯೊಳಗಣ ಲಿಂಗವ ನೋಡುತ್ತ
    ಕಂಗಳು ಕಡೆಗೋಡಿವರಿಯುತ್ತ, ಸುರಿಯುತ್ತ ಎಂದಿಪ್ಪಿನೊ
    ನೋಟವೇ ಪ್ರಾಣವಾಗಿ ಎಂದಿಪ್ಪನೋ
    ಕೂಟವೇ ಪ್ರಾಣವಾಗಿ ಎಂದಿಪ್ಪನೋ
    ಎನ್ನ ಅಂಗವಿಕಾರದ ಸಂಗವಳಿದು
    ಕೂಡಲ ಸಂಗಯ್ಯ, ಲಿಂಗ ಲಿಂಗವೆನ್ನುತ ||

ಅಂಗೈಯೊಳಗಿರುವ ಲಿಂಗವನ್ನು ನೋಡುತ್ತಾ ಕಣ್ಣುಗಳಿಂದ ಆನಂದಾಶ್ರುಗಳು ತುಂಬಿ ಹೊರ ಸೂಸಬೇಕು. ನೋಟವೇ ಪ್ರಾಣವಾಗಿ ಅಂದರೆ ಪ್ರಾಣ ನೋಟದಲ್ಲಿ ಬೆರೆತು ಕೂಟದಲ್ಲಿ ಬೆರೆತು ಅಂಗವಿಕಾರಗಳು ಅಳಿಯವಂತಾಗಬೇಕು. ನೋಟ, ಲಿಂಗನೋಟವಾಗಬೇಕು. ಕೂಟ ಲಿಂಗಕೂಟವಾಗಬೇಕು. ಪ್ರಾಣ, ಲಿಂಗಪ್ರಾಣವಾಗಬೇಕು. ಇದು ಆನಂದದ ಉನ್ಮಾದಾವಸ್ಥೆ.

  1. ಮಾತಿನ ಮಂತಿಂಗೆ ನಿನ್ನ ಕೊಂದಹರೆಂದು
    ಎಲೆ ಹೋತ ಅಳು ಕಂಡಾ!
    ವೇದವನೋದಿದವರ ಮುಂದೆ ಅಳು ಕಂಡಾ!
    ಶಾಸ್ತ್ರವ ಕೇಳಿದವರ ಮುಂದೆ ಅಳು ಕಂಡಾ!
    ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲ ಸಂಗಮ ದೇವ ||

ಯಜ್ಞದಲ್ಲಿ ಬಲಿ ಕೊಡಲು ಹೋತವನ್ನು ಯಜ್ಞಶಾಲೆಯ ಮುಂದೆ ಕಟ್ಟಿದ್ದಾರೆ. ಆ ಹೊತ ಒಂದೇ ಸಮನೆ ಅರಚುತ್ತಿದೆ. ಅದನ್ನು ಕಂಡು ಮರುಗಿದ ಬಸವಣ್ಣನವರು ಬಹುಶಃ ಅದರ ಮೈದಡವುತ್ತ ಈ ಮಾತನ್ನು ಹೇಳುತ್ತಾರೆ: “ವೇದಗಳನ್ನು ಓದಿದವರ, ಶಾಸ್ತ್ರಗಳನ್ನು ಕೇಳಿದವರ ಮುಂದೆ ಅಳು, ನೀನು ಅತ್ತದ್ದಕ್ಕೆ ತಕ್ಕ ಫಲವನ್ನು ಅವರು ಅನುಭವಿಸಲೇ ಬೇಕಾಗುತ್ತದೆ.”

  1. ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು?
    ಕೋಳಿ ಒಂದು ಗುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲ?
    ಶಿವಭಕ್ತನಾಗಿ ಭಕ್ತಿ ಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ ಕರಕಷ್ಟ ಕೂಡಲ ಸಂಗಮದೇವ

ಕಾಗೆ ಒಂದು ಅಗುಳನ್ನು ಕಂಡರೆ ಕಾ, ಕಾ ಎಂದು ತನ್ನ ಬಳಗವನ್ನೆಲ್ಲಾ ಕರೆಯುತ್ತದೆ. ಕೋಳಿ ಒಂದು ಕಾಳನ್ನು ಕಂಡರೆ ತನ್ನ ಕುಲವನ್ನೆಲ್ಲಾ ಕೂಗಿ ಕರೆಯುತ್ತದೆ. ಹಾಗೆಯೇ ಶಿವಭಕ್ತನಾದವನು ಭಕ್ತರೊಡನೆ ಹಂಚಿಕೊಳ್ಳದಿದ್ದರೆ, ಆ ಕಾಗೆ ಕೋಳಿಗಳಿಗಿಂತ ಕೀಳಾಗುತ್ತಾನೆ.

  1. ಅಯ್ಯಾ ನಿಮ್ಮ ಅನುಭಾವದಿಂದ ಎನ್ನ ತನು ಹಾಳಾಯಿತ್ತಯ್ಯಾ,
    ಅಯ್ಯಾ ನಿಮ್ಮ ಅನುಭಾವದಿಂದ ಎನ್ನ ಮನ ಹಾಳಾಯಿತ್ತಯ್ಯಾ
    ಅಯ್ಯಾ ನಿಮ್ಮ ಅನುಭಾವದಿಂದ ಎನ್ನ ಕರ್ಮ ಛೇದನವಾಯಿತ್ತಯ್ಯಾ
    ನಿಮ್ಮವರು ಅಡಿಗಡಿಗೆ ಹೇಳಿ ಭಕ್ತಿಯೆಂಬ ಒಡವೆಯ
    ದಿಟವ ಮಾಡಿ ತೋರಿದರು ಕಾಣಾ, ಕೂಡಲ ಸಂಗಮದೇವ

ನಿಮ್ಮ ಅನುಭಾವದಿಂದ ದೇಹ ಭಾವ ಅಳಿಯಿತು. ಮನಸ್ಸಿನ ಸಂಕಲ್ಪ ವಿಕಲ್ಪಗಳು ನಷ್ಟವಾದವು. ಕರ್ಮಫಲಗಳು ನಾಶವಾದವು. ನಿಮ್ಮನ್ನು ಅರಿತ ಭಕ್ತರು ನನಗೆ ಹೇಳಿ ಹೇಳಿ ಭಕ್ತೆ ಎಂಬ ಒಡವೆಯನ್ನು ಸತ್ಯವನ್ನಾಗಿ ಮಾಡಿದರು. ಶರಣರ ಕೃಪೆಯಿಂದ ಭಕ್ತಿ ಸಾರ್ಥಕತೆ ಪಡೆಯಿತು.

Leave a Reply

Your email address will not be published. Required fields are marked *