ಪತ್ರಂ ಪುಷ್ಪಂ – ಹೆಚ್ಚಿನ ಓದುವಿಕೆ
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ||
(ಅಧ್ಯಾಯ ೯; ಶ್ಲೋಕ ೨೬)
ಯಾರು ಎಲೆಯನ್ನೂ, ಹೂವನ್ನೂ, ಹಣ್ಣನ್ನೂ, ನೀರನ್ನೂ ಭಕ್ತಿಯಿಂದ ನೀಡುವನೋ ಅಂತಹ ಶುದ್ಧಚಿತ್ತನಾದ ಭಕ್ತನು ಅರ್ಪಿಸಿದ್ದನ್ನು ನಾನು ಸ್ವೀಕರಿಸುತ್ತೇನೆ.
ಪ್ರೇಮದಿಂದ ಅರ್ಪಿಸಿದ ಅತ್ಯಂತ ಚಿಕ್ಕ ವಸ್ತುವೂ ಸಹ ಭಗವಂತನಿಗೆ ಸಂತೋಷವನ್ನು ಉಂಟುಮಾಡುತ್ತದೆ. ಸಂಪೂರ್ಣ ಸೃಷ್ಟಿಗೆ ಅಗಣಿತವಾದ ಕೊಡುಗೆಗಳನ್ನು ನೀಡಿರುವ ಭಗವಂತನಿಗೆ ನಾವು ಯಾವ ಕೊಡುಗೆಯನ್ನು ನೀಡಲು ಸಾಧ್ಯ? ನಾವು ಅರ್ಪಿಸಬಹುದಾದ ಹೂವು, ಪತ್ರೆ, ಹಣ್ಣು ಮತ್ತು ನೀರು ಎಲ್ಲವೂ ಸಹ ಕೇವಲ ಅವನ ಸೃಷ್ಟಿಯೇ ಆಗಿವೆ.
“ನಾವು ಅವನಿಗೆ ಕೈಗಳಿಂದ ಕೊಡುಗೆಗಳನ್ನು ನೀಡುವುದಲ್ಲ, ಹೃದಯದಿಂದ ನೀಡೋಣ; ಪವಿತ್ರವಾದ ಮತ್ತು ಉದಾತ್ತವಾದ ಅಲೋಚನೆಗಳೆಂಬ ಹೂವುಗಳನ್ನೂ, ಸ್ವಾರ್ಥರಹಿತ ಕಾರ್ಯಗಳೆಂಬ ಹಣ್ಣುಗಳನ್ನೂ ಅವನಿಗೆ ಕೊಡುಗೆಯಾಗಿ ಅರ್ಪೀಸೋಣ. ಇತರರ ಕಷ್ಟಗಳಿಗೆ ನಮ್ಮ ಹೃದಯ ಕರಗಲಿ ಮತ್ತು ಇದರಿಂದ ಹರಿಯುವ ನಮ್ಮ ಕಣ್ಣೀರನ್ನು, ನಮ್ಮ ನೆಚ್ಚಿನ ಪ್ರಭುವಿಗೆ ಅರ್ಪಿಸೋಣ. ನೀವು ಎಷ್ಟು ಸಿಹಿ ಪದಾರ್ಥವನ್ನು ಅರ್ಪಿಸಿದ್ದೀರಿ ಎಂಬುದನ್ನು ಅವನು ಗಮನಿಸುವುದಿಲ್ಲ, ಆದರೆ ನೀವು ಎಷ್ಟು ಮಧುರವಾದ ಮಾತುಗಳನ್ನು ಆಡಿದ್ದೀರಿ, ನಿಮ್ಮ ಆಲೋಚನೆಗಳಿಗೆ ಎಷ್ಟೊಂದು ಮಾಧುರ್ಯವನ್ನು ಸೇರಿಸಿದ್ದೀರಿ ಎಂಬುದನ್ನು ಪರಿಗಣಿಸುತ್ತಾನೆ. ಮಾರುಕಟ್ಟೆಗಳಲ್ಲಿ ಸಿಗುವ ಅಗರಬತ್ತಿಗಳಿಂದ ಪರಿಮಳವನ್ನು ಹರಡಲು ಏಕೆ ಪ್ರಯತ್ನಿಸುತ್ತೀರಿ? ದಿವ್ಯ ಆಲೋಚನೆಗಳ, ಎಲ್ಲರ ಬಗ್ಗೆ ಪೂರ್ಣಪ್ರೇಮದ ಪರಿಮಳದ ಹೊಗೆಯು ನಿಮ್ಮ ಸುತ್ತ ವ್ಯಾಪಿಸಲಿ” ಎಂದು ಸ್ವಾಮಿ ಹೇಳಿದ್ದಾರೆ.
ಒಮ್ಮೆ ಸಂತ ಏಕನಾಥರು ಮತ್ತು ಅವರ ಸಂಗಡಿಗರು ವಾರಣಾಸಿಯಿಂದ ಪವಿತ್ರವಾದ ಗಂಗಾಜಲವನ್ನು ಸಂಗ್ರಹಿಸಿ, ಅದರಿಂದ ಭಾರತದ ದಕ್ಷಿಣ ತುದಿಯಲ್ಲಿ ಮೂರು ಸಮುದ್ರಗಳ ಸಂಗಮ ಸ್ಥಳದಲ್ಲಿರುವ ರಾಮೇಶ್ವರದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಲು ಸಂಕಲ್ಪಮಾಡಿದರು.
ಆ ಪವಿತ್ರ ಜಲವನ್ನು ಹಿಡಿದುಕೊಂಡು ಅವರು ನೂರಾರು ಮೈಲಿ ದೂರವನ್ನು ನಡೆದುಕೊಂಡು ಹೊರಟರು. ದೂರದ ಯಾತ್ರೆಯು ಇನ್ನೇನು ಮುಕ್ತಾಯ ಹಂತದಲ್ಲಿತ್ತು. ದೇವಾಲಯವನ್ನು ಸಮೀಪಿಸುತ್ತಿರುವಾಗ, ಬಾಯಾರಿಕೆಯಿಂದ ಬಳಲಿ, ಮರಣಯಾತನೆಯ ಸ್ಥಿತಿಯಲ್ಲಿ ಮಲಗಿರುವ ಒಂದು ಕತ್ತೆಯು ಏಕನಾಥರ ದೃಷ್ಟಿಗೆ ಬಿತ್ತು. ಏಕನಾಥರು ಕತ್ತೆಯ ಸಮೀಪಕ್ಕೆ ಓಡಿಹೋಗಿ, ಏದುಸಿರು ಬಿಡುತ್ತಿದ್ದ ಅದರ ಒಣಗಿದ ಬಾಯಿಗೆ ಸ್ವಲ್ಪವೂ ಸಂದೇಹಪಡದೆ ಪವಿತ್ರ ಗಂಗಾಜಲವನ್ನು ಸುರಿದರು. ತನ್ನನ್ನು ಕಾಪಾಡಿದವರ ಕಡೆಗೆ ನೋಡಿದ ಪ್ರಾಣಿಯ ಕಣ್ಣುಗಳು ಕೃತಜ್ಞತೆಯಿಂದ ಮಿನುಗಿದವು.
ಏಕನಾಥರ ಸಂಗಡಿಗರು, ಇಂತಹ ಸುದೀರ್ಘವಾದ ಪ್ರಯಾಸಕರ ಪ್ರಯಾಣದ ನಂತರ, ತಮ್ಮ ಸಂಕಲ್ಪವು ಬಹಳಷ್ಟು ಪೂರ್ಣಗೊಳ್ಳುವ ಅಂಚಿನಲ್ಲಿರುವಾಗ, ಸಂಕಲ್ಪದ ಅಸಾಂಪ್ರದಾಯಿಕ ಉಲ್ಲಂಘನೆಯನ್ನು ಕಂಡು ಆಘಾತದಿಂದ ದಿಘ್ಮೂಢರಾದರು.
ಆದರೆ ಏಕನಾಥರು, “ಉದ್ದೇಶ ಈಡೇರಿತು! ಶಿವನು ಕರೆದ, ಕೇಳಿಸಿಕೊಂಡ ಶಿವನು ಬಂದು ಪಡೆದುಕೊಂಡ, ಬಳಲುತ್ತಿರುವವರಿಗೆ ಮಾಡಿದ ಸೇವೆಯು ಭಗವಂತನಿಗೇ ತಲಪುತ್ತದೆ” ಎಂದು ಅತ್ಯಂತ ಆನಂದದಿಂದ ಉದ್ಗಾರ ಮಾಡಿದರು.