ಪ್ರಕೃತಿಯೋಂದಿಗೆ ಮಾರ್ಗಸೂಚಿತ ಮನೋಚಿತ್ರಣ
ಹರಿಯುವ ನದಿಯಲ್ಲಿರುವ ಅಸಂಖ್ಯಾತ ನೀರಿನ ಹನಿಗಳಂತೆ,ನಮ್ಮ ಆಲೋಚನಪ್ರವಾಹವೂ ಸಹ ಎಣಿಕೆಗೆ ಸಿಗದ ಹಲವಾರು ಪದಗಳು ಮತ್ತು ಕ್ರಿಯೆಗಳ ಒಂದು ಸಮೂಹ. ಈ ನದಿಯ ಮೇಲೆ ನಮ್ಮ ಹಿಡಿತವು ಬಹು ಕಡಿಮೆ. ಬಾಬಾ ರವರು ಹೇಳಿರುವಂತೆ, ತನ್ನ ದಾರಿಗೆ ಅಡ್ಡಲಾಗಿ ಬರುವ ಎಂತಹ ಭಾರಿ ಬಂಡೆಕಲ್ಲುಗಳನ್ನಾಗಲೀ, ಕೊಚ್ಚಿಕೊಂಡು ಹೋಗುವ ಅಪಾರ ಶಕ್ತಿಯು ನದಿಗೆ ಇದೆ. ಆದರೆ, ಇಂತಹ ನದಿಯು ಹುಟ್ಟುವ ಸ್ಥಳದಲ್ಲಿ, ಕೇವಲ ಒಂದು ಬಂಡೆಯಿಂದ ಅದನ್ನು ಅಡ್ಡ ಕಟ್ಟುವ ಅಥವಾ ಹರಿವ ದಿಕ್ಕನ್ನು ಸುಲಭದಲ್ಲಿ ಬದಲಾಯಿಸುವ ಸಾಧ್ಯವಿದೆ. ಆಲೋಚನೆಗಳ ನದಿಯನ್ನೂ ಸಹ, ‘ಮೌನ’ ವೆಂಬ ಮಾಂತ್ರಿಕ ಶಕ್ತಿಯಿಂದ ನಿಯಂತ್ರಿಸಲು ಸಾಧ್ಯ. “ಪ್ರಕ್ಷುಬ್ದ ಮತ್ತು ಚಂಚಲ ಮನಸ್ಸನ್ನು ಶಾಂತಗೊಳಿಸಲು “ಮೌನ” ವೆಂಬ ಶಕ್ತಿಗೆ ಸಮಾನವಾದುದು ಬೇರಾವುದೂ ಇಲ್ಲ” ಎಂದು ಬಾಬಾರವರು ಹೇಳುತ್ತಾರೆ.
“ಮೌನ”ದ ಅನುಭವವನ್ನು ಪಡೆಯಲು, ಇರುವ ಹಲವಾರು ವಿಧಾನಗಳಲ್ಲಿ, “ಮಾರ್ಗ ಸೂಚಿತ ಮನೋಚಿತ್ರಣ” ವೂ ಸಹ ಒಂದು. ಹನ್ನೆರಡು ವರ್ಷದೊಳಗಿನ ಮಕ್ಕಳಿಗೆ ಈ ವಿಧಾನವು ಬಹು ಪ್ರಯೋಜನಕಾರಿ. ಈ ಚಟುವಟಿಕೆಯಲ್ಲಿ ಅವರನ್ನು ತೊಡಗಿಸುವುದು ತುಂಬಾ ಉತ್ತಮ ಪರಿಣಾಮ ವನ್ನುನೀಡುವುದು. ಈ ಅವಧಿಯಲ್ಲಿ, ಪ್ರಕೃತಿಯ ಯಾವುದಾದರೊಂದು ಅಂಶದ ಮೇಲೆ ಅವರ ಮನಸ್ಸನ್ನು ಕೇಂದ್ರೀಕರಿಸುವಂತೆ ಮಾಡಿ, ಆ ಅಂಶದ ವಿವಿಧ ವಿಷಯಗಳ ಬಗ್ಗೆ ಸವಿಸ್ತಾರವಾಗಿ ವರ್ಣಿಸುತ್ತಾ, ಅದರ ಬಗ್ಗೆ ಅವರು ತಮ್ಮ ಮನೋನೇತ್ರಗಳ ಮೂಲಕ, ಮಾನಸಿಕ ಚಿತ್ರಣದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬಹುದು.
ಸಾರ್ವತ್ರಿಕವಾಗಿ ಪ್ರಚಲಿತವಾಗಿರುವ “ಜ್ಯೋತಿರ್ಧ್ಯಾನ” ವೂ ಸಹ ಇಂತಹುದೇ ಒಂದು ವಿಧಾನ. ಇದರಲ್ಲಿ, ತಮ್ಮ ಮನದೊಳಗೆ ಅಡಗಿರುವ ಜ್ಯೋತಿಯನ್ನು ಹೊರತಂದು, ಅದನ್ನು ‘ಪ್ರೇಮ’ ಮತ್ತು ‘ಐಕ್ಯತೆ’ ಗಳ ಸಂಕೇತವಾಗಿ, ಎಲ್ಲ್ಲೆಡೆಯೂ ವ್ಯಾಪಿಸುತ್ತಿರುವಂತೆ, ಮನಸ್ಸಿನಲ್ಲಿ ಚಿತ್ರೀಕರಿಸಿ ಕೊಳ್ಳುತ್ತಾ ಬರುವುದು. ಈವಿಧಾನವನ್ನು ಮೇಲಿನ ತರಗತಿಯ ದೊಡ್ಡ ಮಕ್ಕಳಿಗೆ ಕಲಿಸಬಹುದು.