ಬಾಲವಿಕಾಸ ಗ್ರೂಪ್ _ ೧ ರ ಮಕ್ಕಳಿಗೆ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮದಲ್ಲಿ ತಿಳಿಸಿ ಹೇಳಬೇಕಾದ ಪ್ರಮುಖ ಅಂಶಗಳು:

Print Friendly, PDF & Email
ಬಾಲವಿಕಾಸ ಗ್ರೂಪ್ _ ೧ ರ ಮಕ್ಕಳಿಗೆ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮದಲ್ಲಿ ತಿಳಿಸಿ ಹೇಳಬೇಕಾದ ಪ್ರಮುಖ ಅಂಶಗಳು:

  • ನಿದ್ದೆ – ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಏಳುವುದರಿಂದ ಆರೋಗ್ಯ, ಐಶ್ವರ್ಯ ದೊರೆಯುತ್ತದೆ. ಬುದ್ಧಿ ತೀಕ್ಷ್ಣಗೊಳ್ಳುತ್ತದೆ.
  • ಸರಿಯಾದ ಪ್ರಮಾಣದ ನಿದ್ದೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
  • ಮಲಗುವ ಮೊದಲು ಮಾಡುವ ಪ್ರಾರ್ಥನೆ ಒಳ್ಳೆಯ ನಿದ್ದೆಗೆ ಮದ್ದು.
  • ವ್ಯಾಯಾಮ – ಹೊರಗೆ ಆಟ ಆಡುವುದು ಒಳ್ಳೆಯದು.
  • ಕಂಪ್ಯೂಟರ್ ನಲ್ಲಿ ಆಟ ಆಡುವುದಾಗಲೀ ಅಥವಾ ದೂರದರ್ಶನ ಕಾರ್ಯಕ್ರಮಗಳನ್ನು ಬಹಳ ಹೊತ್ತು ವೀಕ್ಷಿಸುವುದಾಗಲೀ ಆರೋಗ್ಯಕ್ಕೆ ಒಳ್ಳೆಯದಲ್ಲ.
  • ಯೋಗ್ಯ ಯೋಗಗುರುಗಳಿಂದ ಸರಳ ಯೋಗಾಸನಗಳನ್ನು ಕಲಿತು ಸರಿಯಾದ ರೀತಿಯಲ್ಲಿ ಮಾಡಿ.
  • ಆರೋಗ್ಯಕರವಾದ ಸಮತೋಲನ ಆಹಾರ ಸೇವಿಸಿ.
  • ಸಿಹಿ ಪದಾರ್ಥಗಳನ್ನು, ಚಾಕೊಲೇಟ್ ಗಳನ್ನು ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ಹೆಚ್ಚು ಸೇವಿಸಬೇಡಿ.
  • ಅದರ ಬದಲಾಗಿ ಹಣ್ಣಗಳನ್ನು ಮತ್ತು ತರಕಾರಿಗಳನ್ನು ಹೆಚ್ಚು ತಿನ್ನಿ. ಹಾಲು ಮತ್ತು ತಾಜಾ ಹಣ್ಣಿನ ರಸ ಕುಡಿಯಿರಿ.
  • ಬೆಳಗಿನ ಉಪಹಾರವನ್ನು ಮಾಡಲೇಬೇಕು.
  • ಆಹಾರವನ್ನು ವ್ಯರ್ಥ ಮಾಡಬಾರದು.
  • ಆಹಾರವನ್ನು ಬಾಯಲ್ಲಿ ಹಾಕಿಕೊಂಡನಂತರ ಚೆನ್ನಾಗಿ ಅಗಿದು ತಿನ್ನಬೇಕು.
  • ಊಟಕ್ಕೆ ಕುಳಿತಾಗ ತಟ್ಟೆಯಲ್ಲಿರುವ ಆಹಾರವನ್ನು ತಟ್ಟೆಯ ಸುತ್ತ ಚೆಲ್ಲದೆ ಸಾವಧಾನದಿಂದ ಊಟ ಮಾಡಬೇಕು.
  • ಊಟ ಮಾಡುವಾಗ ಮೌನವಾಗಿ ಊಟಮಾಡಬೇಕು.
  • ಬಾಯಿ ತುಂಬಾ ಆಹಾರವನ್ನಿಟ್ಟುಕೊಂಡು ಮಾತನಾಡಬೇಡಿ.
  • ಶಬ್ದ ಮಾಡಿಕೊಂಡು ಊಟ ಮಾಡಬೇಡಿ.
  • ಆಹಾರವನ್ನು ಬಾಯಿಗೆ ಹಾಕಿಕೊಂಡ ನಂತರ ಬಾಯಿಮುಚ್ಚಿಕೊಂಡು ತಿನ್ನಬೇಕು.
  • ತಿನ್ನುವ ಮೊದಲು ಆಹಾರವನ್ನು ದೇವರಿಗೆ ಅರ್ಪಿಸಿ “ಪ್ರಸಾದ”ರೂಪವಾಗಿ ತಿನ್ನಬೇಕು.
  • ಶುದ್ಧ, ಕುದಿಸಿದ ನೀರನ್ನು ಸಾಕಷ್ಟು ಕುಡಿಯಿರಿ.
  • ‘ದೇಹವೇ ದೇವಾಲಯ’ ಅದನ್ನು ಶುಚಿಯಾಗಿರಿಸಿಕೊಳ್ಳಿ.
  • ಪ್ರತಿದಿನವೂ ಸ್ನಾನ ಮಾಡಬೇಕು. ಸ್ನಾನಮಾಡದಿದ್ದರೆ ಹೊರಗಿನ ಧೂಳು ಮೈಮೇಲೆ ಉಳಿದು ಚರ್ಮರೋಗ ಬರುತ್ತದೆ. ದೇಹದಿಂದ ದುರ್ಗಂಧ ಬರುತ್ತಿದ್ದರೆ ಯಾರೂ ನಮ್ಮನ್ನು ಇಷ್ಟ ಪಡುವುದಿಲ್ಲ.
  • ಸೋಪು ಮತ್ತು ನೀರಿನ ಬಳಕೆಯಿಂದ ಚೆನ್ನಾಗಿ ಸ್ನಾನ ಮಾಡಬೇಕು. ದೇಹದ ಭಾಗಗಳನ್ನು ಚೆನ್ನಾಗಿ ಉಜ್ಜಿ ನೀರಿನಿಂದ ತೊಳೆದು ಸ್ನಾನ ಮಾಡಬೇಕು.
  • ಸ್ನಾನದ ನಂತರ ಶುದ್ಧ ವಸ್ತ್ರದಿಂದ ಮೈ ಒರೆಸಿಕೊಳ್ಳಬೇಕು. ದಿನವೂ ಸ್ನಾನಮಾಡುವ ಅಗತ್ಯವನ್ನು ಮಕ್ಕಳಿಗೆ ತಿಳಿಸಬೇಕು.
  • ಸ್ನಾನವು ದೇಹವನ್ನು ಶುದ್ಧವಾಗಿಡುವಂತೆ, ಪ್ರಾರ್ಥನೆ ಮನಸ್ಸನ್ನು ಶುದ್ಧವಾಗಿಡುತ್ತದೆ.
  • ಕೂದಲಿನ ಸ್ವಚ್ಛತೆ – ತಲೆಗೂದಲನ್ನು ಪ್ರತಿದಿನ ತೊಳೆಯಿರಿ. ತಲೆಗೆ ಪ್ರತಿದಿನ ಎಣ್ಣೆಹಾಕಿ ಚೆನ್ನಾಗಿ ಬಾಚಿ. ಹೇನು ಮುಂತಾದುವುಗಳಿಗೆ ಕೂದಲಿನಲ್ಲಿ ಜಾಗವಿರದಿರಲಿ.
  • ದಂತ ಆರೋಗ್ಯ – ಹಲ್ಲುಗಳನ್ನು ಸರಿಯಾದ ರೀತಿಯಲ್ಲಿ ಪ್ರತಿದಿನ ಉಜ್ಜಬೇಕು.
  • ನಾವು ತಿಂದ ಆಹಾರ ಬಾಯಿಯಲ್ಲೇ ಉಳಿದು ಹಲ್ಲಗಳ ಸಂದುಗಳಲ್ಲಿ ಸಿಕ್ಕಿಹಾಕಿಕೊಂಡಾಗ ಬಾಯಿಯಿಂದ ದುರ್ವಾಸನೆ ಬರಲಾರಂಭಿಸುತ್ತದೆ. ಇದಕ್ಕೆ ಕಾರಣ ಆಹಾರ ಕೊಳೆತಾಗ ಉಂಟಾಗುವ ಬ್ಯಾಕ್ಟೀರಿಯಾಗಳು. ಇದರಿಂದ ಹಲ್ಲುಗಳಿಗೆ ಸೋಂಕು ಉಂಟಾಗಿ ಬಿದ್ದು ಹೋಗುತ್ತದೆ. ಹಲ್ಲಿಲ್ಲದೆ ಆಹಾರ ತಿನ್ನಲಾಗುವುದಿಲ್ಲ. ಹಲ್ಲುಗಳು ಸ್ವಚ್ಛವಾಗಿರಲು ಮತ್ತು ಹೊಳೆಯುತ್ತಿರಲು ಬೆಳಿಗ್ಗೆ ಮತ್ತು ರಾತ್ರಿ ಎರಡು ಹೊತ್ತು ಬ್ರಷ್ ಮಾಡಿ.
  • ಹಲ್ಲಿನ ಆರೋಗ್ಯಕ್ಕಾಗಿ ನಿಯಮಿತವಾಗಿ ದಂತವೈದ್ಯರನ್ನು ಭೇಟಿಮಾಡಿ.
  • ಉಗುರುಗಳು – ಉಗುರುಗಳು ಬೆಳೆಯಲು ಬಿಡದಂತೆ ನಿಯಮಿತವಾಗಿ ಕತ್ತರಿಸುತ್ತಿರಿ.
  • ಉಗುರು ಕಚ್ಚಬೇಡಿ.
  • ಕೈ ತೊಳೆಯುವುದು – ಆಹಾರ ತಿನ್ನುವ ಮೊದಲು ಮತ್ತು ನಂತರ ಚೆನ್ನಾಗಿ ಕೈ ತೊಳೆಯಿರಿ. ಶೌಚಕ್ಕೆ ಹೋದಾಗ, ಇಲ್ಲವೇ ಪ್ರಾಣಿಗಳನ್ನು ಮುಟ್ಟಿದಾಗ ಕೈಗಳನ್ನು ಚೆನ್ನಾಗಿ ತೊಳೆಯಬೇಕು.
  • ಪಾದರಕ್ಷಣೆ – ಪಾದರಕ್ಷೆಗಳಿಲ್ಲದೆ ಹೊರಗೆ ಹೋಗಬೇಡಿ.ಆಟವಾಡಿದನಂತರ ಮನೆಯೊಳಗೆ ಬರುವ ಮೊದಲು ಕಾಲುಗಳನ್ನು ಮತ್ತು ಪಾದಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.
  • ಬಟ್ಟೆ – ಸೋಪು ಬಳಸಿ ನೀರಿನಿಂದ ಒಗೆದು ಸ್ವಚ್ಛ ಮಾಡಿದ ಬಟ್ಟೆ ಉಪಯೋಗಿಸಿ. ಕೊಳೆ ಮತ್ತು ಮಣ್ಣಾದ ಬಟ್ಟೆಗಳನ್ನು ಕೂಡಲೇ ತೆಗೆದು ಒಗೆಯಲು ಹಾಕಿ.
  • ಕಣ್ಣಿನ ರಕ್ಷಣೆ – ಸ್ವಚ್ಛವಾದ ನೀರಿನಿಂದ ಕಣ್ಣುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.
  • ಮಲಗುವ ಮೊದಲು ಕಣ್ಣುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಏಕೆಂದರೆ ದಿನವಿಡೀ ಕಣ್ಣುಗಳು ಧೂಳಾಗಿದ್ದರೆ, ತೊಳೆಯುವುದರಿಂದ ಧೂಳನ್ನು ನಿವಾರಿಸಬಹುದು.
  • ಕಣ್ಣುಗಳನ್ನು ಒರೆಸಿಕೊಳ್ಳಲು ಸ್ವಚ್ಛವಾದ ಬಟ್ಟೆಯನ್ನು ಇಟ್ಟುಕೊಳ್ಳಿ. ಸೀರೆಯಿಂದಾಗಲೀ, ಪಂಚೆಯಿಂದಾಗಲೀ, ತೋಳಿನ ಬಟ್ಟೆಯಿಂದಾಗಲೀ ಕಣ್ಣನ್ನು ಒರೆಸಬೇಡಿ. ಇದರಿಂದ ಕಣ್ಣಿಗೆ ಸೋಂಕು ಹರಡಬಹುದು.
  • ಕಣ್ಣನ್ನು ಒರೆಸಲು ಪ್ರತಿಯೊಬ್ಬರೂ ಬೇರೆ ಬೇರೆ ಬಟ್ಟೆ, ಕರವಸ್ತ್ರ ಅಥವಾ ಟವೆಲ್ ಅನ್ನು ಬಳಸಬೇಕು. ಈಗಾಗಲೇ ಒಂದು ಕಣ್ಣಿನಲ್ಲಿ ಸೋಂಕು ಇದ್ದರೆ, ಮತ್ತೊಂದು ಕಣ್ಣನ್ನು ಸ್ವಚ್ಛಗೊಳಿಸಲು ಬೇರೆ ಬಟ್ಟೆಯನ್ನು ಬಳಸಿ.
  • ಕಣ್ಣಿಗೆ ಸೋಂಕಾಗಿದ್ದರೆ ಸರಿಯಾದ ವೈದ್ಯರಿಂದ ಚಿಕಿತ್ಸೆ ಪಡೆಯಿರಿ. ರಸ್ತೆ ಬದಿಯ ಮಾರಾಟಗಾರರಿಂದ ಕಣ್ಣಿನ ಔಷಧ ತೆಗೆದುಕೊಂಡು ಬಳಸಬೇಡಿ. ಇದರಿಂದ ಸೋಂಕು ನಿವಾರಣೆಯಾಗುವುದಿಲ್ಲ. ಕೆಲವೊಮ್ಮೆ ಕುರುಡುತನವೂ ಉಂಟಾಗಬಹುದು.
  • ಕಣ್ಣಿನ ಆರೋಗ್ಯಕ್ಕಾಗಿ ಹಸಿರು ಎಲೆ ತರಕಾರಿಗಳಾದ ದಂಟಿನಸೊಪ್ಪು, ಅಗಸೆ, ಪಾಲಾಕ್, ನುಗ್ಗೆಸೊಪ್ಪು ಮೊದಲಾದವುಗಳನ್ನು ಊಟದಲ್ಲಿ ಬಳಸಿ. ಪಪ್ಪಾಯಿ, ಮಾವಿನಹಣ್ಣು ತಿನ್ನಿರಿ. ಇವುಗಳಲ್ಲಿ ವಿಟಮಿನ್ ‘ ಎ’ ಇರುವುದರಿಂದ ಇವು ರಾತ್ರಿ ಕುರುಡುತನವನ್ನು ನಿವಾರಿಸುತ್ತವೆ ಮತ್ತು ಇವು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
  • ಓದುವಾಗ ತಲೆನೋವು ಅಥವಾ ಕಣ್ಣುನೋವು ಎಂದು ದೂರುವ ಮಕ್ಕಳಿಗೆ ಕನ್ನಡಕದ ಅವಶ್ಯಕತೆ ಇರಬಹುದು. ಅಂತಹವರು ಸೂಕ್ತ ವೈದ್ಯರಿಂದ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡು, ಕನ್ನಡಕ ತೆಗೆದುಕೊಳ್ಳಬೇಕು.
  • ಪ್ರಖರ ಬೆಳಕು ಬೀರುವ ಉಪಕರಣಗಳು ಹೊರಸೂಸುವ ಕಿರಣಗಳನ್ನು ಬರಿಗಣ್ಣಿನಿಂದ ನೋಡಬೇಡಿ.
  • ಸೂಕ್ತ ಉಪಕರಣ ಧರಿಸದೆ ಗ್ರಹಣವನ್ನು ನೋಡಬೇಡಿ. ತೀಕ್ಷ್ಣವಾದ ಕಿರಣಗಳು ಕಣ್ಣಿಗೆ ಹಾನಿಯುಂಟುಮಾಡುತ್ತವೆ.
  • ಕಣ್ಣುಗಳು ಕೆಂಪಾಗಿದ್ದರೆ ತಕ್ಷಣ ವೈದ್ಯರನ್ನು ಭೇಟಿಮಾಡಿ.
  • ಚೂಪಾದ ವಸ್ತುಗಳೊಂದಿಗೆ ಆಟವಾಡಬೇಡಿ. ಇವು ಕಣ್ಣುಗಳಿಗೆ ಗಾಯ ಉಂಟುಮಾಡಬಹುದು. ಕಣ್ಣುಗಳು ದೇವರಕೊಡುಗೆ. ಅವುಗಳನ್ನು ‘ಒಳ್ಳೆಯದನ್ನೇ’ ನೋಡಲು ಬಳಸಿ.
  • ಕಿವಿಗಳ ರಕ್ಷಣೆ –
  • ಸ್ನಾನವಾದನಂತರ ನಿಮ್ಮ ತಾಯಿ ಅಥವಾ ತಂದೆ ಸ್ವಚ್ಛವಾದ ಬಟ್ಟೆಯಿಂದ ನಿಮ್ಮ ಕಿವಿಗಳನ್ನು ಒರೆಸಲಿ.
  • ಕಿವಿಯಲ್ಲಿರುವ ಹೆಚ್ಚಿನ ಮೇಣದಿಂದ ಅಥವಾ ಸೋಂಕಿನಿಂದ ಕಿವಿನೋವು ಬರುತ್ತದೆ. ಕಿವಿನೋವು ಇದ್ದಲ್ಲಿ ಸೂಕ್ತ ವೈದ್ಯರನ್ನು ಭೇಟಿಮಾಡಿ.
  • ಕಿವಿಗಳು ದೇವರ ಕೊಡುಗೆ. ‘ಒಳ್ಳೆಯದನ್ನೇ’ ಕೇಳಲು ಬಳಸಿ.
  • ಗಂಟಲು ಮತ್ತು ಮೂಗಿನ ಸಮಸ್ಯೆಗಳಾದ ಗಂಟಲು ಕೆರೆತ, ಕೆಮ್ಮು, ಉಸಿರಾಡಲು ಕಷ್ಟವಾಗುವುದು ಮುಂತಾದವುಗಳ ನಿವಾರಣೆಗೆ ಬೆಚ್ಚನೆಯ ನೀರು ಕುಡಿಯಿರಿ ಮತ್ತು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ.
  • ಬಿಸಿನೀರಿನ ಆವಿಯನ್ನು ತೆಗೆದುಕೊಳ್ಳುವುದು ಪರಿಣಾಮಕಾರಿಯಾಗಿರುತ್ತದೆ.
  • ಕೆಮ್ಮುವಾಗ ಅಥವಾ ಸೀನುವಾಗ ಟಿಷ್ಯು ಪೇಪರ್ ನ್ನು ಬಾಯಿಗೆ ಅಡ್ಡವಾಗಿರಿಸಿ. ಉಪಯೋಗಿಸಿದ ಟಷ್ಯು ಪೇಪರನ್ನು ಕಸದ ತೊಟ್ಟಿಗೆ ಹಾಕಿ.
  • ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ನಿಮ್ಮ ಪೋಷಕರೊಂದಿಗೆ ಕಿವಿ-ಮೂಗು-ಗಂಟಲು ತಜ್ಞರನ್ನು ಭೇಟಿಮಾಡಿ.

Leave a Reply

Your email address will not be published. Required fields are marked *