ಜಗತ್ತಿನಾದ್ಯಂತ ಇಂದೂ ಸಹ ಸತ್ಯಾನ್ವೇಷಕರಿಗೆ ಶ್ರೀ ರಾಮನ ಕಥೆಯಾದ ‘ರಾಮಾಯಣ’ವು, ಬಹಳಷ್ಟು ಮಹತ್ವಪೂರ್ಣ. ಕರ್ತವ್ಯ ನಿಷ್ಠೆ, ಸತ್ಯ, ಭಕ್ತಿ, ಶ್ರದ್ಧೆ, ಸದ್ವರ್ತನೆ ಮತ್ತು ಶರಣಾಗತಿ, ಎಂಬ ಉನ್ನತ ಆದರ್ಶಗಳನ್ನು ರಾಮಾಯಣವು ಸಾರಿ ತೋರಿಸುತ್ತಿದೆ. ವೈಯುಕ್ತಿಕ ಮಟ್ಟದಲ್ಲಿ ತಂದೆ, ತಾಯಿಯರಿಗೆ ವಿಧೇಯತೆ, ಸದ್ವರ್ತನೆ, ಶಿಸ್ತಿನ ಪಾಲನೆ ಮೊದಲಾದವುಗಳನ್ನು ಎತ್ತಿ ಹಿಡಿದಿದೆ. ಈ ಎಲ್ಲದರ ಸಾರವೆಂದರೆ, ವ್ಯಕ್ತಿಯು ಸದಾ ಧರ್ಮ ತತ್ಪರನಾಗಿದ್ದು, ತನ್ನ ಕರ್ತವ್ಯಗಳನ್ನು ನಿರ್ವಹಿಸಬೇಕೆಂಬುದೇ ಆಗಿದೆ. ಈ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆನಂದವನ್ನು ಕಾಣಬೇಕು.
‘ರಾಮಾಯಣ’ ಎಂಬುದು ಮಾನವನು ಆದರ್ಶಮಯ ಜೀವನವನ್ನು ಹೇಗೆ ನಡೆಸಬೇಕೆಂದು ಸ್ವತಃ ದೇವರೇ ಮಾನವಕುಲಕ್ಕೆ ತೋರಿಸಿರುವ ದಾರಿ ಎಂದು ತಿಳಿಸಿರುವ ಸ್ವಾಮಿಯವರು, ಅಂತೆಯೇ ರಾಮನಾಮದ ಸ್ಮರಣೆಯ ಮಹತ್ವದ ಬಗ್ಗೆ ಸಹ ಒತ್ತಿ ಹೇಳುತ್ತಾ, ಈ ಕಲಿಯುಗದಲ್ಲಿ ಅದೇ ಮುಕ್ತಿಗೆ ಮಾರ್ಗವೆಂದೂ ತಿಳಿಸಿದ್ದಾರೆ. (ದಿವ್ಯೋಪನ್ಯಾಸ – ರಾಮನವಮಿ, ಮಾರ್ಚ್ ೩೦, ೨೦೦೪).
ಗ್ರೂಪ್-೧ ವಿದ್ಯಾರ್ಥಿಗಳಿಗೆ ರಾಮಾಯಣವನ್ನು ಕಥೆಯ ರೂಪದಲ್ಲಿ ಹೇಳಬೇಕು. ಸತ್ಯ, ವಿಧೇಯತೆ, ಮಾತಾ ಪಿತೃಗಳ ಬಗ್ಗೆ ಗೌರವ, – ಇಂತಹ ಸರಳ ಕಥೆಗಳ ಮೇಲೆ ಗಮನವನ್ನು ಕೊಡಬೇಕು. ಸ್ವಾಮಿಯವರು ಹೇಳಿರುವ ‘ರಾಮ ಕಥಾ ರಸವಾಹಿನಿ’ ಯಲ್ಲಿ, ಇದುವರೆಗೂ ರಾಮಾಯಣದಲ್ಲಿ ಕೇಳಿರದ ಕೆಲವಾರು ವಿಷಯಗಳನ್ನು ಸವಿಸ್ತಾರವಾಗಿ ತಿಳಿಸಲಾಗಿದೆ.