ಇಂದು ಜಗತ್ತಿನ ಅತಿ ಮುಖ್ಯ ಬೇಡಿಕೆಯೆಂದರೆ ಅದು ‘ಶಾಂತಿ.’ ವಿಶ್ವಶಾಂತಿಗಾಗಿ ಪ್ರಯತ್ನಿಸಿದ ಅನೇಕ ಪುರುಷರು ಹಾಗೂ ಮಹಿಳೆಯರು ಈ ಪ್ರಯತ್ನದಿಂದಾಗಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಮೆಚ್ಚುಗೆ ಪಡೆದಿದ್ದರೆ, ಅವರಲ್ಲಿ ಕೆಲವರು ‘ನೋಬಲ್ ಪುರಸ್ಕಾರ’ವನ್ನು ಸಹ ಪಡೆದಿದ್ದಾರೆ.
ಶಾಂತಿಯ ಅನ್ವೇಷಕರಿಗೆ ಭಗವಾನರು ಸೂಚಿಸಿರುವ ಒಂದು ಸರಳೋಪಾಯವೆಂದರೆ, ‘I WANT PEACE’ ಎಂಬುದರಲ್ಲಿ ‘I’ ಎಂದರೆ ‘ನಾನು,’ ಮತ್ತು ‘want’ ಎಂದರೇ ‘ಬೇಕು’ ಎಂಬುದನ್ನು ತೆಗೆದುಹಾಕಿ. ಆಗ ಉಳಿಯುವುದೇ ‘ಶಾಂತಿ.’ ಅದು ತಾನೇತಾನಾಗಿ ದೊರೆಯಬಲ್ಲದು. ಮಾನವರಲ್ಲಿ ಶಾಂತಿಯು ತುಂಬಿರುವಾಗ, ಅವರು ಸುಖ, ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಮನಃಸ್ಥಿತಿಯನ್ನು ಪಡೆಯುವರು. ಕೇವಲ ಮಹತ್ವಾಕಾಂಕ್ಷಿಗಳಾಗದೆ, ತೃಪ್ತಿಯಿಂದಲೂ ಜೀವನ ನಡೆಸುವರು. ಜೀವನವನ್ನು ಒಂದು ಸಮತೋಲನದಂತೆ ಭಾವಿಸಿ, ಪ್ರತಿಯೊಂದನ್ನೂ ಭಗವಂತನ ಕೃಪೆಯಾಗಿ ಸ್ವೀಕರಿಸುವರು. ಇದನ್ನೇ, ಭಗವಾನರು ಬಹಳ ಸುಂದರವಾಗಿ ವಿವರಿಸಿದ್ದಾರೆ. “ಇಂದ್ರಿಯಗಳು ನಿಮ್ಮದೆಂಬ ಭಾವನೆಯಿಂದ, ಅವುಗಳಿಗೆ ಪೂರ್ಣ ಸ್ವಾತಂತ್ರ್ಯವನ್ನು ನೀಡುವುದು ಮೂರ್ಖತನ. ಕುದುರೆಯು ನಿಮ್ಮದಾಗಿರಬಹುದು. ಆದರೆ, ಲಗಾಮಿಲ್ಲದೇ ಅದರ ಮೇಲೆ ಸವಾರಿ ಮಾಡಲು ಯತ್ನಿಸಿದರೆ, ಅನಾಹುತವಾಗುವುದು ಖಂಡಿತ. ಅಂತೆಯೇ, ಮೋಟಾರ್ ಕಾರ್ ನಿಮ್ಮದಿರಬಹುದು. ಆದರೆ ಅಗತ್ಯವೆನಿಸಿದಾಗ ಅದಕ್ಕೆ ‘ಬ್ರೇಕ್’ ಹಾಕದಿದ್ದಲ್ಲಿ ಅಪಾಯವು ತಪ್ಪಿದ್ದಲ್ಲ. ಹಾಗೆಯೇ, ಇಂದ್ರಿಯ ನಿಗ್ರಹವು ಎಲ್ಲ ಮಾನವರಿಗೂ ಅತಿ ಅಗತ್ಯವಾಗಿ ಇರಲೇಬೇಕು. ಇದು ಕೇವಲ ಋಷಿ, ಮುನಿಗಳು ಮತ್ತು ಸಂತರಿಗೆ ಮಾತ್ರ ಸೀಮಿತವಲ್ಲ.”
ಈ ವಿಭಾಗದಲ್ಲಿ ‘ಶಾಂತಿ’ಯ ಬಗ್ಗೆ ಕೊಟ್ಟಿರುವ ಕಥೆಗಳನ್ನು ಹೆಚ್ಚು ವಿಶದವಾಗಿ ತಿಳಿದುಕೊಳ್ಳೋಣ.