೨. ವಿಷ ಬೀಜಗಳು
ದಶರಥನು ತನ್ನ ಮಕ್ಕಳು ಮತ್ತು ಸೊಸೆಯಂದಿರೊಡಗೂಡಿ ಅಯೋಧ್ಯೆಗೆ ಹಿಂದಿರುಗಿದನು. ಎಲ್ಲೆಡೆ ಯಲ್ಲಿಯೂ ಸಂಭ್ರಮದ ವಾತಾವರಣವಾಯಿತು. ಆ ನಾಲ್ಕು ಜನ ಸೋದರರು, ವಿಶೇಷವಾಗಿ ರಾಮನು ಎಲ್ಲರ ನೋಟಕ್ಕೂ ಆಕರ್ಷಣೀಯವಾಗಿ ಅಯೋಧ್ಯೆಯ ಪ್ರಜೆಗಳಿಗೆ ಪೂಜಾರ್ಹನಾಗಿದ್ದನು. ದಶರಥನಿಗೆ ನಿಜಕ್ಕೂ ಇದು ಆನಂದದಾಯಕ ಸನ್ನಿವೇಶವಾಗಿತ್ತು. ಕೆಲವು ಕಾಲ ಹೀಗೆಯೇ ದಿನಗಳು ಸರಿದವು.
ಅನಂತರ ದಶರಥನು ಭವಿಷ್ಯವನ್ನು ಯೋಚಿಸತೊಡಗಿದನು. ಅವನಿಗೆ ವೃದ್ಧಾಪ್ಯವು ಸಮೀಪಿಸಿದ್ದರಿಂದ ಇನ್ನು ಬಹುಕಾಲ ಜೀವಿಸುವುದಿಲ್ಲವೆಂದು ತಿಳಿದನು. ಅದಕ್ಕೋಸ್ಕರ ಅವನು ರಾಮನನ್ನು ಸಿಂಹಾಸನಕ್ಕೇರಿಸಲು ಇದು ಸರಿಯಾದ ಸಮಯವೆಂಬುದಾಗಿ ಭಾವಿಸಿದನು. ಅವನು ಇಕ್ಷ್ವಾಕು ವಂಶದ ಕುಲಗುರುಗಳಾದ ವಸಿಷ್ಠರನ್ನು ಕರೆಯಿಸಿ ಅವರ ಅಭಿಪ್ರಾಯವನ್ನು ಕೇಳಿದನು. ಆಗ ವಸಿಷ್ಠ ಗುರುಗಳು ಅವನ ಅಭಿಪ್ರಾಯವನ್ನು ಸಮರ್ಥಿಸಿದರು. ಮತ್ತು ಮಾರನೆಯ ದಿನವೇ ಮಂಗಳಕರವಾದ ದಿನವೆಂದು ಪಟ್ಟಾಭಿಷೇಕಕ್ಕೆ ಮುಹೂರ್ತವನ್ನು ನಿಶ್ಚಯಿಸಿದರು. ದಶರಥನು ಸಕಲ ಸಿದ್ಧತೆಗಳನ್ನೂ ಏರ್ಪಡಿಸಲು ಆಜ್ಞೆ ಮಾಡಿದನು. ಈ ಸಮಾಚಾರವನ್ನು ಕೇಳಿದ ಪ್ರಜೆಗಳ ಆನಂದಕ್ಕೆ ಎಣೆಯೇ ಇಲ್ಲವಾಯಿತು. ಮತ್ತು ಅವರು ಉತ್ಸಾಹದಿಂದ ಈ ಕ್ಷಣವನ್ನು ನಿರೀಕ್ಷಿಸತೊಡಗಿದರು.
ಆದರೆ ಕೈಕೇಯಿಯ ದಾಸಿಯಾದ ಮಂಥರೆಯ ಆಲೋಚನೆಯೇ ಬೇರೆ ಬಗೆಯದಾಯಿತು. ಅವಳು ಕೈಕೇಯಿಯನ್ನು ಸಮೀಪಿಸಿ ಅವಳ ಮನಸ್ಸನ್ನು ವಿಷಮಯವಾಗಿ ಮಾಡಿದಳು. ಆದರೆ ರಾಮನನ್ನು ಬಹುವಾಗಿ ಪ್ರೀತಿಸುತ್ತಿದ್ದ ಕೈಕೇಯಿ ಮೊದಲು ಅವಳ ಮಾತಿಗೆ ಕಿವಿಗೊಡಲಿಲ್ಲ. ಆದರೆ ನಿಧಾನವಾಗಿ ಅವಳ ಮಾತಿಗೆ ಬಲಿಯಾದಳು. ಮಂಥರೆಯು ದಶರಥನ ಸ್ವಾಗತಕ್ಕೆ ಒಂದು ಸರಿಯಾದ ವಾತಾವರಣವನ್ನೇ ಏರ್ಪಡಿಸಿದಳು. ದಶರಥನು ತನ್ನ ಪ್ರಿಯಪತ್ನಿಯಾದ ಕೈಕೇಯಿಗೆ ಸಮಾಚಾರವನ್ನು ತಿಳಿಸಲು ಬಂದನು. ಆದರೆ ಅವಳು ಅವನನ್ನು ಸ್ವಾಗತಿಸಲು ಕೂಡ ಬರಲಿಲ್ಲ. ತನಗೆ ಎಂದಿನಂತೆ ಸ್ವಾಗತಿಸಲು ಯಾರೂ ಬರದಿರುವುದನ್ನು ಗಮನಿಸಿದನು. ಅವನು ರಾಣಿ ಕೈಕೇಯಿಯ ಬಗ್ಗೆ ವಿಚಾರಿಸಿದಾಗ ಯಾರೂ ಉತ್ತರವನ್ನೇ ಕೊಡಲಿಲ್ಲ. ಆದರೆ ಅವನು ಅವಳನ್ನು ಒಂದು ಕೊಠಡಿಯ ಮೂಲೆಯಲ್ಲಿ ಮಲಗಿರುವುದನ್ನು ಕಂಡನು. ಆಗ ಅವಳಿಗೆ ಯಾವುದೋ ತೊಂದರೆಯಾಗಿರಬೇಕೆಂದು ಭಾವಿಸಿದನು. ಮತ್ತು ಅವಳ ಯೋಗಕ್ಷೇಮವನ್ನು ವಿಚಾರಿಸಿದನು. ಅವಳು ಅವನಿಂದ ದೂರಸರಿದು ನಿಂತಳು. ಕೊನೆಗೂ ಬಹಳ ಒತ್ತಾಯಪಡಿಸಿದ ನಂತರ ಮತ್ತು ಸಂತೈಸಿದ ತರುವಾಯ ಅವಳು ದೃಢವಾಗಿ ಹೀಗೆ ನುಡಿದಳು, “ಪ್ರಭು, ಹಿಂದೆ ನೀವು ನನಗೆ ಎರಡು ವರಗಳನ್ನು ಕೊಟ್ಟದ್ದು ಮತ್ತು ನಾನದನ್ನು ಸರಿಯಾದ ಸಮಯಕ್ಕೆ ಉಪಯೋಗಿಸುವೆನೆಂದು ಹಾಗೆಯೇ ಇಟ್ಟಿದ್ದು ನಿಮಗೆ ನೆನಪಿದೆಯೇ? ಈಗ ಅವುಗಳನ್ನು ನೀವು ನನಗೆ ದಯಪಾಲಿಸುವ ಸಮಯ ಬಂದಿದೆ.”
ದಶರಥನು ಉತ್ತರಿಸಿದನು, “ಕೇವಲ ಈ ಮಾತಿಗೆ ಚಿಂತೆ ಏಕೆ? ಇಗೋ ನೀನು ಕೇಳಿದಾಕ್ಷಣ ನಾನು ಕೊಡಲು ಸಿದ್ಧನಾಗಿ ನಿಂತಿದ್ದೇನೆ.” ಆಗ ಕೈಕೇಯಿಯು ಹೇಳಿದಳು, “ನೀವು ಕೊಟ್ಟ ಮಾತಿಗೆ ತಪ್ಪುವುದಿಲ್ಲವೆಂದು ನನಗೆ ಗೊತ್ತು. ದಯವಿಟ್ಟು ಕೇಳಿ, ಮೊದಲನೆಯದಾಗಿ ನನ್ನ ಮಗ ಭರತನಿಗೆ ಪಟ್ಟಾಭಿಷೇಕ ಮಾಡಿ ಅವನನ್ನು ಅಯೋಧ್ಯೆಯ ರಾಜನನ್ನಾಗಿ ಮಾಡಬೇಕು. ಎರಡನೆಯದಾಗಿ ರಾಮನು ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಬೇಕು.”
ದಶರಥನು ತನ್ನ ಕಿವಿಗಳನ್ನೇ ನಂಬಲಾರದವನಾದನು. ಅವನಿಗೆ ಮಾತನಾಡಲೂ ಸಾಧ್ಯವಾಗದಷ್ಟು ಆಘಾತವಾಯಿತು. ಅವನು ಕೃದ್ಧನಾಗಿ, “ರಾಮನು ನಿನಗಾವ ಅಪರಾಧವನ್ನು ಮಾಡಿದನು? ಅವನು ಒಂದು ಇರುವೆಗೂ ಕೂಡ ತೊಂದರೆ ಕೊಡುವವನಲ್ಲನೆಂಬುದು ನನಗೆ ಸರಿಯಾಗಿ ಗೊತ್ತು. ನನ್ನ ಪ್ರೀತಿಯ ರಾಮನನ್ನು ಬಿಟ್ಟು ನಾನು ದೂರವಿರಲು ಸಾಧ್ಯವೇ ಇಲ್ಲವೆಂಬುದು ನಿನಗೆ ಗೊತ್ತಿಲ್ಲವೇ? ಆದ್ದರಿಂದಲೇ ಪ್ರಿಯೇ, ಈ ನಿನ್ನ ಮಾತುಗಳನ್ನು ಹಿಂತೆಗೆದುಕೋ ಮತ್ತು ಬೇರೆ ಏನಾದರೂ ಕೇಳಿಕೊ. ಅದನ್ನು ಕೊಡಲು ನಾನು ಸಿದ್ಧನಿದ್ದೇನೆ.” ಆದರೆ ಕೈಕೇಯಿಯು ಹಠವಾದಿಯಾಗಿದ್ದು ಅವಳು ತನ್ನ ಬೇಡಿಕೆಯನ್ನೇ ಒತ್ತಾಯಪಡಿಸಿದಳು.
ದಶರಥನು ದೊಡ್ಡ ಆಪತ್ತಿಗೊಳಗಾದನು. ಅವನು ಅವಳ ಕಾಲುಗಳನ್ನು ಕೂಡ ಹಿಡಿಯಲು ಮುಂದಾದನು. ಆದರೆ ಕೈಕೇಯಿಯು ಕಲ್ಲಿನಂತೆ ದೃಢವಾಗಿ ನಿಂತಳು. ಅವಳು ಪ್ರಕಟಿಸಿದ್ದೇನೆಂದರೆ “ರಾಮನನ್ನು ರಾಜನನ್ನಾಗಿಸಿದರೆ, ನಾನು ವಿಷವನ್ನು ಕುಡಿದು ಸಾಯುತ್ತೇನೆ.” ಈಗ ದಶರಥನ ಮನಸ್ಸಿನ ಪರಿಸ್ಥಿತಿಯನ್ನು ಊಹಿಸಬಹುದು. ಅವನು ತನ್ನ ಮಗ, ತನ್ನ ಕರ್ತವ್ಯ – ಇಬ್ಬರಲ್ಲೊಬ್ಬರನ್ನು ಆರಿಸಿಕೊಳ್ಳ ಬೇಕಾಗಿದೆ. ಆದರೆ ಕೊನೆಯಲ್ಲಿ ಅವನು ಸತ್ಯದಲ್ಲಿಟ್ಟ ನಿಷ್ಠೆಗೇ ಜಯ ದೊರಕಿತು. ಅವನು ಹೇಳಿದನು, “ಆಗಲಿ ನಿನ್ನಿಚ್ಛೆಯಂತೆ ನಡೆಯಲಿ. ನಾನು ರಾಮನ ಹೆಸರನ್ನು ಜಪಿಸುತ್ತ ಮರಣವನ್ನು ಅಪ್ಪುವೆ.” ಹೀಗೆ ಹೇಳುತ್ತ ಆತನು ಕೈಕೇಯಿಯ ಪಾದದಲ್ಲಿ ಮೂರ್ಛಿತನಾಗಿ ಬಿದ್ದನು.
ನಸುಕಿನ ಸಮಯ ಸಮೀಪಿಸುತ್ತಿತ್ತು. ಅಯೋಧ್ಯೆಯ ಪ್ರಜೆಗಳು ಆತುರದಿಂದ ಓಲಗದ ಮತ್ತು ವಾದ್ಯದ ಸದ್ದುಗಳನ್ನು ಆಲಿಸಲು ಕಾಯುತ್ತಿದ್ದರು ಮತ್ತು ಪಟ್ಟಾಭಿಷೇಕದ ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತಿದ್ದರು. ಆದರೆ ಏನೂ ಕೇಳಿಬರಲಿಲ್ಲ.
ರಾಮನನ್ನು ಕೈಕೇಯಿ ಅಂತಃಪುರಕ್ಕೆ ಕರೆಸಿದಳು. ಅಲ್ಲೇ ಅವನ ತಂದೆಯು ಜಡವಾಗಿ ಮಲಗಿದ್ದನು. ರಾಮನು ದುಃಖಪಟ್ಟು ತನ್ನ ಮಲತಾಯಿಯಿಂದ ವಿಷಯವೇನೆಂದು ವಿಚಾರಿಸಿಕೊಂಡನು. ಅವಳು ಶಾಂತಮನಸ್ಸಿನವಳಾಗಿ, “ಮಗನೇ ನೀನೊಬ್ಬನೇ ನಿನ್ನ ತಂದೆಯ ದುಃಖ ನಿವಾರಿಸಲು ಸಮರ್ಥವಾಗಿರುವೆ,” ಎಂದಳು.
ರಾಮ, “ತಾಯಿ ನಾನು ತಂದೆಯನ್ನು ಸಂತೋಷವಾಗಿರಿಸಲು ಏನು ಬೇಕಾದರೂ ಮಾಡಲು ಸಿದ್ಧನಿರುವೆ. ಆಜ್ಞೆ ಮಾಡು.”
ಕೈಕೇಯಿಯು ತಾನು ದಶರಥನಿಗೆ ಕೇಳಿದ ಎರಡು ವರಗಳನ್ನು ಪುನಃ ಪುನರುಚ್ಚರಿಸಿದಳು. ರಾಮನು ಶಾಂತ ಮನಸ್ಸಿನಿಂದ ಎಲ್ಲವನ್ನೂ ಕೇಳಿದನು ಮತ್ತು ಹೀಗೆ ಹೇಳಿದನು, “ಯಾವ ಸಂದರ್ಭವಿದ್ದರೂ ಸಹ ತಂದೆಯ ಕೋರಿಕೆಯು ನೆರವೇರಲೇಬೇಕು. ಅನಂತರ ಅವನು ತನ್ನ ತಂದೆಯ ಮತ್ತು ಕೈಕೇಯಿಯ ಪಾದ ಮುಟ್ಟಿ ವಂದಿಸಿ ಹೊರಟು ಬಂದನು. ಅವನು ನೇರವಾಗಿ ತನ್ನ ತಾಯಿ ಕೌಸಲ್ಯಯ ಅಂತಃಪುರಕ್ಕೆ ಬಂದನು. ಅಲ್ಲಿ ಸುಮಿತ್ರೆ, ಸೀತೆ ಮತ್ತು ಲಕ್ಷ್ಮಣ ಉಪಸ್ಥಿತರಾಗಿದ್ದರು. ಅವನು ಶಾಂತವಾಗಿ ಅವರಿಗೆ ಸಮಾಚಾರವನ್ನು ತಿಳಿಸಿದನು. ತಾನು ಕಾಡಿಗೆ ಹೋಗುವ ವಿಚಾರದಲ್ಲಿ ವಿನಾ ಕಾರಣ ಚಿಂತಿಸುವುದು ಬೇಡವೆಂದು ಹೇಳಿದನು.
ಕೌಸಲ್ಯಯು ತಕ್ಷಣವೇ ಮೂರ್ಛ ಹೊಂದಿದಳು. ರಾಮನು ಅವಳ ಪಾದದ ಬಳಿ ಕುಳಿತು ನಿಧಾನವಾಗಿ ಅವಳನ್ನು ಯಥಾಸ್ಥಿತಿಗೆ ತಂದನು.
ಕೊನೆಗೆ ಬಹಳಷ್ಟು ಬಿರುಸಾದ ಮಾತುಕತೆಗಳ ನಂತರ ಸೀತೆ ಮತ್ತು ಲಕ್ಷ್ಮಣರು, ರಾಮನ ಜೊತೆಗೆ ಕಾಡಿಗೆ ಹೋಗುವುದೆಂದು ನಿಶ್ಚಯವಾಯಿತು. ಎಲ್ಲರೂ ಕೈಕೇಯಿಯನ್ನು ದೂಷಿಸಿದರು. ಆದರೆ ರಾಮನು ಅವಳನ್ನು ಬೈಯಬಾರದೆಂದು ಬೇಡಿಕೊಂಡನು. ಅವನು ತಾನು ತನ್ನ ತಂದೆಯ ಇಚ್ಛೆಯನ್ನು ಸಂತೋಷದಿಂದ ಪೂರ್ಣಗೊಳಿಸುತ್ತಿರುವೆ, ಮತ್ತೆ ಬೇರೆ ಏನೂ ಅಲ್ಲ ಎಂದು ಹೇಳಿದನು.
ಕೊನೆಗೆ ದಶರಥನು ಅಲ್ಲಿ ಬಂದನು ಮತ್ತು ಸಮಸ್ತ ಅಯೋಧ್ಯಾ ಪಟ್ಟಣವೇ ರಾಮನನ್ನು ಅರಣ್ಯಕ್ಕೆ ಹಿಂಬಾಲಿಸಬೇಕೆಂದು ಆಜ್ಞೆ ಮಾಡಿದನು ಮತ್ತು ಅಲ್ಲಿ ಅವನಿಗೆ ಎಲ್ಲಾ ರಾಜ ಸೌಕಯವನ್ನು ಒದಗಿಸಬೇಕೆಂದು ಹೇಳಿದನು. ಆದರೆ ರಾಮನು ಹೀಗೆ ಹೇಳಿದನು, “ಭರತನು ಬರಿದಾದ ನಿರ್ಜನಪಟ್ಟಣವನ್ನು ಆಳಬಾರದಲ್ಲವೇ?” ರಾಮಲಕ್ಷ್ಮಣ ಸೀತೆಯರು ನಾರುಮಡಿಗಳ ವಸ್ತ್ರವನ್ನು ಧರಿಸಿದರು. ರಾಜನ ಆಜ್ಞೆಯಂತೆ ಮಂತ್ರಿಯಾದ ಸುಮಂತನು ಮೂವರನ್ನೂ ರಥದಲ್ಲಿ ಕರೆದುಕೊಂಡು ದುಃಖಕರ ಸನ್ನಿವೇಶದಿಂದ ಹೊರ ಹೊರಟನು.
ಕೌಸಲ್ಯಯು ತನ್ನ ಪ್ರಿಯ ಮಗನನ್ನು ಕಾಡಿಗೆ ಕಳುಹಿಸಿದ್ದಕ್ಕೆ ದಶರಥನನ್ನು ನಿಂದಿಸಿದಳು. ಈ ಸಂದರ್ಭದಲ್ಲಿ ದಶರಥನಿಗೆ ತನ್ನ ತಾರುಣ್ಯದಲ್ಲಿ ನಡೆದ ಒಂದು ಘಟನೆ ಜ್ಞಾಪಕಕ್ಕೆ ಬಂತು. ಅದನ್ನು ಆತ ಕೌಸಲ್ಯೆಗೆ ನಿರೂಪಿಸಿದನು ಮತ್ತು ಶ್ರವಣಕುಮಾರನ ಕಥೆಯನ್ನು ಹೇಳಿ ಪೂರ್ವಕರ್ಮಫಲವಾಗಿ ಅಜ್ಞಾತವಾದಾಗ್ಯೂ ಅನುಭವಿಸಬೇಕಾದ ಶಾಪದ ಸನ್ನಿವೇಶವನ್ನು ಒಪ್ಪಿಕೊಂಡನು.
ಬೇಸಿಗೆಯ ಒಂದು ರಾತ್ರಿ ಆತನು ಬೇಟೆಗಾಗಿ ಕಾಡಿಗೆ ಹೋಗಿದ್ದನು. ಬಿಲ್ಲು ವಿದ್ಯೆಯಲ್ಲಿ ಅತ್ಯಂತ ನುರಿತವನಾಗಿದ್ದರಿಂದ ಆತನು ಯಾವ ದಿಕ್ಕಿನಿಂದ ಶಬ್ದ ಬಂದರೂ ಶ್ರವಣಮಾತ್ರದಿಂದ ಅಲ್ಲಿಗೆ ಗುರಿಯಿಟ್ಟು ಲಕ್ಷ ಕಾಣಿಸದಿದ್ದರೂ ಬಾಣ ಪ್ರಯೋಗ ಮಾಡಬಲ್ಲವನಾಗಿದ್ದ. ಒಮ್ಮೆ ಆತನು ಆನೆಯು ತನ್ನ ಸೊಂಡಿಲಿನಿಂದ ನೀರು ಕುಡಿಯುವಂತೆ ಶಬ್ದವನ್ನು ಕೇಳಿದ ಮತ್ತು ತಕ್ಷಣ ಆ ಕಡೆಗೆ ಗುರಿಯನ್ನಿಟ್ಟು ಬಾಣಪ್ರಯೋಗಿಸಿದ. ಮರುಕ್ಷಣದಲ್ಲಿ ಒಂದು ಮಾನುಷ ಸ್ವರ ಆತನಿಗೆ ಕೇಳಿಸಿತು. “ಹಾ! ತಂದೆ, ಹಾ! ತಾಯಿ, ನಾನು ಸಾಯುತ್ತಿದ್ದೇನೆ.”
ದಶರಥ ದಿಙ್ಮೂಢನಾದ. ಆ ಸ್ಥಳಕ್ಕೆ ಓಡಿ ಹೋದ. ಒಂದು ನದಿಯ ಬಳಿ ಋಷಿಕುಮಾರನೊಬ್ಬ ನೋವಿನಿಂದ ಬಳಲುವುದನ್ನು ಕಂಡ. ಆತ ಹೇಳಿದ, “ದಶರಥನೆ, ನನ್ನನ್ನೇಕೆ ಕೊಂದೆ? ಅಲ್ಲಿ ಮಲಗಿರುವ ನನ್ನ ತಂದೆ ತಾಯಂದಿರಿಗೋಸುಗ ಮುಗ್ಧನಾಗಿ ನೀರನ್ನು ತುಂಬಿಕೊಳ್ಳುತ್ತಿದ್ದೇನೆ. ಅವರು ನನ್ನ ಅಗಲಿಕೆಯನ್ನು ತಾಳಲಾರರು. ನಾನು ಬದುಕಲಾರೆ. ನಾನು ಸಾಯುತ್ತಿದ್ದೇನೆ. ಹೋಗು ಈ ನೀರನ್ನು ನನ್ನ ತಂದೆ ತಾಯಂದಿರಿಗೆ ಕೊಟ್ಟು ಅವರ ಪಾದಗಳಿಗೆ ನಮಸ್ಕರಿಸು, “ನೀರಿನ ಕಲಶವನ್ನು ತೆಗೆದುಕೊಂಡು ದಶರಥನು ಆ ವೃದ್ಧ ದಂಪತಿಗಳ ಕಡೆಗೆ ಧಾವಿಸಿದನು ಮತ್ತು ಅವರ ಪಾದಗಳಿಗೆರಗಿದನು. ಅವರಿಗೆ ಹೇಳಿದನು, “ನಾನು ನಿಮ್ಮ ಮಗನಲ್ಲ. ನಿಮ್ಮ ಮಗನನ್ನು ಕೊಂದು ನಾನು ಮಹಾಪಾಪವನ್ನು ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ.”
ಈ ಮಾತುಗಳನ್ನು ಕೇಳಿ ಆ ವೃದ್ಧ ದಂಪತಿಗಳು ಶೋಕತಪ್ತರಾದರು. “ನೀನು ಘೋರವಾದ ಪಾಪ ಕರ್ಮವನ್ನು ಮಾಡಿರುವೆ. ಆಜ್ಞಾತವಾಗಿ ಮಾಡಿದ್ದಾದ್ರೂ ಒಂದು ದಿನ ನೀನೂ ತಂದೆಯಾಗಿ ಪುತ್ರ ವಿರಹದ ದಾರುಣ ಶೋಕದಿಂದ ಬಳಲುವೆ.” ಈ ಕಥೆಯನ್ನು ಕೌಸಲ್ಯೆಗೆ ಹೇಳಿದನು. “ನಾನು ಮಾಡಿದ ಕರ್ಮದ ಫಲವನ್ನು ನಾನೀಗ ಅನುಭವಿಸುತ್ತಿದ್ದೇನೆ,” ಎಂದು ಹೇಳಿದನು.