೮. ಸೀತಾನ್ವೇಷಣೆ
ವಾಲಿಯ ಮರಣದ ತರುವಾಯ ಸುಗ್ರೀವನು ರಾಜನಾಗಿ ಪಟ್ಟಾಭಿಷಿಕ್ತನಾದನು. ರಾಮ-ಲಕ್ಷ್ಮಣರು ಋಷ್ಯಮೂಕ ಪರ್ವತದಲ್ಲಿ ತಮ್ಮ ಕಾಲವನ್ನು ಕಳೆಯುತ್ತಾ ಇದ್ದರು. ಸೀತಾನ್ವೇಷಣೆಗಾಗಿ ದೊಡ್ಡ ಪ್ರಮಾಣದ ಯೋಜನೆಯನ್ನು ರಚಿಸಲು ಸುಗ್ರೀವನು ತನ್ನದೇ ಆದ ಕಾಲವನ್ನು ತೆಗೆದುಕೊಳ್ಳುತ್ತಿರುವುದನ್ನು ನೋಡಿ ಅವರು ತಾಳ್ಮೆಗೆಟ್ಟರು.
ಹನುಮಂತನು ಸುಗ್ರೀವನಿಗೆ ಆತನ ವಚನವನ್ನು ಜ್ಞಾಪಿಸಿದನು ಮತ್ತು ಸೀತಾನ್ವೇಷಣೆಗಾಗಿ ವಾನರ ಸೈನ್ಯವನ್ನು ಹೊರಡಿಸಲು ಆಜ್ಞೆ ಹೊರಡಿಸಬೇಕೆಂದು ಒತ್ತಾಯಪಡಿಸಿದನು. ನಾಲ್ಕು ಗುಂಪುಗಳು ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಗೆ ಹೊರಡಲು ರಚಿಸಲ್ಪಟ್ಟವು. ಈ ಪಂಗಡಗಳು ಒಬ್ಬೊಬ್ಬ ಪ್ರತಾಪಿಯಾದ ವಾನರಾಧಿಪತಿಯ ಮುಖಂಡತ್ವದಲ್ಲಿ ಮುಂದುವರೆದರು. ದಕ್ಷಿಣದತ್ತ ಹೊರಟ ಗುಂಪಿಗೆ ಯುವರಾಜನಾದ ಅಂಗದನೇ ಮುಂದಾಳಾದನು. ಹನುಮಂತ, ಜಾಂಬವಂತ ಮತ್ತು ನೀಲರು ಕೂಡ ಈ ಗುಂಪಿನಲ್ಲಿದ್ದರು.
ಈ ಗುಂಪುಗಳು ಹೊರಡುವ ಸ್ವಲ್ಪಹೊತ್ತಿಗೆ ಮುಂಚೆ ರಾಮನು ಹನುಮಂತನನ್ನು ಕರೆದನು. ಆತನಿಗೆ ಅದೇನೊ ಅನಿಸಿತು. ಹನುಮಂತ ಸೀತೆಯ ಬಗ್ಗೆ ಸಮಾಚಾರವನ್ನು ತಂದೇ ತರುವನೆಂದು. ಆದ್ದರಿಂದ ತನ್ನ ಗುರುತಿನ ಉಂಗುರವನ್ನು ಹನುಮಂತನಿಗೆ ಕೊಟ್ಟು ಸೀತೆಯನ್ನು ಕಂಡ ಕೂಡಲೇ ಅದನ್ನು ಆಕೆಗೆ ಕೊಡಬೇಕೆಂದು ಕೇಳಿಕೊಂಡನು. ರಾಮನ ಹೃದಯಕ್ಕೆ ಹನುಮಂತನು ನಿಕಟವಾದ ದಾಸನಾದನು.
ಉತ್ತರ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಿಗೆ ಹೋದಂಥ ವಾನರ ಸೇನೆ ಒಂದು ತಿಂಗಳೊಳಗೆ ಹಿಂತಿರುಗಿ ಬಂದು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿತು. ಆದರೆ ದಕ್ಷಿಣವಲಯಕ್ಕೆ ಹೋದ ಗುಂಪು ಹಿಂತಿರುಗಲಿಲ್ಲ. ಅವರು ಗುಡ್ಡ ಬೆಟ್ಟಗಳಲ್ಲಿ, ಕಾಡುಮೇಡುಗಳಲ್ಲದೇ ಗುಹೆಗಳಲ್ಲೆಲ್ಲಾ ಸಂಪೂರ್ಣ ಪರಿಶೀಲನೆಯನ್ನು ಮಾಡುತ್ತಿದ್ದರು. ಕಟ್ಟಕಡೆಗೆ ಅವರು ಸಮುದ್ರತೀರವನ್ನು ಬಂದು ಮುಟ್ಟಿದರು. ಆ ಸಮುದ್ರವೋ ಕೊನೆಯಿಲ್ಲದ ಜಲರಾಶಿಯಿಂದ ವಿಸ್ತ್ರತವಾಗಿತ್ತು. ವಾನರರೆಲ್ಲರೂ ಹೇಗೆ ಮುಂದುವರೆಯುವುದೆಂದು ಯೋಚಿಸಿ ಕಂಗೆಟ್ಟು ಹೋದರು.
ಪರ್ವತ ಶಿಖರದ ಮೇಲೆ ಕುಳಿತು ನೋಡುತ್ತಿದ್ದ ಗೃಧ್ರ ರಾಜೇಂದ್ರ ಸಂಪಾತಿಯು ಈ ವಾನರರನ್ನು ನೀರಿಕ್ಷಿಸುತ್ತಲೇ ಇದ್ದನು. ಅವರೆಲ್ಲರನ್ನೂ ತಿಂದು ತೇಗಲು ಹೊಂಚುಹಾಕಿ ಕಾಯುತ್ತಿದ್ದನು. ಆದರೆ ಯಾವಾಗ ಅವರ ಸಂಭಾಷಣೆಯಲ್ಲಿ ಜಟಾಯುವಿನ ಹೆಸರನ್ನು ಆಡಿಕೊಂಡದ್ದನ್ನು ಕೇಳಿದನೋ ಆಗ ಅವರೆಲ್ಲರನ್ನು ತನ್ನ ಸಮೀಪಕ್ಕೆ ಬರಲು ಕೂಗಿ ಕರೆದನು. ವಾನರರೆಲ್ಲರೂ ಸಂಪಾತಿಯ ಬಳಿಗೆ ಬಂದು ತಮ್ಮ ಕಾಯಭಾರದ ಬಗೆಗೆ ತಿಳಿಯ ಹೇಳಿ ರಾಮನ ಕಥೆಯನ್ನು ಕೂಡ ಕಥಿಸಿದರು. ತನ್ನ ಸೋದರ ಜಟಾಯುವು ರಾವಣನಿಂದ ಕೊಲ್ಲಲ್ಪಟ್ಟ ಸಮಾಚಾರವನ್ನು ಕೇಳಿದೊಡನೆ ಸಂಪಾತಿಯು ತನ್ನ ದಿವ್ಯ ದೃಷ್ಟಿಯ ಸಹಾಯದಿಂದ ರಾವಣನು ನೆಲೆಸಿರುವ ಸಮುದ್ರದಾಚೆಯ ಲಂಕೆಯನ್ನು ವೀಕ್ಷಿಸಿದನು. ಲಂಕೆಯಲ್ಲಿ ಅವರು ಸೀತೆಯನ್ನು ಪಡೆಯಲು ಸಾಧ್ಯವೆಂದು ಅವನಿಗೆ ದೃಢವಾಯಿತು. ಸೂಯನ ಉಗ್ರ ಕಿರಣಗಳಿಂದ ತಮ್ಮ ಜಟಾಯುವನ್ನು ರಕ್ಷಿಸಲು ಹೋದ ಸಂಪಾತಿಯ ಎರಡು ರೆಕ್ಕೆಗಳೂ ಸುಟ್ಟು ಹೋಗಿದ್ದವು. ರಾಮನಿಗೆ ಆತನು ಸಹಾಯ ಮಾಡಿದ ಪಕ್ಷದಲ್ಲಿ ಆ ರೆಕ್ಕೆಗಳು ಅವನಿಗೆ ಪುನಃ ಚಿಗುರುವುದಾಗಿ ಒಂದು ವರವಿದ್ದಿತು. ಆ ಪ್ರಕಾರ ಅವನು ತನ್ನ ರೆಕ್ಕೆಗಳನ್ನು ಮರಳಿ ಪಡೆದು ಸಂತೋಷದಿಂದ ಹಾರಿ ಹೋದನು.
ಈಗ ವಾನರರಿಗೆಲ್ಲಾ ಸೀತೆ ಎಲ್ಲಿರುವಳೆಂಬುದು ಗೊತ್ತಾಗಿ ಲಂಕೆಯನ್ನು ಹೇಗೆ ಮುಟ್ಟುವುದೆಂಬ ಬಗೆಗೆ ಅವರು ಚರ್ಚಿಸತೊಡಗಿದರು. ಗುಂಪಿನ ಮುಖಂಡನಾದ ಅಂಗದನು ವಾನರರೆಲ್ಲರಿಗೂ ಅವರವರ ಶಕ್ತಿ ಸಾಮರ್ಥ್ಯಗಳೆಷ್ಟೆಂಬುದನ್ನು ತೋರಿಸಬೇಕೆಂದು ಕೇಳಿಕೊಂಡನು. ಪ್ರತಿಯೊಬ್ಬನೂ ತನ್ನ ಶಕ್ತಿಯನ್ನು ಬಣ್ಣಿಸಿದನು. ಆದರೆ ಸಮುದ್ರವನ್ನು ದಾಟಲು ಬೇಕಾದ ದೀರ್ಘಸಾಮರ್ಥ್ಯ ಎಲ್ಲರಲ್ಲಿಯೂ ಕಡಿಮೆ ಎಂದೆನಿಸಿತು. ಹನುಮಂತನು ತೆಪ್ಪಗೆ ಕುಳಿತಿದ್ದನು. ಆಗ ಜಾಂಬವಂತನು ಅವನ ಬೆನ್ನು ತಟ್ಟಿ ಆತನಲ್ಲಿ ಸುಪ್ತವಾಗಿರುವ ಶಕ್ತಿಯನ್ನು ಪ್ರಚೋದಿಸಿದನು. ಹನುಮಂತನಿಗೆ ಕ್ರಮೇಣ ಸ್ವಪ್ರತಾಪದ ಅರಿವಾಯಿತು. ಹೆಚ್ಚು ಒತ್ತಾಯ ಮಾಡಿದ ತರುವಾಯ ಸೀತಾನ್ವೇಷಣೆಗಾಗಿ ತಾನು ಸಮುದ್ರೋಲ್ಲಂಘನ ಮಾಡುವುದಾಗಿ ಹನುಮಂತನು ಒಪ್ಪಿಕೊಂಡನು. ಜಾಂಬವಂತನು ಅವನ ಧೈಯಕ್ಕೆ ಮೆಚ್ಚಿಕೊಂಡನು. ಹನುಮಂತನು ಘನವಾದ ಕಾಯವನ್ನು ಕೈಗೊಳ್ಳಲು ಅಂಗೀಕರಿಸಿದನು. ತನ್ನ ಪರಿಮಿತವಾದ ದೇಹವನ್ನು ದೀರ್ಘವಾಗಿ ಬೆಳೆಸಿ ಬೆಳೆಸಿ ಸಮಸ್ತ ಪರ್ವತವನ್ನೇ ಆಕ್ರಮಿಸುವಂತೆ ಮಾಡಿದ ಮೇಲೆ ರಾಮನನ್ನೂ ಮತ್ತು ತನ್ನ ತಂದೆ ವಾಯುದೇವನನ್ನೂ ಪ್ರಾರ್ಥಿಸಿ ಅವನು ಸಮುದ್ರದಾಚೆಗೆ ಉಢಾಣವನ್ನು ಮಾಡಿದನು.
ಪ್ರಶ್ನೆಗಳು:
- ಸುಗ್ರೀವನು ಸೀತಾನ್ವೇಷಣೆ ಕಾಯವನ್ನು ಕೈಗೊಳ್ಳಲು ಏಕೆ ತಡಮಾಡಿದನು?
- ಸೀತೆಯು ಲಂಕೆಯಲ್ಲಿರುವಳೆಂದು ವಾನರಿಗೆ ಹೇಗೆ ಗೊತ್ತಾಯಿತು?