ಭಜ ಗೋವಿಂದಂ
(ಗೋವಿಂದನನ್ನು – ಭಗವಂತನನ್ನು ಕಾಣಲು ಪ್ರಯತ್ನಿಸು)
“ಭಜಗೋವಿಂದಂ, ಭಜಗೋವಿಂದಂ… ಗೋವಿಂದಂ ಭಜ.” ಎರಡು ಪದಗಳು ‘ಭಜ’ ‘ಗೋವಿಂದಂ’ ಇರುವ ಈ ಉಕ್ತಿಯಲ್ಲಿ ಶ್ರೀ ಶಂಕರ ಭಗವತ್ಪಾದರು ಮಾನವ ಜನಾಂಗದ ಉದ್ಧಾರಕ್ಕೆ ವೇದಾಂತವೂ ಧರ್ಮವೂ ಸಾರಿರುವ ಸಮಸ್ತ ಉಪದೇಶದ ಸಾರವನ್ನು ಸಂಕ್ಷೇಪವಾಗಿ ನಿರೂಪಿಸಿದ್ದಾರೆ. ಆನಂದದ ನೆಲೆಗೆ, ಗೋವಿಂದನ ಸನ್ನಿಧಿಗೆ ಪ್ರವೇಶ ಮಾಡಲು ಮತ್ತು ಈಗ ನಾವು ಅನುಭವಿಸುತ್ತಿರುವ ಬದುಕಿನ ಬವಣೆಗಳನ್ನು ನೀಗಲು ಕೀಲಿಕೈ ಒದಗಿಸಿದ್ದಾರೆ.
ಸರಳವೂ, ಮಧುರವೂ, ಸುಭಗವೂ ಆದ ಮೂವತ್ತೊಂದು ಶ್ಲೋಕಗಳಲ್ಲಿ ನಮಗೆ ಬಹು ಸುಲಭವಾಗಿ ಅರ್ಥವಾಗುವ ಹೋಲಿಕೆಗಳನ್ನೂ ನಿದರ್ಶನಗಳನ್ನೂ ಕೊಟ್ಟು ಶಂಕರರು ನಮ್ಮ ಜೀವನದ ಮಿಥ್ಯ ಹಾಗೂ ವ್ಯರ್ಥತೆಗಳನ್ನು ಮನಗಾಣಿಸುತ್ತಾರೆ. ಶ್ಲೋಕದಿಂದ ಶ್ಲೋಕಕ್ಕೆ ಸಾಗುತ್ತ ಒಂದೊಂದೇ ತೆರೆಯನ್ನು ಕಳಚಿ, ನಮ್ಮ ಅಜ್ಞಾನ, ಮೋಹ, ಭ್ರಮೆಗಳನ್ನು ಕಳೆಯುತ್ತಾರೆ. ಆದ್ದರಿಂದಲೇ ಈ ಕಾವ್ಯವನ್ನು ಮೋಹಮುದ್ಧರ ಎಂದೂ ಕರೆಯಲಾಗಿದೆ. ನಮ್ಮ ಬದುಕಿನ ಎಲ್ಲ ಮುಖಗಳನ್ನೂ ಇದರಲ್ಲಿ ಪರಿಶೀಲಿಸಿದ್ದಾರೆ. ಇವು ಹೇಗೆ ನಮ್ಮನ್ನು ಕುರುಡರನ್ನಾಗಿಸಿ, ಕಟ್ಟಿಹಾಕಿವೆ; ಅಜ್ಞಾನ ಮತ್ತು ಸಂಕಟಗಳ ಪ್ರಪಾತದಲ್ಲಿ ಹೆಚ್ಚು ಹೆಚ್ಚು ಆಳಕ್ಕೆ ಮುಳುಗಿಸುತ್ತವೆ ಎಂಬುದನ್ನು ನಿರೂಪಿಸುತ್ತಾರೆ. ನಾವು ಪ್ರತಿಯೊಬ್ಬರೂ ವಿವೇಚನೆಯ, ವಿವೇಕದ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು; ಅದರ ಮೂಲಕ ನಶ್ವರದಿಂದ ಶಾಶ್ವತವಾದುದನ್ನು ಪ್ರತ್ಯೇಕಿಸಿ, ಅಸತ್ಯದಿಂದ ಸತ್ಯವನ್ನು ಬೇರೆ ಮಾಡಿ ತಿಳಿದುಕೊಳ್ಳಲು ಕಲಿಯಬೇಕು. ಪ್ರಾಪಂಚಿಕ ಆಕರ್ಷಣೆ ಮತ್ತು ಮೋಹಗಳಿಗೆ ಒಳಗಾಗದಂತೆ ವಿರಕ್ತಿಯನ್ನು ಬೆಳೆಸಿಕೊಳ್ಳಬೇಕು. ಗೋವಿಂದನನ್ನು ಸಾಕ್ಷಾತ್ಕರಿಸಿಕೊಳ್ಳಲು ಭಕ್ತಿ, ಸತ್ಯ, ನಿಷ್ಠೆಗಳನ್ನು ಬೆಳೆಸಿಕೊಂಡು ಈ ಜನ್ಮದ ಬಂಧನ ಮತ್ತು ಸಂಕಷ್ಟಗಳಿಂದ ಮುಕ್ತರಾಗಲು ಹವಣಿಸಬೇಕು. ಭಾರತ, ಅಷ್ಟೇಕೆ ಇಡೀ ಜಗತ್ತು ಕಂಡಿರುವ ಅತ್ಯಂತ ಶ್ರೇಷ್ಠ ದಾರ್ಶನಿಕ ಜಗದ್ಗುರು ಆದಿ ಶಂಕರಾಚಾರ್ಯರು. ಅವರದು ಜಗತ್ತಿನಲ್ಲೇ ಅತ್ಯಂತ ವಿಶಿಷ್ಟವಾದ ವ್ಯಕ್ತಿತ್ವ. ಏಕೆಂದರೆ ಅವರಲ್ಲಿ ದಾರ್ಶನಿಕ, ಭಕ್ತ, ಅನುಭಾವಿ, ಕವಿ ಮತ್ತು ಧರ್ಮಸುಧಾರಕ – ಎಲ್ಲ ವ್ಯಕ್ತಿತ್ವಗಳೂ ಏಕೀಭವಿಸಿದ್ದುವು. ಒಂದು ಸಾವಿರದ ಇನ್ನೂರು ವರ್ಷಗಳ ಹಿಂದೆ ಅವರು ಜೀವಿಸಿದ್ದುದು. ಆದರೂ ಈ ಮಹಾನ್ ಆಧ್ಯಾತ್ಮಿಕ ಪ್ರತಿಭಾವಂತನ ಜೀವನ ಮತ್ತು ಸಾಧನೆಗಳ ಪ್ರಭಾವ ಭಾರತದಲ್ಲೂ ಜಗತ್ತಿನ ಮೇಲೂ ಇಂದಿಗೂ ಪ್ರಖರವಾಗಿ ಉಳಿದು ಬಂದಿದೆ.
ಭಗವದ್ಗೀತೆಯಲ್ಲಿ ಭಗವಂತನು ಆಶ್ವಾಸನೆ ಕೊಟ್ಟಿರುವ ಹಾಗೆ, ಧರ್ಮಕ್ಕೆ ಕುಂದು ಉಂಟಾದಾಗ, ಭಗವತ್ಶಕ್ತಿಯು ಅವತರಿಸುತ್ತದೆ. ಹಾಗೆ ಭಾರತದೇಶದಲ್ಲಿ ಧಾರ್ಮಿಕ ಮತ್ತು ನೈತಿಕ ಅನಾಯಕತ್ವವು ತಲೆದೋರಿದಾಗ ಶಂಕರಾಚಾರ್ಯರು ಉದಯಿಸಿದರು.
ಶಂಕರಾಚಾರ್ಯರು ಹುಟ್ಟಿದ್ದು ಎಂಟನೆಯ ಶತಮಾನದಲ್ಲಿ. ಆಗ ಬೌದ್ಧ ಧರ್ಮವು ದೇಶಾದ್ಯಂತ ವ್ಯಾಪಿಸಿತ್ತು, ಆದರೆ ಅದು ಬಹುಮಟ್ಟಿಗೆ ಬುದ್ಧಗುರುವು ಬೋಧಿಸಿದ ಸರಳುವೂ ಶುದ್ಧವೂ ಆದ ನೈತಿಕ ಬೋಧನೆಗಳ ಬದಲಾದ ರೂಪದಲ್ಲಿ. ಜೈನ ಧರ್ಮವೂ ಪ್ರಬಲವಾಗಿತ್ತು, ಬಹು ಜನರ ಮೇಲೆ ಪ್ರಭಾವ ಬೀರಿತ್ತು. ಸಾಮಾನ್ಯ ಗ್ರಹಿಕೆಯಲ್ಲಿ, ಅಂದರೆ ಜನಸಾಮಾನ್ಯರ ತಿಳಿವಿಗೆ ನಿಲುಕುವ ಹಾಗೆ ಹೇಳುವುದಾದರೆ ಎರಡೂ ಧರ್ಮಗಳು ದೇವರ ಕಲ್ಪನೆಯನ್ನು ಅಲ್ಲಗಳೆದಿದ್ದುವು. ಫಲವಾಗಿ ಒಂದು ಬಗೆಯ ನಾಸ್ತಿಕ್ಯ ಜನಸಾಮಾನ್ಯರಲ್ಲಿ ರೂಢಿಗೊಳ್ಳುತ್ತಿತ್ತು. ಹಿಂದೂಧರ್ಮವಾದರೋ ಅಸಂಖ್ಯಾತ ವಿಧಾನಗಳಾಗಿ ಪಂಗಡಗಳಾಗಿ ಒಡೆದು ಛಿದ್ರಛಿದ್ರವಾಗಿದ್ದಿತ್ತು. ಒಂದಕ್ಕೂ ಮತ್ತೊಂದಕ್ಕೂ ಕಡುವಿರೋಧ, ದ್ವೇಷ, ಅಸಹನೆ ಕುದಿಯುತ್ತಿದ್ದುವು. ಈ ಪವಿತ್ರ ಭೂಮಿಯಲ್ಲಿ ಧಾರ್ಮಿಕ ಹೊಂದಾಣಿಕೆ, ಸಾಮರಸ್ಯ ಅಳಿಸಿಹೋಗಿದ್ದುದಲ್ಲದೆ, ಜೈನರ ಪ್ರತಿಜ್ಞೆಗಳು, ಶಾಕ್ತರು, ಗಾಣಪತ್ಯರು, ಸೌರರು ಮತ್ತು ಭಾಗವತರು ನಡೆಸುತ್ತಿದ್ದ ವಾಮಾಚಾರಾದಿ ಕ್ರಿಯೆಗಳು ಧರ್ಮದ ಪರಿಶುದ್ಧರೂಪವನ್ನು ಸತ್ವವನ್ನು ಕೆಡಿಸಿಹಾಳುಮಾಡುತ್ತಿದ್ದವು. ಅಂತಹ ಸಮಯದಲ್ಲಿ ಎಲ್ಲ ಚಿಂತನೆಗಳ ಕ್ರೋಡೀಕರಣದ ಅಗತ್ಯವಿತ್ತು. ಧರ್ಮದ ಶಾಶ್ವತ ತತ್ವಗಳ ಅವನತಿಯನ್ನು ತಕ್ಷಣವೇ ತಡೆಗಟ್ಟಬೇಕಾಗಿತ್ತು. ಹಿಂದೂಗಳಲ್ಲಿನ ವಿಭಿನ್ನ ಪಂಥಗಳ ನಡುವಣ ವೈಮನಸ್ಯವನ್ನೂ ಸಾಂಗತ್ಯವನ್ನೂ ಹೋಗಲಾಡಿಸಿ ನೈತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಾಮರಸ್ಯ, ಸುಸಾಂಗತ್ಯಗಳನ್ನು ಉಂಟುಮಾಡಿ ದೇಶದಲ್ಲಿ ಧರ್ಮವನ್ನು ಪುನರ್ಸ್ಥಾಪಿಸಬೇಕಾಗಿತ್ತು. ಪುನರುಜ್ಜೀವಿಸಬೇಕಾಗಿತ್ತು. ಇಂಥದೊಂದು ಅಗಾಧವಾದ ಕಾರ್ಯವನ್ನು ನೆರವೇರಿಸುವುದು ಭಗವಂತನಿಗೆ ಮಾತ್ರ ಸಾಧ್ಯ… ಶಂಕರರು ಬಂದರು, ಈ ಮಹಾನ್ ಕಾರ್ಯವನ್ನು ಕೈಗೆತ್ತಿಕೊಂಡರು, ಅನ್ಯಾದೃಶವಾದ ರೀತಿಯಲ್ಲಿ ಅದನ್ನು ಸಾಧಿಸಿದರು.
ಕೇವಲ ೩೨ ವರ್ಷಗಳ ಅಲ್ಪಾವಧಿಯ ಆಯುಷ್ಯದಲ್ಲಿ ಶಂಕರರು ಅದ್ವೈತ ವೇದಾಂತವನ್ನು ಹಿಂದೂ ಧರ್ಮದ ಮೂಲ ಆಧಾರವಾಗಿ ಪ್ರತಿಷ್ಠೆಗೊಳಿಸಿದರು. ದೇಶದಲ್ಲಿ ಧಾರ್ಮಿಕ ಸಾಮರಸ್ಯವನ್ನು ಆಧ್ಯಾತ್ಮಿಕ ಸುಸಂಗತಿಯನ್ನೂ ನೈತಿಕ ಪುನರುಜ್ಜೀವನವನ್ನು ಅವರು ಸಾಧಿಸಿದರು.