ವೇದಗಳು ಮತ್ತು ಪವಿತ್ರ ಗ್ರಂಥಗಳು ಎತ್ತಿ ಹಿಡಿದಿರುವ ಹಾಗೂ ನಮ್ಮ ರಾಷ್ಟ್ರೀಯ ಧ್ಯೇಯ ವಾಕ್ಯವಾದ “ಸತ್ಯ”ವು, ಭಾರತೀಯರಿಗೆ ಒಂದು ಮಹಾನ್ ಮೌಲ್ಯ. ನಮ್ಮ ಮಹಾಕಾವ್ಯಗಳು, ಧಾರ್ಮಿಕ ಕಥೆಗಳಿಂದ ಹಿಡಿದು, ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರವರೆಗೆ, ಸತ್ಯ ಮಾರ್ಗವನ್ನೇ ಅನುಸರಿಸಿ ವಿಜಯವನ್ನು ಪಡೆದ, ಅನೇಕ ಹೆಸರಾಂತ, ಮಹಾನ್ ವ್ಯಕ್ತಿಗಳ ಉಲ್ಲೇಖವಿದೆ.
ವೇದಗಳು ಸಾರಿರುವಂತೆ, “ಸತ್ಯ”ವೆಂಬುದು ಮಾನವನ ಜೀವನಾಡಿಯಿದ್ದ ಹಾಗೆ. ಒಮ್ಮೆ ದೇವೇಂದ್ರನು, ಪ್ರಹ್ಲಾದನಿಂದ ಅವನ ಶೀಲವನ್ನೇ ದಾನವಾಗಿ ಪಡೆದ. ಶೀಲವು ಪ್ರಹ್ಲಾದನಿಂದ ದೂರವಾದಾಗ, ಒಂದರ ಹಿಂದೆ ಒಂದರಂತೆ, ಅವನ ಪ್ರಖ್ಯಾತಿ, ಐಶ್ವರ್ಯ ಮತ್ತು ಪರಾಕ್ರಮಗಳು ಸಹ ದೂರ ಸರಿದವು. ಆದರೆ ಪ್ರಹ್ಲಾದನು ಅವುಗಳನ್ನು ತಡೆಯಲು ಪ್ರಯತ್ನಿಸಲಿಲ್ಲ. ಆದರೆ ‘ಸತ್ಯ’ವೂ ಸಹ ಅವನಿಂದ ದೂರಹೋಗಲು ಸಿದ್ಧವಾದಾಗ, ಆ ದೇವತೆಯನ್ನು ತನ್ನಿಂದ ದೂರ ಹೋಗಬೇಡವೆಂದು ಪ್ರಹ್ಲಾದನು ಪ್ರಾರ್ಥಿಸಿದನು. ‘ಸತ್ಯ’ ದೇವತೆಯು ಅವನ ಬಳಿಯೇ ಉಳಿದುಕೊಂಡಾಗ, ಅವನಿಂದ ದೂರಹೋಗಿದ್ದ ಪ್ರಖ್ಯಾತಿ, ಐಶ್ವರ್ಯ, ಪರಾಕ್ರಮ ಮೊದಲಾದವು ಅವನ ಬಳಿಗೇ ಹಿಂತಿರುಗಿಬಂದವು.
ಎಲ್ಲಾ ಮೌಲ್ಯಗಳ ಮೂಲಾಧಾರ ‘ಸತ್ಯ.’ ಆದುದರಿಂದಲೇ ಬಾಲವಿಕಾಸ ಪಠ್ಯಕ್ರಮದ ಮೊದಲನೆಯ ವರ್ಷದಲ್ಲಿ, ‘ಸತ್ಯವೇ ದೇವರು’ ಎಂಬ ಕಥೆಯನ್ನು ಸೇರಿಸಲಾಗಿದೆ.