ಸತ್ಯದ ಅಭಿವ್ಯಕ್ತ ರೂಪವೇ ಪ್ರೇಮ. ಇದರ ಉದಯ ‘ಆತ್ಮತತ್ವ’ ದಲ್ಲಿ. ಇದು ಪರಿಶುದ್ಧ, ಅಚಲ, ಪ್ರಕಾಶಮಾನ, ಗುಣಾತೀತ, ನಿರಾಕಾರ, ಶಾಶ್ವತ, ಅಮರ ಮತ್ತು ಅಮೃತಮಯ. ಪ್ರೇಮವು ಒಂಬತ್ತು ಗುಣಗಳನ್ನು ಹೊಂದಿದೆ. ಪ್ರೇಮವೂ ಯಾರನ್ನೂ ದ್ವೇಷಿಸುವುದಿಲ್ಲ, ಆದರೆ ಎಲ್ಲರನ್ನು ಒಂದುಗೂಡಿಸುತ್ತದೆ. ‘ಏಕಾತ್ಮ’ದ ದರ್ಶನವೇ ಪ್ರೇಮ. ದ್ವಂದ್ವ ಭಾವನೆ ಇಲ್ಲದ ಅನುಭವವೇ ಪ್ರೇಮ.
ನಮ್ಮ ಆಲೋಚನೆಗಳು ಪ್ರೇಮದಲ್ಲಿ ಮುಳುಗಿದಾಗ, ನಮ್ಮ ಹೃದಯಗಳಲ್ಲಿ ಸತ್ಯದ ಆವಿರ್ಭಾವವಾಗುತ್ತದೆ. ನಾವು ಮಾಡುವ ಕಾರ್ಯಗಳಲ್ಲಿ ಪ್ರೇಮವು ತುಂಬಿದ್ದಾಗ, ಅವು ಸದ್ವರ್ತನೆಯಿಂದ ಕೂಡಿರುತ್ತವೆ. ನಮ್ಮ ಭಾವನೆಗಳು ಪ್ರೇಮದಲ್ಲಿ ನೆನೆದಾಗ, ಅಲ್ಲಿ ಶಾಂತಿಯ ಅನುಭವವಾಗುತ್ತದೆ. ಪ್ರೇಮದ ಅರಿವಾದಾಗ, ಎಲ್ಲೆಲ್ಲೂ ವ್ಯಾಪಿಸಿರುವ ಪ್ರಕೃತಿಯಲ್ಲಿ ಅದರ ಅನುಭವವಾದಾಗ, ಅರಿವಾದಾಗ, ‘ಅಹಿಂಸೆ’ ಎಂಬ ಮೌಲ್ಯವು ನಮ್ಮನ್ನು ಆವರಿಸಿ, ಅದು ನಮ್ಮೆಲ್ಲ ಕಾರ್ಯಗಳಲ್ಲಿ ಪ್ರಕಟವಾಗುತ್ತದೆ.
ಪ್ರೇಮವು ಎಲ್ಲಾ ಮೌಲ್ಯಗಳ ಮೂಲಾಧಾರವಾಗಿ, ದೈವೀಕ ಗುಣಗಳನ್ನು ನೀಡುತ್ತದೆ. ‘ಭಕ್ತಿ’ ಎಂಬುದು ಭಗವಂತನ ಮೇಲೆ ನಾವು ತೋರಿಸುವ ಪ್ರೇಮ. ಇದರಲ್ಲಿ ಕೊಟ್ಟಿರುವ ಮೊದಲನೆಯ ಕಥೆಯೇ ‘ಪ್ರಾರ್ಥನೆ.’ ಇದು ದೇವರ ಮೇಲಿನ ಭಕ್ತಿ ಮತ್ತು ಅದರ ಹೃತ್ಪೂರ್ವಕ ಪ್ರಾರ್ಥನೆಯಿಂದಾಗಿ, ಒಂದು ಮಗುವಿಗೆ ಭಗವಂತನ ಅನುಗ್ರಹವು ಹೇಗೆ ಲಭಿಸಿತೆಂಬುದನ್ನು ತಿಳಿಸುತ್ತದೆ. ‘ಕರುಣೆ’ಯು ಪ್ರೇಮದ ಮತ್ತೊಂದು ಉಪಮೌಲ್ಯ. ‘ಪ್ರಾಣಿದಯೆ’ಯ ಬಗ್ಗೆ ಕೊಟ್ಟಿರುವ ಕಥೆಗಳು ಈ ಅದ್ವೈತ ಭಾವದ ಅನುಭವದ ಬಗ್ಗೆ ತಿಳಿಸುತ್ತದೆ.