೭. ಮಿತ್ರ ಸಮಾಗಮ
ರಾಮ ಲಕ್ಷ್ಮಣರು ದಕ್ಷಿಣ ದಿಕ್ಕಿನೆಡೆಗೆ ಸೀತಾನ್ವೇಷಣೆಗಾಗಿ ಹೊರಟರು. ಕಾಡಿನ ಒಂದು ಭಾಗದಲ್ಲಿ ಗೃಧ್ರ ಪಕ್ಷಿ ಜಟಾಯು ಮೇಲುಸಿರೆಳೆಯುತ್ತ ಬಾಧೆಗೊಳ್ಳುತ್ತಿರುವುದನ್ನು ಕಂಡರು. ಸೋದರರಿಬ್ಬರೂ ಅದರ ಗಾಯಗಳೆಲ್ಲವನ್ನೂ ತೊಳೆದು ಈ ಬಗೆಯ ದುಸ್ಥಿತಿಗೆ ಕಾರಣವೇನೆಂದು ವಿಚಾರಿಸಿದರು. ಜಟಾಯು ಉತ್ತರಿಸಿತು, “ರಾಮಾ, ನಿನ್ನ ಸೀತೆಯನ್ನು ರಾವಣನು ಪುಷ್ಪಕ ವಿಮಾನದಲ್ಲಿ ಎತ್ತಿಕೊಂಡು ಹೋಗುವುದನ್ನು ಕಂಡೆನು. ಆತನನ್ನು ಅಡ್ಡಗಟ್ಟಿ ನನ್ನ ಶಕ್ತಿ ಮೀರಿ ಅವನೊಂದಿಗೆ ಹೋರಾಡಿದೆನು. ಆದರೆ ಅಂಥ ಭೀಕರ ಯುದ್ಧ ಮಾಡುವ ಶಕ್ತಿ ಇಲ್ಲದೆ ವೃದ್ಧನಾಗಿದ್ದೇನೆ. ಕೊನೆಗೆ ಆತನು ನನ್ನ ರೆಕ್ಕೆಗಳನ್ನು ಕತ್ತರಿಸಿದಾಗ ಇಲ್ಲಿ ಬಂದು ಬಿದ್ದೆ. ಈ ಸಂಗತಿಯನ್ನು ನಿನಗೆ ತಿಳಿಸುವುದಕ್ಕಾಗಿಯೇ ಕಾತರದಿಂದ ನಿನಗಾಗಿಯೇ ಕಾಯುತ್ತಿದ್ದೇನೆ. ಕಿಂಚಿತ್ ಸೇವೆಯನ್ನು ನಿನಗೆ ಸಲ್ಲಿಸಿದ ನಾನು ಈಗ ನಿಶ್ಚಿಂತೆಯಿಂದ ಸಾಯಬಹುದು.”
ರಾಮಲಕ್ಷ್ಮಣರು ಪಕ್ಷಿಯ ದೇಹಕ್ಕೆ ದಹನ ಸಂಸ್ಕಾರವನ್ನು ಪೂರ್ಣಗೊಳಿಸಿ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಕೆಲವು ದಿನಗಳ ತರುವಾಯ ಅವರು ಪಂಪಾ ಸರೋವರಕ್ಕೆ ಬಂದು ತಂಗಿದರು. ಕಿಷ್ಕಿಂಧೆಯನ್ನು ಆಳುವ ವಾನರ ಚಕ್ರವರ್ತಿಯಾದ ವಾಲಿಯ ತಮ್ಮ ಸುಗ್ರೀವನು ಅಣ್ಣನೊಂದಿಗೆ ಕಾದಾಡಿ ಸೋತ ಕಾರಣ ವಾಲಿಯಿಂದ ಬಹಿಷ್ಕೃತನಾದನು. ಅವನು ಋಷ್ಯಮೂಕ ಪರ್ವತದಲ್ಲಿ ಕೆಲಕಾಲ ಮನೆ ಮಾಡಿಕೊಂಡು ತನ್ನ ಕೆಲವೇ ಜನ ನಂಬಿಗಸ್ತ ಮಿತ್ರರೊಂದಿಗೆ ವಾಸವಾಗಿದ್ದನು. ಪಂಪಾ ಸರೋವರದ ದಂಡೆಯ ಮೇಲೆ ಅಲೆದಾಡುತ್ತಿರುವ ರಾಮಲಕ್ಷ್ಮಣರನ್ನು ಸುಗ್ರೀವ ಮತ್ತು ಆತನ ಪರಿವಾರದವರು ನೋಡಿದರು. ತನ್ನ ಅಣ್ಣ ವಾಲಿಯೇ ಇವರನ್ನು ಕಳಿಸಿರುವುದಾಗಿ ಭಾವಿಸಿ ಸುಗ್ರೀವನು ಭೀತನಾದನು. ಆದರೆ ಚಾಣಾಕ್ಷ ಮಂತ್ರಿಯಾದ ಹನುಮಂತ ಅವನ ಭಯವನ್ನು ಹೋಗಲಾಡಿಸಿದನು. ಹನುಮಂತನು ಪರ್ವತದಿಂದಿಳಿದು ಆ ರಾಜಕುಮಾರರನ್ನು ಸಮೀಪಿಸಿ ಅವರ ಬಗ್ಗೆ ತನಿಖೆ ಮಾಡಿದನು. ಹನುಮಂತನ ವಿನಯಶೀಲತೆ, ಬುದ್ಧಿ ಕೌಶಲ್ಯಗಳು, ರಾಮನನ್ನು ತತ್ಕ್ಷಣ ಆಕರ್ಷಿಸಿದವು. ಅವನು ತನ್ನ ಕಥೆಯನ್ನು ನಿರೂಪಿಸತೊಡಗಿದನು.
“ನಾವು ನಿಜವಾಗಿಯೂ ಸುಗ್ರೀವನ ಶೋಧನೆಯಲ್ಲೇ ಇದ್ದವು. ಆತನ ಸ್ನೇಹವನ್ನು ಅರಸುತ್ತಿದ್ದೇವೆ,” ಎಂದು ರಾಮನು ಹನುಮಂತನಿಗೆ ಹೇಳಿದನು. ಹನುಮಂತನಿಗೆ ಈ ಮಾತುಗಳನ್ನು ಕೇಳಿ ಅತ್ಯಂತ ಹರ್ಷವಾಯಿತು. ಅವನು ಅವರನ್ನು ಸುಗ್ರೀವನಿಗೆ ಭೆಟ್ಟಿ ಮಾಡಿಸಿದಾಗ ಸುಗ್ರೀವನು ವಿಧೇಯನಾಗಿ ಆ ಸೋದರರನ್ನು ಬರಮಾಡಿಕೊಂಡು ಆತಿಥ್ಯ ನೀಡಿದನು. ಕೆಲಕಾಲ ಸುಧಾರಿಸಿಕೊಂಡ ಮೇಲೆ ಎಲ್ಲರೂ ಒಂದೆಡೆ ಕುಳಿತಾಗ ಸುಗ್ರೀವನು ತನ್ನ ಸೋದರ ವಾಲಿಯ ಜೊತೆ ಕಾದಾಡಿದ ಕಥೆಯನ್ನು ನಿರೂಪಿಸಿದನು. ಮತ್ತೆ “ರಾಮಾ, ನಾವಿಬ್ಬರೂ ಸಮಾನ ಆಪತ್ತಿನಲ್ಲಿ ಸಿಲುಕಿದ್ದೇವೆ. ಆದ್ದರಿಂದ ನಮ್ಮಿಬ್ಬರಿಗೂ ಪರಸ್ಪರ ಸಹಕಾರ ಅತ್ಯಾವಶ್ಯಕ,” ಎಂದನು.
ಹನುಮಂತನು ಮಧ್ಯ ಪ್ರವೇಶಿಸಿ ರಾಮ ಮತ್ತು ಸುಗ್ರೀವರು ಒಡಂಬಡಿಕೆಯನ್ನು ಮಾಡಿಕೊಳ್ಳಬೇಕೆಂದು ಸಲಹೆ ನೀಡಿದನು. ಸುಗ್ರೀವನು ತನ್ನ ರಾಜ್ಯವನ್ನು ಮರಳಿ ಪಡೆಯಲು ರಾಮನು ಸಹಾಯ ನೀಡಬೇಕೆಂದು ಮತ್ತು ರಾಮನು ತನ್ನ ಪತ್ನಿಯನ್ನು ಮರಳಿ ಪಡೆವಲ್ಲಿ ಸುಗ್ರೀವನು ಸಹಾಯ ಮಾಡಬೇಕೆಂದು ವ್ಯವಸ್ಥೆಯಾಯಿತು. ಈ ವ್ಯವಸ್ಥೆಗೆ ಪ್ರತಿಯೊಬ್ಬರೂ ಒಪ್ಪಿಕೊಂಡರು. ಅನಂತರ ಸುಗ್ರೀವನು ತನ್ನ ಸುತ್ತಲೂ ನೆರೆದ ವಾನರರಿಗೆ, ಆಕಾಶದಿಂದ ಕೆಳಗೆ ತಮ್ಮ ಮಧ್ಯದಲ್ಲಿ ಬಿದ್ದಂಥ ರತ್ನಾಭರಣಗಳ ಗಂಟನ್ನು ತಂದು ತೋರಿಸಲು ಆಜ್ಞಾಪಿಸಿದನು. ರಾಕ್ಷಸನೊಬ್ಬನು ದಕ್ಷಿಣದ ಕಡೆಗೆ ಬಲಾತ್ಕಾರದಿಂದ ಸ್ತ್ರೀಯೊಬ್ಬಳನ್ನು ಕರೆದುಕೊಂಡು ಹೋಗುವುದನ್ನು ಅವರು ಕಂಡಿದ್ದರು. ಆ ರತ್ನಾಭರಣಗಳನ್ನು ಕಂಡ ರಾಮನು ಮೂರ್ಛಿತನಾದನು. ಸುಗ್ರೀವನು ಲಕ್ಷ್ಮಣನಿಗೆ ಆ ಆಭರಣಗಳನ್ನು ಗುರುತಿಸಲು ಹೇಳಿದನು. ಲಕ್ಷ್ಮಣನು ಅವುಗಳನ್ನು ಕೂಲಂಕಷವಾಗಿ ಪರೀಕ್ಷಿಸಿದನು. ಕಾಲಿಗೆ ತೊಡಿಸುವ ಆಭರಣಗಳನ್ನು ಗುರುತಿಸಿದ. ಲಕ್ಷ್ಮಣನು ನಿಸ್ಸಂಶಯವಾಗಿ ಅವು ಸೀತೆಯ ಆಭರಣಗಳೇ ಎಂದು ಹೇಳಿದನು. ಆತನ ಧರ್ಮಪ್ರಜ್ಞೆ ಮತ್ತು ಭಕ್ತಿಗೆ ವಾನರರೆಲ್ಲರೂ ಮೆಚ್ಚಿಕೊಂಡರು. ಮರುಕ್ಷಣದಲ್ಲಿ ರಾಮನು ಚೇತರಿಸಿಕೊಂಡು ಆ ರತ್ನಾಭರಣಗಳೆಲ್ಲವೂ ಸೀತೆಯವೇ ಎಂದು ಗುರುತಿಸಿದನು.
ಸುಗ್ರೀವನು ವಾಲಿಯ ಸಾಮರ್ಥ್ಯವನ್ನು ವರ್ಣಿಸಿ ರಾಮನ ಪ್ರತಾಪವನ್ನು ತನಗೆ ತೋರಿಸಿಕೊಡಬೇಕೆಂದು ಇಚ್ಛಿಸಿದನು. ತನ್ನ ಬಲವನ್ನು ಸಾಬೀತುಪಡಿಸಲು ರಾಮನು ಒಂದು ಬಾಣವನ್ನು ಪ್ರಯೋಗಿಸಿದನು. ಅದು ಒಂದೇ ಸಾಲಿನಲ್ಲಿರುವ ಏಳು ಸಾಲು ವೃಕ್ಷಗಳನ್ನು ಛೇದಿಸಿ ರಾಮನೆಡೆಗೆ ಹಿಂತಿರುಗಿತು. ರಾಮನ ಈ ಸಾಹಸವನ್ನು ಕಂಡು ಸುಗ್ರೀವನು ಮೂಕವಿಸ್ಮಿತನಾದನು.
ಸುಗ್ರೀವನು ವಾಲಿಯನ್ನು ಕದನಕ್ಕೆ ಕರೆ ನೀಡಬೇಕೆಂದೂ, ಅವರೀರ್ವರೂ ಕಾಳಗ ಮಾಡುತ್ತಿರುವಾಗ ರಾಮನು ವಾಲಿಯನ್ನು ಕೊಲ್ಲಬೇಕೆಂದೂ ಅವರು ನಿಶ್ಚಯಿಸಿದರು. ಸುಗ್ರೀವನು ಕಿಷ್ಕಂಧೆಗೆ ಹೋಗಿ ಅರಮನೆಯ ಮಹಾದ್ವಾರದಲ್ಲಿ ನಿಂತು ಗರ್ಜಿಸಿದನು. ಸ್ವಲ್ಪ ಹೊತ್ತಿನಲ್ಲೇ ವಾಲಿ ಕೋಪೋದ್ರಿಕ್ತನಾಗಿ ಹೊರಗೆ ಬಂದನು. ಇಬ್ಬರ ವೇಷಭೂಷಣಗಳು ಬಳಸುವ ಆಯುಧಗಳು ಹೀಗೆ ಎಲ್ಲ ವಿಧದಲ್ಲಿ ಏಕ ರೂಪತೆ ಇರುವ ವಾಲಿ ಸುಗ್ರೀವರನ್ನು ಗುರುತಿಸಲು ರಾಮನಿಗೆ ಸಾಧ್ಯವಾಗಲಿಲ್ಲ. ಅವನು ಸಂದೇಹಕ್ಕೊಳಗಾಗಿ ತೆಪ್ಪಗಿದ್ದನು.
ವಾಲಿಯ ಕೈಯಿಂದ ಬಲವಾದ ಏಟನ್ನು ತಿಂದು ಸುಗ್ರೀವನು ಋಷ್ಯಮೂಕ ಪರ್ವತಕ್ಕೆ ಹಿಂತಿರುಗಿ ರಾಮನನ್ನು ವಚನಬಾಹಿರನೆಂದು ಆಪಾದಿಸಿದನು. ಆದರೆ ತಾನು ಕ್ರಿಯಾಶೀಲನಾಗದಿರಲು ಕಾರಣವೇನೆಂಬುದನ್ನು ರಾಮನು ವಿವರಿಸಿದನು. ಅನಂತರ, “ಮಮತೆಯ ಮಿತ್ರನೇ, ಹೋಗು ನಿನ್ನ ಸೋದರನನ್ನು ಪುನಃ ಯುದ್ಧಕ್ಕೆ ಆಹ್ವಾನಿಸು. ಆದರೆ ಈ ಸಲ ದಯವಿಟ್ಟು ಒಂದು ಪುಷ್ಪಹಾರವನ್ನು ಕೊರಳಲ್ಲಿ ಧರಿಸು. ಆಗ ನಿನ್ನನ್ನು ನಾನು ಸುಲಭವಾಗಿ ಗುರುತಿಸಬಲ್ಲೆ,” ಎಂದು ರಾಮನು ಹೇಳಿದನು. ಸುಗ್ರೀವನು ಅದಕ್ಕೆ ಒಪ್ಪಿಕೊಂಡು ಬೆಟ್ಟವನ್ನಿಳಿದು ಹೋಗಿ ವಾಲಿಯನ್ನು ಪುನಃ ದ್ವಂದ್ವಯುದ್ಧಕ್ಕೆ ಕರೆದನು.
ರಾಣಿಯರ ಮಧ್ಯದಲ್ಲಿ ಮಂಡಿಸಿದ್ದ ವಾಲಿಯು ಹೊರಡಲು ಸಿದ್ದನಾದನು. ಆದರೆ ಆತನ ಪತ್ನಿ ತಾರೆ ಹೋಗಬೇಡವೆಂದು ಬೇಡಿಕೊಂಡಳು. ಆಕೆ, “ನನಗೇಕೋ ಭಯವಾಗುತ್ತಿದೆ. ನಿನ್ನೆ ತಾನೇ ನಿನ್ನ ಸೋದರನು ನಿನ್ನ ಕೈಯಿಂದ ಭಾರಿ ಏಟನ್ನು ತಿಂದಿದ್ದಾನೆ. ಅಷ್ಟು ಶೀಘ್ರವಾಗಿ ನಿನ್ನನ್ನು ಅವನು ಮತ್ತೆ ಕರೆಯುತ್ತಿರುವುದು ಅಷ್ಟು ವಿಚಿತ್ರವೆನಿಸುವುದಿಲ್ಲವೆ ನಿನಗೆ? ಅವನು ಬೆಂಗಾವಲಾಗಿ ಬಲಿಷ್ಠನಾದ ಮಿತ್ರನೊಬ್ಬನಿರುವುದಾಗಿ ನಾನು ತಿಳಿದಿದ್ದೇನೆ,” ಎಂದಳು.
ವಾಲಿಯು ಆಕೆಯ ಪ್ರತಿಕೂಲ ವಾದವನ್ನು ಬದಿಗೊತ್ತಿ ಸುಗ್ರೀವನನ್ನು ಸಂಧಿಸಲು ಧಾವಿಸಿದನು. ಈ ಸಲ ಭೀಕರವಾದ ಕದನವೇ ಜರುಗಿತು. ಸುಗ್ರೀವನು ಸುಸ್ತಾಗುತ್ತಲಿದ್ದನು. ಮರದ ಹಿಂಭಾಗದಲ್ಲಿ ನಿಂತ ರಾಮನು ವಜ್ರಸದೃಶ ಬಾಣವನ್ನು ಸರಿಯಾಗಿ ಗುರಿ ಇಟ್ಟು ವಾಲಿಯನ್ನು ಕೊಂದನು. ತೀವ್ರವಾಗಿ ಗಾಯಗೊಂಡ ವಾಲಿಯು ನೆಲಕ್ಕುರುಳಿದನು. ರಾಮ-ಲಕ್ಷ್ಮಣರು ಆತನನ್ನು ಸಮೀಪಿಸಿದರು.
ಕಪಟ ರೀತಿಯಲ್ಲಿ ತನ್ನನ್ನು ಕೊಂದ ರಾಮನನ್ನು ವಾಲಿಯು ತಪ್ಪಿತಸ್ಥನೆಂದು ದೂರಿದನು. ಆ ರೀತಿಯಲ್ಲಿ ತಾನು ವರ್ತಿಸಿದ ಕಾರಣವೇನು? ಎಂದು ರಾಮನು ಆತನಿಗೆ ವಿಷದಪಡಿಸಿದನು. “ನೀನು ನಿನ್ನ ಸೋದರನ ರಾಜ್ಯವನ್ನು ಅಪಹರಿಸಿಕೊಂಡೆ, ಆದ್ದರಿಂದ ನೀನು ಅಧರ್ಮವನ್ನು ಮಾಡಿರುವೆ. ಧರ್ಮವನ್ನು ರಕ್ಷಿಸಬೇಕಾದ್ದು ರಾಜಕುಮಾರನಾದ ನನ್ನಂಥವನ ಕರ್ತವ್ಯ. ಕ್ರೂರ ಮೃಗಗಳನ್ನು ಬೇಟೆಗಾರನು ಮರದ ಹಿಂದೆ ಅವಿತುಕೊಂಡು ಕೊಲ್ಲುವುದಿಲ್ಲವೇ?” ಅನಂತರ ವಾಲಿಯು ರಾಮನಿಂದ ಹತನಾದುದು ತನ್ನ ಅದೃಷ್ಟವೆಂದು ಶಾಂತ ರೀತಿಯಲ್ಲಿ ಮರಣವನ್ನಪ್ಪಿದನು.
ಭ್ರಾತೃಪ್ರೇಮದ ಕೆಲವು ಉತ್ತಮ ಸಾಮ್ಯವೈಷಮ್ಯಗಳನ್ನು ರಾಮ-ಸುಗ್ರೀವರ ಸಖ್ಯ ಹೊರಪಡಿಸುತ್ತದೆ. ರಾಮ-ಭರತರು ಒಂದು ಕಡೆ; ವಾಲಿ-ಸುಗ್ರೀವರು ಮತ್ತೊಂದು ಕಡೆ. ಎರಡೂ ಪಕ್ಷಗಳ ಸೋದರರು ಅನ್ಯೋನ್ಯ ಪ್ರೀತಿಯಿಂದ ಇದ್ದರು. ಆದರೆ ಇತ್ತ ರಾಮ ಮತ್ತು ಭರತರ ಉತ್ಕೃಷ್ಟ ಸೌಜನ್ಯ ಗುಣಗಳೇ ವಿಪತ್ತು ಮತ್ತು ತೊಳಲಾಟವನ್ನು ತಂದವು. ಅತ್ತ ತಮ್ಮ ತಮ್ಮಲ್ಲಿ ವೈಮನಸ್ಯವುಂಟಾದಾಗ ವಾಲಿಯು ತನ್ನ ತಮ್ಮ ಸುಗ್ರೀವನನ್ನು ಶಿಕ್ಷೆಗೆ ಗುರಿಪಡಿಸಿದನು. ಆ ಸೋದರರು ಬದ್ಧ ವೈರಿಗಳಾದರು. ರಾಮ ಮತ್ತು ಭರತರು ತಮ್ಮ ಪಾಲಿಗೆ ಬಂದ ರಾಜ್ಯಾಡಳಿತವನ್ನು ಧಿಕ್ಕರಿಸಿದರು.
ಪ್ರಶ್ನೆಗಳು
- ರಾಮ ಮತ್ತು ಸುಗ್ರೀವರಲ್ಲಿ ಸಮಾನವಾದ ಪರಿಸ್ಥಿತಿಯು ಯಾವುದು?
- ರಾಮ ಮತ್ತು ಭರತ, ವಾಲಿ ಮತ್ತು ಸುಗ್ರೀವ ಇವರಲ್ಲಿ ಕಂಡುಬರುವ ಸಮ ಹಾಗೂ ವಿಷಮ ಗುಣಗಳಾವುವು?