ಶ್ರೀ ಕನಕದಾಸರು

Print Friendly, PDF & Email
ಶ್ರೀ ಕನಕದಾಸರು

ಭಕ್ತನಿಗೆ ದೇವರ ಮೇಲೆ ಇರುವ ಪ್ರೇಮಕ್ಕಿಂತ ದೇವರಿಗೆ ಭಕ್ತನ ಮೇಲಿರುವ ಪ್ರೇಮ ಅತಿ ತೀವ್ರವಾಗಿರುತ್ತದೆ.

ಭಕ್ತನು ದೇವರನ್ನು ಹೆಚ್ಚು ಪ್ರೀತಿಸುತ್ತಾನೋ ಅಥವಾ ದೇವರು ಭಕ್ತನನ್ನು ಹೆಚ್ಚು ಪ್ರೀತಿಸುತ್ತಾನೋ ಎನ್ನುವುದು ಬಿಡಿಸಲು ಅಸಾಧ್ಯವಾದ ಒಗಟಾಗಿರುತ್ತದೆ. ಶ್ರೀ ಮಧ್ವಾಚಾಯ೵ರಿಂದ ಉಡುಪಿಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀಕೃಷ್ಣನ ವಿಗ್ರಹವು ಸಾಮಾನ್ಯ ರೀತಿಯಲ್ಲಿ ಎದುರಿಗಿಲ್ಲದೆ ತಿರುಗು ಮುರುಗಾಗಿದೆ. ಉಡುಪಿಯ ದೇವಸ್ಥಾನವನ್ನು ಶ್ರೀಮಧ್ವಾಚಾಯ೵ರೇ ಕಟ್ಟಿಸಿದರು. ನಾನೂರು ವರ್ಷಗಳ ಹಿಂದೆ ದೇವಸ್ಥಾನದ ಹಿಂದುಗಡೆ ನಿಂತಿದ್ದ ಕನಕದಾಸ ಎಂಬ ಮಹಾಭಕ್ತನಿಗೆ ದರ್ಶನ ನೀಡಲು ಶ್ರೀಕೃಷ್ಣನ ವಿಗ್ರಹ ತನ್ನ ನಿಲುವನ್ನು ಬದಲಾಯಿಸಿತಂತೆ. ಹಿಂದಿನ ಕಿಟಿಕಿಯ ಕಂಡಿಗಳಿಂದ ತನ್ನ ದರ್ಶನಕ್ಕೆ ಕಾತರಿಸುತ್ತಿದ್ದ ಕನಕದಾಸನಿಗೆ ಶ್ರೀಕೃಷ್ಣನ ವಿಗ್ರಹವೇ ಅವನ ಕಡೆಗೆ ಮುಖ ಮಾಡಿ ತಿರುಗಿದ್ದು ಈಗಲೂ ಹಾಗೆಯೇ ಇದೆ. ಭಗವಂತನಿಗೆ ಭಕ್ತನ ಮೇಲಿರುವ ಪ್ರೇಮದ ಪರಾಕಾಷ್ಠತೆಯನ್ನು ತಿಳಿಸುತ್ತದೆ. ಕನಕದಾಸನು ಕೀಳುಮತದಲ್ಲಿ ಹುಟ್ಟಿದವನೆಂದು ಅವನಿಗೆ ದೇವಸ್ಥಾನದೊಳಗೆ ಹೋಗಲು ಅಂದಿನ ಪೂಜಾರಿಗಳು ಅನುಮತಿ ಕೊಡಲಿಲ್ಲ. ಶ್ರೀಕೃಷ್ಣನ ಮೇಲಿದ್ದ ಅವನ ಪ್ರೇಮ ಮತ್ತು ಭಕ್ತಿ, ದೂರದಿಂದಲಾದರೂ ಶ್ರೀಕೃಷ್ಣನ ದರ್ಶನ ಮಾಡಿ ಪಾವನನಾಗುತ್ತೇನೆಂದು ದೇವಸ್ಥಾನದ ಹಿಂಬದಿಗೆ ಹೋಗಿ ಅಳುತ್ತಾ ದೇವರ ದರ್ಶನ ಪಡೆಯಲು ಅದೃಷ್ಟವಿಲ್ಲದ ಹೀನ ಜಾತಿಯಲ್ಲಿ ಹುಟ್ಟಿದ ತನ್ನ ದುರಾದೃಷ್ಟವನ್ನು ಚಿಂತಿಸುತ್ತಾ ಪ್ರಾರ್ಥಿಸುತ್ತಿದ್ದನು. ಎಲ್ಲರ ಸೃಷ್ಟಿಕರ್ತನೂ ತಂದೆಯೂ ಆದ ದೇವರು ಏಕೆ ಈ ರೀತಿಯ ವ್ಯತ್ಯಾಸ ಮಾಡುವನೆಂದು ದುಃಖಿಸುತ್ತಿದ್ದನು.

ಇಲ್ಲ ಎಂದಿಗೂ ಹಾಗಲ್ಲ; ಲೋಕಕ್ಕೆಲ್ಲಾ ತಿಳಿಸುವಂತೆ ಯಾವ ಜಾತಿಯಲ್ಲಿ ಹುಟ್ಟಿದ್ದರೂ ಯಾವ ಯೋಗ್ಯತೆ ಇದ್ದರೂ ಯಾವ ವಯಸ್ಸಿನವರಾದರೂ ದೇವರಿಗೆ ಬೇಕಾದುದು ಭಕ್ತನಲ್ಲಿರುವ ಭಕ್ತಿಯ ತೀವ್ರತೆ ಮತ್ತು ಭಗವಂತನ ದರ್ಶನದ ವ್ಯಾಕುಲತೆಯೇ ಹೊರತು ಬೇರೆಯಲ್ಲ. ಅದ್ದರಿಂದ ಪೀಠದ ಮೇಲಿದ್ದ ಶ್ರೀಕೃಷ್ಣನ ವಿಗ್ರಹವು ತಿರುಗಿ ಗೋಡೆಯಲ್ಲಿ ಬಿರುಕುಂಟಾಗಿ ಹಿಂದಿನ ಗೋಡೆಯ ಬಳಿ ಇದ್ದ ಪರಮಭಕ್ತ ಕನಕದಾಸನಿಗೆ ದರ್ಶನ ಭಾಗ್ಯವನ್ನು ಕರುಣಿಸಿದನು. ಈಗಲೂ ಉಡುಪಿಯಲ್ಲಿ ಹಿಂದಿನ ಗೋಡೆಯ ಕಿಟಕಿಯಿಂದಲೇ ಭಕ್ತರು ಕನಕದಾಸನಿಗೆ ದರ್ಶನ ನೀಡುತ್ತ ನಿಂತಿರುವ ಶ್ರೀ ಕೃಷ್ಣನ ದರ್ಶನ ಮಾಡಬೇಕು. ಇದಕ್ಕೆ ‘ಕನಕನ ಕಿಟಿಕಿ ಅಥವಾ ಕನಕನ ಕಿಂಡಿ’ ಎನ್ನುತ್ತಾರೆ.

ಉಡುಪಿಯ ‘ಬಾಲಕೃಷ್ಣನ’ ಈ ಉಪಕಥೆಯಿಂದ ದೇವರ ದರ್ಶನಕ್ಕೆ ಭಕ್ತನಲ್ಲಿ ಎಷ್ಟು ಪ್ರೇಮ ಮತ್ತು ಭಕ್ತಿಯ ವ್ಯಾಕುಲತೆ ಇರುತ್ತದೆಯೋ ಅಷ್ಟೇ ನಿಜವಾದ ಭಕ್ತನ ಮೇಲೆ ಭಗವಂತನ ಕರುಣೆಯೂ ಪ್ರೇಮವೂ ಇರುತ್ತದೆ ಎಂಬುದು ಅರಿವಾಗುತ್ತದೆ.

ಅವರ ಜೀವನ ಚರಿತ್ರೆ

ಕನಕದಾಸರು ಕ್ರಿ.ಶ. 1508ರಿಂದ 1606ರವರೆಗೆ ಇದ್ದರು. ದಾಸ-ದಾಸ್ಯದ ಭಕ್ತಿಮಾರ್ಗವನ್ನು ತೋರಿದ ಕರ್ನಾಟಕದ ಸಂತ ಶ್ರೇಷ್ಠರಲ್ಲಿ ಇವರೂ ಒಬ್ಬರಾಗಿದ್ದಾರೆ. ಕರ್ನಾಟಕ ದೇಶದ ಧಾರವಾಡ ಜಿಲ್ಲೆಯ ಬಾಡ ಎಂಬ ಜಿಲ್ಲೆ ಇವರ ಜನ್ಮಸ್ಥಳ. ಬಾಡ ಊರಿನ ಪಾಳೆಯಗಾರನಾದ ಬೀರಪ್ಪ (ಬೀರ ನಾಯಕ) ಎಂಬುವರು ಇವರ ತಂದೆ, ತಾಯಿಯ ಹೆಸರು ಬಚ್ಚಮ್ಮ. ಬಹಳ ಕಾಲದವರೆಗೆ ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ತಿರುಪತಿಯ ಯಾತ್ರೆ ಮಾಡಿ ಈ ದಂಪತಿಗಳು ಶ್ರೀ ವೆಂಕಟೇಶ್ವರನನ್ನು ಪ್ರಾರ್ಥಿಸಿದ ಫಲವಾಗಿ ಅವರಿಗೆ ಒಂದು ಗಂಡು ಮಗುವಾಯಿತು. ಅದಕ್ಕೆ ತಿಮ್ಮಪ್ಪ ಎಂದು ಹೆಸರಿಟ್ಟರು.

ಆಗ ವಿಜಯನಗರದ ಶ್ರೀಕೃಷ್ಣದೇವರಾಯನು ರಾಜ್ಯಭಾರ ಮಾಡುತ್ತಿದ್ದನು. ಆಗ ಕರ್ನಾಟಕವನ್ನು ಸ್ವರ್ಣಯುಗ’ ಎಂದು ಕರೆಯುತ್ತಿದ್ದರು. ಕೃಷ್ಣದೇವರಾಯನು ಒಳ್ಳೆಯ ಮಾನ್ಯ ಕುಲೀನರಾದ ದೊರೆಯಾಗಿ, ಸರಿಯಾಗಿ ರಾಜ್ಯಭಾರ ನಡೆಸುತ್ತಿದ್ದುದ್ದರಿಂದ ದೇಶದಲ್ಲೆಲ್ಲಾ ಸಮೃದ್ಧತೆ, ಶಾಂತಿ, ಸೌಹಾರ್ದದ ವಾತಾವರಣವಿತ್ತು. ತಿಮ್ಮಪ್ಪನು ಚಿಕ್ಕಂದಿನಲ್ಲಿ ರಾಜ ಭೋಗಗಳನ್ನು ಅನುಭವಿಸಿದನು. ಚಿಕ್ಕ ಪುಟ್ಟ ಯುದ್ಧಗಳಲ್ಲಿ ಗೆಲವು ಪಡೆದು ಸಮರ ವೀರನೆನಿಸಿಕೊಂಡು ಕಡೆಗೆ ಸಂತ ಶ್ರೇಷ್ಠನಾದನು. ರಾಜ ಅಶೋಕನು ‘ಕಳಿಂಗ ಯುದ್ಧ’ವಾದ ಮೇಲೆ ಹೇಗೆ ಸನ್ಯಾಸಿಯಾದನೋ ಅದರಂತೆಯೇ ಯುದ್ಧಗಳ ದುರಂತಗಳು ತಿಮ್ಮಪ್ಪನ ಮನಸ್ಸನ್ನು ಕಲಕಿ ಅವನು ಇನ್ನು ಯುದ್ಧ ಮಾಡುವುದಿಲ್ಲವೆಂದು ಮನಸ್ಸು ಮಾಡಿದನು.

ಅವನ ತಂದೆಯು ಸತ್ತು ಹೋದ ಮೇಲೆ ತಿಮ್ಮಪ್ಪ ಬಾಡ ಜಿಲ್ಲೆಗೆ ದೊರೆಯಾದನು. ಅವನು ಭೂಮಿಯಲ್ಲಿ ಅಗೆಯುತ್ತಿದ್ದಾಗ ಅವನಿಗೆ ಚಿನ್ನದಿಂದ ತುಂಬಿದ ಅನೇಕ ಕೊಡಗಳು ಸಿಕ್ಕಿದವು. ಅಂದಿನಿಂದ ಎಲ್ಲರೂ ಅವನನ್ನು ‘ಕನಕ’ ಎಂದು ಕರೆಯತೊಡಗಿದರು. ‘ಕನಕ’ ಎಂದರೆ ‘ಚಿನ್ನ’ ಎಂದರ್ಥ. ಈ ಸಿಕ್ಕಿದ ಐಶ್ವರ್ಯವನ್ನು ಧರ್ಮ ಕಾರ್ಯಗಳಾದ ಕೆರೆ ಕಟ್ಟೆಗಳ ನಿರ್ಮಾಣ, ದೇವಸ್ಥಾನ, ಧರ್ಮ ಛತ್ರಗಳ ನಿರ್ಮಾಣದಿಂದ ಆ ಊರಿನ ಜನರಿಗೆ ಹಿತವನ್ನುಂಟು ಮಾಡಿದನು.

ಕನಕನಿಗೆ ಅನುಕೂಲೆಯಾದ ಭಕ್ತಿ ಮಾರ್ಗವನ್ನು ಅನುಸರಿಸುವ ಪತ್ನಿಯಿದ್ದಳು. ಲೌಕಿಕವಾದ ಎಲ್ಲಾ ಐಶ್ವರ್ಯಗಳಿದ್ದರೂ ಪಾರಮಾರ್ಥಿಕವಾದ ಚಿಂತೆಯು ಕನಕನಲ್ಲಿ ಬರುವ ಕಾಲ ಒದಗಿ ಬಂತು. ತಿರುಪತಿಯ ವೆಂಕಟೇಶ್ವರ ಅವರ ಮನೆ ದೇವರಾಗಿದ್ದರೂ ಕಾಗಿನೆಲೆಯ ಆದಿಕೇಶವ ಕನಕನ ಆರಾಧ್ಯ ದೇವರಾಗಿದ್ದನು. ತನ್ನನ್ನೇ ಧ್ಯಾನಿಸುತ್ತಿದ್ದ ಕನಕನನ್ನು ತನ್ನ ದಾಸನನ್ನಾಗಿ ಮಾಡಿಕೊಂಡು ತನ್ನ ಅರಿವನ್ನು ಲೋಕಕ್ಕೆ ಮಾಡಿ ಕೊಡಲು ಕನಕನೇ ಸರಿಯಾದ ಭಕ್ತನೆಂದು ಕೇಶವನು ಆರಿಸಿದನು. ಆಗಾಗ ಕನಕನಿಗೆ “ನೀನು ನನ್ನ ದಾಸನಾಗುವೆಯಾ?” ಎಂಬ ಧ್ವನಿಯು ಕೇಳಿಸುತ್ತಿತ್ತು, ಆದರೂ ತನ್ನ ರಾಜ್ಯಕ್ಕೆ ಒಬ್ಬ ವಾರಸುದಾರನಾಗಲು ತನಗೆ ಒಬ್ಬ ಮಗನಾಗಬೇಕೆಂದು ಕನಕನು ಅಪೇಕ್ಷಿಸಿದನು. ಆದರೆ ದುರಾದೃಷ್ಟದಿಂದ ಅವನ ಹೆಂಡತಿಯ ವಿಯೋಗವಾಯಿತು. ಅಕ್ಕಪಕ್ಕದ ರಾಜರುಗಳು ಅವನ ಮೇಲೆ ಯುದ್ಧ ಮಾಡಿ ಕನಕನನ್ನು ಸೋಲಿಸಿದರು. ಕನಕನಿಗೂ, ಅವನ ಜೊತೆಯವರೂ ಯುದ್ಧದಲ್ಲಿ ವಿಪರೀತ ಗಾಯಗೊಂಡರು. ರಾತ್ರಿಯಾದ ಮೇಲೆ ಯುದ್ಧರಂಗದ ದೃಶ್ಯ, ತನ್ನ ದೇಹದ ನೋವಿನ ಹಿಂಸೆ ಕನಕನನ್ನು ಈ ರೀತಿ ದೇವರನ್ನು ಪ್ರಾರ್ಥಿಸುವಂತೆ ಮಾಡಿತು. “ಕೇಶವ ನೀನು ಏಕೆ ನನ್ನನ್ನು ಕೈಬಿಟ್ಟು ಎಲ್ಲಿ ಹೋದೆ” ಎಂದು ತನ್ನ ಅಳಲನ್ನು ತೋಡಿಕೊಂಡನು. ಇದನ್ನೇ ಕಾಯುತ್ತಿದ್ದ ಕೇಶವನು “ನನ್ನ ದಾಸನಾಗುವೆಯಾ?” ಎಂಬ ಧ್ವನಿಯನ್ನು ಅವನು ಕೇಳುವಂತೆ ಮಾಡಿದನು. ಆಗ ಕನಕನು ನಾನು ನೋವಿನಿಂದ ಸಾಯುತ್ತಿದ್ದೇನೆ. ನನ್ನನ್ನು ಮೊದಲಿನಂತೆ ಮಾಡಿ ನಿನ್ನ ದಾಸನನ್ನಾಗಿ ಮಾಡಿಕೋ ಎಂದು ಬೇಡಿದನು. ಆಗ ವೃದ್ಧನಾದ ಒಬ್ಬ ವ್ಯಕ್ತಿ ಅವನ ಮೈಯನ್ನೆಲ್ಲಾ ಮೃದುವಾಗಿ ನೇವರಿಸಿ, ಕನಕನ ನಾಲಿಗೆಯನ್ನು ಮುಂದೆ ಚಾಚುವಂತೆ ಮಾಡಿ ಅದರ ಮೇಲೆ ಬೀಜಾಕ್ಷರಗಳನ್ನು ಬರೆದನು. ಕನಕನು ಹೊಸ ಜೀವನ ಪಡೆದನು. ವೃದ್ಧನಿಗೆ ವಂದನೆ ಸಮರ್ಪಿಸಲು ನೋಡಿದರೆ ವೃದ್ಧನು ಮಾಯವಾಗಿದ್ದನು. ವೃದ್ಧನು ಬೇರೆ ಯಾರೂ ಅಲ್ಲದೆ ತನ್ನ ಕೇಶವನೇ ಆ ರೀತಿ ಬಂದಿದ್ದನೆಂದೂ, ತನ್ನನ್ನು ರಕ್ಷಿಸಿದನೆಂದೂ ಅರಿತು ತನ್ನ ದೇಹ, ಮನಸ್ಸು, ಆತ್ಮಗಳನ್ನು ಭಗವತ್ ಸೇವೆಗೆ ಸಮರ್ಪಿಸಿ, ಕೇಶವನ ದಾಸನಾದನು.

ಮುಂದೆ ಕನಕದಾಸನೆಂದು ಕರೆಯಲ್ಪಟ್ಟು ಎಲ್ಲಾ ಹಳ್ಳಿ ಹಳ್ಳಿಗಳಲ್ಲಿ ದೇವರ ನಾಮ ಸಂಕೀರ್ತನೆ ಮಾಡುತ್ತಾ ಅಲೆದಾಡುತ್ತಿದ್ದನು. ವಿಜಯ ನಗರದ ಬಳಿ ಮಾಧ್ವ ಸಂಪ್ರದಾಯದ ಶ್ರೀ ವ್ಯಾಸರಾಯರನ್ನು ಕಂಡನು. ಅವರಲ್ಲಿ ಶಿಷ್ಯ ವೃತ್ತಿ ಮಾಡಬೇಕೆನ್ನಿಸಿತು. ಅವರೂ ಇವನ ಭಕ್ತಿ, ಜ್ಞಾನ, ವೈರಾಗ್ಯದ ದಿವ್ಯತೆಯನ್ನು ಕಂಡು ಶಿಷ್ಯನನ್ನಾಗಿ ಸ್ವೀಕರಿಸಿದರು. ಅವರ ಪಾದಗಳಿಗೆ ನಮಸ್ಕರಿಸಿ ಅವರಿಂದ ಮಂತ್ರೋಪದೇಶವನ್ನು ಪಡೆದನು.

ಗುರು ವ್ಯಾಸರಾಯರು ಕನಕದಾಸನನ್ನು ಸಮರ್ಥ ಶಿಷ್ಯನೆಂದು ಇಷ್ಟಪಡುತ್ತಿದ್ದರು. ಏಕೆಂದರೆ ಅವನು ಭಗವಂತನ ಸರ್ವವ್ಯಾಪಕತ್ವವನ್ನೂ ಸರ್ವಜ್ಞತ್ವವನ್ನೂ ಅರ್ಥಮಾಡಿಕೊಂಡು ಅದರಂತೆ ನಡೆಯುತ್ತಿದ್ದನು. ಅಲ್ಲದೆ ಆಧ್ಯಾತ್ಮಿಕ ವಿದ್ಯೆಯಲ್ಲೂ ಪಾರಂಗತನಾಗಿದ್ದನು. ಇದನ್ನು ನೋಡಿದ ಇತರ ಶಿಷ್ಯರು ಕನಕದಾಸರನ್ನು ಕಂಡರೆ ಹೊಟ್ಟೆಕಿಚ್ಚು ಪಡುತ್ತಿದ್ದರು. ಒಮ್ಮೆ ಇದನ್ನು ಸರಿಪಡಿಸಲು ವ್ಯಾಸರಾಯರು ಎಲ್ಲರಿಗೂ ಒಂದೊಂದು ಬಾಳೆಹಣ್ಣು ಕೊಟ್ಟು ಯಾರ ಗಮನಕ್ಕೂ ಬಾರದಂತೆ ತಿಂದು ಬರಬೇಕೆಂದು ಅಪ್ಪಣೆ ಇತ್ತರು. ಆತುರಾತುರವಾಗಿ ಎಲ್ಲರೂ ಒಂದೊಂದು ರಹಸ್ಯ ಸ್ಥಳಗಳಿಗೆ ಹೋಗಿ ತಿಂದು ಬಂದರು. ಆದರೆ ಕನಕದಾಸರು ಹೆದರುತ್ತಾ ಬಾಳೇ ಹಣ್ಣನ್ನು ತಿನ್ನದೇ ವಾಪಸ್ಸು ತಂದರು. ಆಗ ಗುರುಗಳು ಬಂದು ಎಲ್ಲಾ ಶಿಷ್ಯರು ಗುರುಗಳಿಗೆ ವಿಧೇಯರಾಗಿ ನಡೆದಿದ್ದಾರೆ. ನೀನು ಮಾತ್ರ ಯಾಕೆ ಬಾಳೆ ಹಣ್ಣು ತಿನ್ನಲಿಲ್ಲ ಎಂದು ಕೇಳಿದರು. ಅದಕ್ಕೆ ಕನಕದಾಸನು “ನೀವು ಹೇಳಿದ ಆಜ್ಞೆಯಂತೆ ಯಾರ ಗಮನಕ್ಕೂ ಬಾರದಂತೆ ಬಾಳೇಹಣ್ಣನ್ನು ತಿನ್ನಲು ಹೇಳಿದಿರಿ. ಆದರೆ ಸರ್ವವ್ಯಾಪಿಯಾಗಿರುವ ದೇವರು ನಮ್ಮ ಆಂತರಿಕ ಆಲೋಚನೆಗಳನ್ನು ಗಮನಿಸುವವನಾಗಿದ್ದಾನೆ. ಆದ್ದರಿಂದ ಯಾರಿಗೂ ಕಾಣದಂತೆ ಗಮನಿಸದಂತೆ ಬಾಳೇ ಹಣ್ಣನ್ನು ಹೇಗೆ ತಿನ್ನಲಿ. ನಿಮ್ಮ ಆಜ್ಞೆಯನ್ನು ಪರಿಪಾಲಿಸಲಾಗದೇ ಹಣ್ಣನ್ನು ವಾಪಸ್ಸು ತಂದಿದ್ದೇನೆ ದಯವಿಟ್ಟು ಕ್ಷಮಿಸಿ,” ಎಂದು ಬೇಡಿದನು. ಇತರ ಶಿಷ್ಯರು ತಮ್ಮ ಅಜ್ಞಾನವನ್ನು ಅರಿತು ಕನಕದಾಸನ ಆಧ್ಯಾತ್ಮಿಕ ಉನ್ನತ ಮಟ್ಟವನ್ನು ತಿಳಿದರು.

ಕನಕದಾಸನ ಜ್ಞಾನವು ಗುರುವಿನ ಆಶೀರ್ವಾದದಿಂದ ಪ್ರಕಾಶವಾಗುತ್ತಾ ಹೋಗಿ ಅವನಿಂದ ಅನೇಕ ಪದ್ಯ, ಹಾಡುಗಳಾಗಿ ಉಕ್ಕಿ ಬಂದಿತು. ಆ ಹಾಡುಗಳು ಆಧ್ಯಾತ್ಮಿಕ ಸತ್ಯಗಳು, ಉಪನಿಷತ್ತಿನ ಜ್ಞಾನ, ಭಕ್ತಿ ಮಾರ್ಗಗಳಿಂದ ತುಂಬಿವೆ. ಕರ್ನಾಟದೆಲ್ಲೆಡೆ ನಾಮಸ್ಮರಣೆಯಿಂದ ಆಧ್ಯಾತ್ಮಿಕತೆಯಿಂದ ನೈತಿಕ ಮೌಲ್ಯಗಳಿಂದ ತುಂಬಿದ ಭಗವಂತನ ಮಹತ್ವವನ್ನು ಹಾಡುತ್ತಾ ಜನರನ್ನು ಭಗವಂತನ ಕಡೆಗೆ ತಿರುಗಿಸಿದರು.

ಹಾಗೇ ದೇಶವನ್ನೆಲ್ಲಾ ಸುತ್ತುತ್ತಾ ಕನಕದಾಸರು ಉಡುಪಿಗೆ ಬಂದರು. ಅಲ್ಲಿ ಬಾಲಕೃಷ್ಣನ ದರ್ಶನ ಮಾಡಲು ಕೇಳಿದಾಗ ಅವರನ್ನು ಅಂತ್ಯಜನೆಂದು ದೇವಸ್ಥಾನದ ಒಳಗೆ ಬಿಡಲಿಲ್ಲ. ಗರ್ಭಗುಡಿಯ ಹಿಂದೆ ನಿಂತು ಹಾಡುತ್ತಿದ್ದಾಗ ಕೃಷ್ಣನ ಮೂರ್ತಿಯೇ ಅವರಿಗೆ ಎದುರಾಗಿ ತಿರುಗಿ ಗೋಡೆ ಬಿರಿದು ಕನಕನಿಗೆ ದರ್ಶನವಾಯಿತು. ಕನಕದಾಸರು ಆನಂದದಿಂದ ಪುಳುಕಿತನಾಗಿ ಆನಂದಾಶ್ರುವನ್ನು ಹರಸಿದರು. ತಾವರೆಯ ಹೂವು ಕೆಸರಿನಲ್ಲಿ ಬೆಳೆದರೂ ಅದು ಭಗವಂತನಿಗೆ ಪ್ರಿಯವಲ್ಲವೇ?

ಕನಕದಾಸರು, ಪುರಂದರದಾಸರ ಸಮಕಾಲೀನರು. ಈ ಇಬ್ಬರು ದಾಸರು ಭಕ್ತಿಮಾರ್ಗದಲ್ಲಿ ಮುಳುಗಿ ದಾಸಸಾಹಿತ್ಯದ ಕಾಲದ ಶ್ರೇಷ್ಠ ಸಂತರು, ದಾಸರು, ದಾಸದ್ವಯರು ಎಂದು ಹೊಗಳಿಸಿಕೊಂಡು, ಜನತೆಯನ್ನು ಭಕ್ತಿ ಮಾರ್ಗದಲ್ಲಿ ಮುನ್ನಡೆಸಿದರು.

ಕನಕದಾಸರು ರಚಿಸಿದ ಪದ್ಯಗಳಲ್ಲಿ ಆದಿಕೇಶವನನ್ನು ಪ್ರತಿನಿಧಿಸುತ್ತಾರೆ. ಅವರು ‘ಹರಿಭಕ್ತಿಸಾರ, ಮೋಹನತರಂಗ’ ಎಂಬ ಭಕ್ತಿಮಾಲಿಕೆಯ ಗ್ರಂಥಗಳನ್ನು ರಚಿಸಿದ್ದಾರೆ. ಇದಲ್ಲದೆ ಇನ್ನೂ ಅನೇಕ ಪದ್ಯಗಳ ಪುಸ್ತಕಗಳನ್ನು ರಚಿಸಿದ್ದಾರೆ. ಇವರ ರಚನೆಗಳು ಕನ್ನಡ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆಯಾಗಿವೆ. ಅಲ್ಲದೆ ಎಲ್ಲರಿಗೂ ಎಲ್ಲಾ ಕಾಲದಲ್ಲೂ ಉತ್ಸಾಹ, ಆನಂದ ಮತ್ತು ಭಕ್ತಿಯ ಲಹರಿಯನ್ನುಂಟುಮಾಡುತ್ತದೆ ಇವರ ಕಾವ್ಯ ಸಂಪತ್ತು.

ಇವರ ಬೋಧನೆಗಳು:

ಕಣ್ಣಿಗೆ ಕಾಣದ ಅನಂತತೆಯನ್ನು ಮಾನವನ ಆಲೋಚನೆಯಲ್ಲಿ ಸಿಲುಕಿಸಿ ಧ್ಯಾನಮಾಡಬೇಕು. ಸಾಕಾರವು ನಿರಾಕಾರವನ್ನು ಪ್ರತಿನಿಧಿಸುತ್ತದೆ. ದಾಸ್ಯ ಭಾವದಲ್ಲಿ ದೇವರೊಡನೆ ಸಂಬಂಧ ಸಹಾಯಮಾಡಲೆಂದೇ ಆದಿಕೇಶವನು ಧರೆಗಿಳಿದು ಬಂದಿದ್ದಾನೆ. ಮಾನವನು ತನ್ನನ್ನು ತಾನು ಅರಿತಷ್ಟೂ ಸತ್ಯಾನ್ವೇಷಣೆಯನ್ನು ಕಾಣುತ್ತಾನೆ. ತನ್ನನ್ನೂ ಇತರರಲ್ಲಿ ಕಾಣುತ್ತಾನೆ. ಭಕ್ತಿ ಮತ್ತು ಪ್ರಾರ್ಥನೆಗಳು ಮಾತ್ರ ಇಂತಹ ಮಾನಸಿಕ ಸ್ಥಿರತೆಯನ್ನು ತರುತ್ತದೆ ಅಲ್ಲದೆ ನಿಸ್ವಾರ್ಥ ಸೇವೆ ಮತ್ತು ತ್ರಿಕರಣ ಶುದ್ಧಿಯನ್ನು ತರುತ್ತದೆ. ದೇವರು ಎಲ್ಲವನ್ನೂ ಆವರಿಸಿದ್ದಾನೆ ಎಂದ ಮೇಲೆ ಇತರರಿಗೆ ಮಾಡುವ ಸೇವೆಯು ದೇವರ ಸೇವೆ ಆಗುತ್ತದೆ. ಸೇವಾ ಮಾರ್ಗವೇ ನಿಜವಾದ ಸಕ್ರಿಯ ಆರಾಧನೆ ಮತ್ತು ಭಕ್ತಿಯ ಮಾರ್ಗ. ದೇವರೇ ಲೋಕದ ಅವಿನಾಶದ ಸ್ವರೂಪವೆಂಬುದನ್ನು ಸೇವೆ ಮಾಡುವಾಗ ಎಲ್ಲರಲ್ಲೂ ಕಾಣುವುದನ್ನು ಬೆಳೆಸಿಕೊಳ್ಳಬೇಕು. ಇದು ‘ನಿತ್ಯಸುಖ’ವಾದ ಭಗವಂತನಲ್ಲಿ ಆತ್ಮದ ಆಧ್ಯಾತ್ಮಿಕ ಮಿಲನವನ್ನು ಕರುಣಿಸುತ್ತದೆ.

Leave a Reply

Your email address will not be published. Required fields are marked *