೧. ವಿಶ್ವಾಮಿತ್ರನ ಕೋರಿಕೆ
ದಶರಥ ಮಹಾರಾಜನ ನಾಲ್ವರು ಮಕ್ಕಳಾದ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರು ಬೆಳೆಯುತ್ತಿದ್ದಂತೆ ಗಮನಾರ್ಹವಾದ ವಿಶೇಷ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದರು. ರಾಮನು, ಸತ್ಯ ಮತ್ತು ಕರ್ತವ್ಯ ಪರಾಯಣನಾಗಿದ್ದನು. ಭರತನು ವಿನಯ ಮತ್ತು ಕರ್ತವ್ಯ ಪರಾಯಣನು, ಲಕ್ಷ್ಮಣನು ದಕ್ಷ ಮತ್ತು ಉತ್ಸಾಹಿಯಾಗಿದ್ದನು. ಶತ್ರುಘ್ನನು ದಯಾಳು ಮತ್ತು ಮೃದು ಸ್ವಭಾವದವನು. ದಶರಥನು ಅವರ ವಿದ್ಯಾಭ್ಯಾಸಕ್ಕೆ ಮತ್ತು ಯುದ್ಧ ಹಾಗೂ ಶಸ್ತ್ರಾಭ್ಯಾಸಗಳಿಗೆ ಬೇಕಾದ ಅನುಕೂಲತೆಗಳನ್ನು ಏರ್ಪಡಿಸಿದನು. ರಾಜನು ತನ್ನ ನಾಲ್ವರೂ ಮಕ್ಕಳಲ್ಲಿ ತುಂಬ ಅಭಿಮಾನ ಉಳ್ಳವನಾಗಿ ಸಂತೋಷವಾಗಿದ್ದನು.
ಇದೇ ಪ್ರಕಾರವಾಗಿ ಕಾಲವು ಸುರಿಯುತ್ತಿದ್ದಂತೆ ಒಂದು ದಿವಸ ದಶರಥನ ಆಸ್ಥಾನಕ್ಕೆ ವಿಶ್ವಾಮಿತ್ರ ಋಷಿ ಬಂದು ರಾಜನನ್ನು ಕಾಣಲು ಕಾಯುತ್ತಿರುವರೆಂಬುದಾಗಿ ಘೋಷಿಸಲಾಯಿತು. ಆಗ ದಶರಥನು ಲಗುಬಗೆಯಿಂದ ಸಿಂಹಾಸನದಿಂದ ಕೆಳಗಿಳಿದು ಅತ್ಯಾದರದಿಂದ ಮುನಿಯನ್ನು ಬರಮಾಡಿಕೊಂಡು, ಅವರು ಬಂದಿರುವ ಕಾರಣವನ್ನು ವಿಚಾರಿಸಿ ಅವರಿಗೆ ಅತ್ಯಂತ ಯೋಗ್ಯವಾದ ಉಪಚಾರಗಳನ್ನು ಮಾಡಿದನು. ಆಗ ವಿಶ್ವಾಮಿತ್ರರು ಇಂತೆಂದರು: “ಧರ್ಮಕಾಗಳಲ್ಲಿ ರಕ್ಷಣೆಯನ್ನು ನೀಡುವುದು ರಾಜನ ಕರ್ತವ್ಯವಾಗಿದೆ. ನಾನೊಂದು ಮಹಾಯಾಗವನ್ನು ಪ್ರಾರಂಭಿಸಿದ್ದೇನೆ. ಆದರೆ ರಾಕ್ಷಸರು ಅದನ್ನು ಭಂಗ ಪಡಿಸುತ್ತಿದ್ದಾರೆ. ಅವರನ್ನು ಶಿಕ್ಷಿಸಲು ಮತ್ತು ಯಜ್ಞವನ್ನು ರಕ್ಷಿಸಲು ಯೋಗ್ಯನಾದ ವ್ಯಕ್ತಿ ಶ್ರೀರಾಮನೇ ಎಂದು ನಾನು ನಿರ್ಣಯಿಸಿದ್ದೇನೆ.”
ಇದನ್ನು ಕೇಳಿದ ದಶರಥನು ದಿಢನಾದನು. ಅವನು ವಿನಯವಾಗಿ ಕೇಳಿಕೊಂಡನು. “ರಾಮನು ಇನ್ನೂ ತುಂಬಾ ಚಿಕ್ಕವಯಸ್ಸಿನವನು. ಅವನಿಗೆ ಇಂಥ ಕಠಿಣ ಕೆಲಸವು ಸಲ್ಲದು,” ಎಂದನು. ಅದರ ಬದಲು ಬೇಕಾದಷ್ಟು ಸೈನಿಕ ಸಹಾಯವನ್ನು ನೀಡಲು ಸಿನಾದನು. ಅಯೋಧ್ಯೆಯ ಸಮಸ್ತ ಸೈನ್ಯವೂ ಅಲ್ಲದೇ ಸ್ವತಃ ತಾನೇ ಮುಂದೆ ನಿಂತು ರಾಕ್ಷಸರೊಡನೆ ಹೋರಾಡಲು ಸಿನಾದನು. ವಿಶ್ವಾಮಿತ್ರರು ಇದರಿಂದ ಬೇಸರಪಟ್ಟುಕೊಂಡರು. ಅವರು ತಕ್ಷಣವೇ ತಮ್ಮ ಆಸನದಿಂದೆದ್ದು, “ಕೊಟ್ಟ ಮಾತಿಗೆ ತಪ್ಪುವೆ,” ಎಂದು ದಶರಥ ರಾಜನನ್ನು ಹೀಯಾಳಿಸತೊಡಗಿದ.
ಆಗ ಅಯೋಧ್ಯೆಯ ರಾಜರಿಗೆ ಕುಲಗುರುವಾದ ವಸಿಷ್ಠ ಮಹರ್ಷಿಗಳು ಪರಿಸ್ಥಿತಿ ವಿಕೋಪಕ್ಕೆ ಹೋಗುವುದೆಂದು ತಿಳಿದು ಮಧ್ಯ ಪ್ರವೇಶಿಸಿ ದಶರಥನಿಗೆ ಹೀಗೆ ಹೇಳಿದರು, “ಹೇ ಮಹಾರಾಜ, ವಿಶ್ವಾಮಿತ್ರರು ಒಬ್ಬ ಮಹರ್ಷಿಯಾಗಿರುವರು. ರಾಕ್ಷಸರ ನಾಶ ಮತ್ತು ಯಜ್ಞರಕ್ಷಣೆಗೆ ರಾಮನೊಬ್ಬನೇ ಸಮರ್ಥನೆಂಬುದು ಅವರಿಗೆ ಗೊತ್ತು. ಆದ್ದರಿಂದ ರಾಮ ಲಕ್ಷ್ಮಣರನ್ನು ಅವರೊಂದಿಗೆ ಕಳುಹಿಸುವುದಕ್ಕೆ ಹಿಂಜರಿಯಬೇಡ. ಇದು ನಿಜವಾಗಿಯೂ ನಿನ್ನ ಮಕ್ಕಳಿಗೆ ವರಪ್ರಸಾದವೇ ಆಗಿದೆ.”
ದಶರಥನು ವಸಿಷ್ಠರ ಸಲಹೆಯಂತೆ ರಾಮ-ಲಕ್ಷ್ಮಣರನ್ನು ಕಳುಹಿಸಲು ನಿರ್ಣಯಿಸಿದನು. ಸೋದರರಿಬ್ಬರೂ ಆಸ್ಥಾನವನ್ನು ಪ್ರವೇಶಿಸಿದರು. ರಾಮನು ತನ್ನ ತಂದೆ, ತಾಯಿ, ಗುರು ವಸಿಷ್ಠರ ಮತ್ತು ವಿಶ್ವಾಮಿತ್ರರ ಪಾದ ಮುಟ್ಟಿ ನಮಸ್ಕರಿಸಿದನು. ದಶರಥನು ತನ್ನ ಮಕ್ಕಳಿಗೆ ಋಷಿಯ ಜೊತೆ ಹೋಗಲು ಮತ್ತು ಅವರ ಆಜ್ಞೆಯನ್ನು ಪಾಲಿಸಲು ಆದೇಶವಿತ್ತನು.
ಯುವರಾಜರ ಮೊದಲ ಸಾಹಸ
ವಿಶ್ವಾಮಿತ್ರರು ತಮ್ಮ ರಕ್ಷಕರೊಡಗೂಡಿ ಆ ರಾತ್ರಿ ಸರಯೂ ನದೀ ತೀರದಲ್ಲಿ ವಿಶ್ರಾಂತಿ ಪಡೆದರು. ಅಲ್ಲಿ ಅವರಿಗೆ ಆಯಾಸ ಮತ್ತು ಆಘಾತ ರಕ್ಷಣೆ ಪಡೆಯಲು ಮಂತ್ರಗಳನ್ನು ಉಪದೇಶಿಸಿದರು ಮತ್ತು ಅಸ್ತ್ರವಿದ್ಯೆಯನ್ನು ಕಲಿಸಿದರು. ಅಲ್ಲಿಂದ ಅವರು ಮುಂದುವರಿದು ಗಂಗಾನದಿಯನ್ನು ದಾಟಿದರು. ಅನಂತರ ದಂಡಕಾರಣ್ಯವನ್ನು ಪ್ರವೇಶಿಸಿದರು.
ಅರಣ್ಯತೀರದಲ್ಲಿ ಅವರು ಒಬ್ಬ ರಾಕ್ಷಸಿಗೆ ಎದುರಾರದು. ಅವಳ ಹೆಸರು ತಾಟಕಿ. ಅವಳು ಸಾವಿರ ಆನೆಯ ಬಲವುಳ್ಳವಳೆಂದು ಪ್ರಸಿದ್ದಿ ಪಡೆದಿದ್ದಳು. ವಿಶ್ವಾಮಿತ್ರರು ರಾಮನಿಗೆ ತಡಮಾಡದೆ ತ್ವರೆಯಿಂದ ಅವಳನ್ನು ಕೊಂದು ಹಾಕಲು ಹೇಳಿದರು. ಅವಳು ಋಷಿ ಮತ್ತು ಯುಗಾದಿ ಕರ್ಮಗಳಿಗೆ ಅಪಾಯಕಾರಿಯಾಗಿದ್ದಳು. ರಾಮನು ವಿಶ್ವಾಮಿತ್ರರ ಅಪ್ಪಣೆಯಂತೆ ಕೂಡಲೇ ಆ ತಾಟಕಿಯನ್ನು ಬಾಣವೆಸೆದು ಕೊಂದನು.
ತದನಂತರ ಅವರು ಸಿದ್ಧಾಶ್ರಮವನ್ನು ತಲುಪಿದರು. ಅದು ವಿಶ್ವಾಮಿತ್ರರ ಪರ್ಣಕುಟಿಯಾಗಿತ್ತು. ಮಾರನೇ ದಿನ ಬೆಳಿಗ್ಗೆ ತಮ್ಮ ಯಜ್ಞವನ್ನು ಪ್ರಾರಂಭಿಸಿದರು. ಅವರ ಸಹಾಯಕ್ಕೆ ಇನ್ನೂ ಅನೇಕ ಮುನಿಗಳು ಉಪಸ್ಥಿತರಿದ್ದರು. ರಾಮ-ಲಕ್ಷ್ಮಣರು ರಾಕ್ಷಸರ ಪ್ರವೇಶವಾಗದಂತೆ ಎಚ್ಚರಿಕೆಯಿಂದ ಕಾವಲು ಕಾಯುತ್ತಿದ್ದರು. ಹೀಗೆ ಯಜ್ಞ ಪ್ರಾರಂಭಿಸಿದ ಆರನೇ ದಿವಸ ಮಾರೀಚ ಮತ್ತು ಸುಬಾಹುಗಳಿಂದೊಡಗೂಡಿದ ರಾಕ್ಷಸರ ಸೈನ್ಯವು ಆಕಾಶವು ಮುಚ್ಚುವಂತೆ ಹರಡಿತು. ಆ ಇಬ್ಬರು ರಾಕ್ಷಸ ಮುಂದಾಳುಗಳು ಮಾಂಸ, ರಕ್ತಾದಿಗಳನ್ನು ಪವಿತ್ರವಾದ ಅಗ್ನಿಯಲ್ಲಿ ಹಾಕಲು ಸಿದ್ಧರಾದರು. ರಾಮ-ಲಕ್ಷ್ಮಣರು ಅತ್ಯುತ್ಸಾಹದಿಂದ ಬಲಿಷ್ಠವಾದ ಅಸ್ತ್ರಗಳನ್ನು ಪ್ರಯೋಗಿಸಿ ಸುಬಾಹುವನ್ನು ಕೊಂದು ಹಾಕಿದರು ಮತ್ತು ಮಾರೀಚನನ್ನು ಸಾವಿರ ಗಾವುದ ದೂರ ಸಮದ್ರದಲ್ಲೆಸೆದರು.
ವಿಶ್ವಾಮಿತ್ರನ ಯಜ್ಞವು ಯಶಸ್ವಿಯಾಗಿ ನೆರವೇರಿತು. ಅವರು ರಾಜಕುಮಾರರನ್ನು ಅಭಿನಂದಿಸಿದರು. ಮಾರನೆಯ ದಿನ ಬೆಳಗ್ಗೆ ವಿಶ್ವಾಮಿತ್ರರು ತಾವು ಜನಕ ರಾಜನ ರಾಜಧಾನಿಯಾದ ಮಿಥಿಲಾ ನಗರಕ್ಕೆ ಹೋಗುವೆವೆಂದು ಹೇಳಿದಾಗ ಲಕ್ಷ್ಮಣನು, “ಅದಕ್ಕೋಸ್ಕರವೇನು ನಾವು ಬಂದದ್ದು? ಯಜ್ಞ ರಕ್ಷಣೆಗೆ. ಅದು ಮುಗಿದ ನಂತರ ಈಗ ಅಯೋಧ್ಯೆಗೆ ವಾಪಸಾಗಬೇಕು,” ಎಂದನು. ಆದರೆ ರಾಮನು ಅವನಿಗೆ ಹೀಗೆ ಹೇಳಿದನು. ”ತಮ್ಮ! ಪೂಜ್ಯ ತಂದೆಯವರು ಮುನಿಯ ಆಜ್ಞೆಯನ್ನು ಶಿರಸಾ ಪಾಲಿಸಲು ಹೇಳಿದ್ದಾರೆ. ಆದ್ದರಿಂದ ಅವರಿಗೆ ಅನುಗುಣವಾಗಿ ನಡೆಯುವುದು ನಮ್ಮ ಕರ್ತವ್ಯವಾಗಿದೆ.”
ಅದೇ ಪ್ರಕಾರವಾಗಿ ವಿಶ್ವಾಮಿತ್ರರು ರಾಮಲಕ್ಷ್ಮಣರ ಜೊತೆಗೂಡಿ ಮಿಥಿಲಾ ಪಟ್ಟಣಕ್ಕೆ ಪ್ರವಾಸವನ್ನು ಕೈಗೊಂಡರು.
ಪ್ರಶ್ನೆಗಳು:
- ದಶರಥನು ರಾಮಲಕ್ಷ್ಮಣರನ್ನು ವಿಶ್ವಾಮಿತ್ರನೊಡನೆ ಕಳುಹಿಸಲು ಏಕೆ ಹಿಂಜರಿದನು?
- ರಾಮನು ಆಸ್ಥಾನವನ್ನು ಪ್ರವೇಶಿಸಿದ ನಂತರ ಏಕೆ ಮೊದಲು ತಾಯಿಯನ್ನೂ ಅನಂತರ ತಂದೆಯನ್ನೂ ತದನಂತರ ತನ್ನ ಕುಲಗುರು ಮತ್ತು ಕೊನೆಯದಾಗಿ ಅಲ್ಲಿಗೆ ಬಂದ ಮುನಿಯನ್ನೂ ಪಾದಮುಟ್ಟಿ ನಮಸ್ಕರಿಸಿದನು?