ನಂಬಿಕೆಗಳ ಐಕ್ಯತೆಯನ್ನು ತಿಳಿಸುವ ಕಥೆಗಳು
“ಇರುವುದು ಒಂದೇ ಧರ್ಮ–ಅದುವೇ ಪ್ರೇಮ ಧರ್ಮ
ಇರುವುದು ಒಂದೇ ಭಾಷೆ–ಅದು ಹೃದಯ ಭಾಷೆ
ಇರುವುದು ಒಂದೇ ಜಾತಿ–ಅದು ಮಾನವ ಜಾತಿ
ಇರುವವನು ಒಬ್ಬನೇ ಭಗವಂತ–ಆತನು ಸರ್ವಾಂತರ್ಯಾಮಿ.”
ಪ್ರಪಂಚದ ಎಲ್ಲಾ ಮತಧರ್ಮಗಳ ಬೋಧನೆಯ ಸಾರ ‘ಸತ್ಯ ಒಂದೇ’ ಎಂದು ಭಗವಾನ್ ಬಾಬಾ ಹೇಳುತ್ತಾರೆ. ಈ ಮತಧರ್ಮಗಳಲ್ಲಿರುವ ಸತ್ಯವನ್ನು ಕೆಲವೇ ಮಂದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಭಗವಂತನ ರೂಪ ನಾಮಗಳು ಬೇರೆ, ಬೇರೆ ಆದರೂ ಅವುಗಳಲ್ಲಿರುವ ‘ಸತ್ಯ ಒಂದೇ’ ಎಂಬ ಪ್ರಜ್ಞೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು.
ಸರ್ವಾಂತರ್ಯಾಮಿಯಾದ ಒಬ್ಬನೇ ಭಗವಂತನನ್ನು ಬೇರೆ, ಬೇರೆ ಮತ, ಧರ್ಮದ ಅನುಯಾಯಿಗಳು ಪ್ರಾರ್ಥಿಸುತ್ತಾರೆ. ಯಾವುದೇ ಮತಧರ್ಮಕ್ಕೂ ಅನುಗ್ರಹಿಸುವ ಪ್ರತ್ಯೇಕ ‘ದೇವರು’ ಎಂಬುದು ಇಲ್ಲ. ಮನುಷ್ಯರು ಯಾವುದೇ ಜನಾಂಗಕ್ಕೆ ಸೇರಲಿ ಅಥವಾ ಯಾವುದೇ ಭಾಷೆಯನ್ನು ಆಡಲಿ ಅವರಿಗೆ ಒಬ್ಬನೇ ಆದ ಭಗವಂತನು ಆನಂದವನ್ನು ಕರುಣಿಸುತ್ತಾನೆ.