ಪರಿಚಯ
ವೇದಗಳು ಅನಾದಿ, ಅಪೌರುಷೇಯ, ಎಂದು ಕರೆಯಲ್ಪಟ್ಟಿವೆ. ನಮ್ಮ ಪ್ರಾಚೀನ ಋಷಿ ಪರಂಪರೆಯ ಭಾರತ ಇಡಿ ಮನುಕುಲಕ್ಕೆ, ಜಗತ್ತಿಗೆ ಕೊಟ್ಟಿರುವ ಅಮೂಲ್ಯ ಕೊಡುಗೆ |ನಾಲ್ಕು ವೇದಗಳು, ಉಪನಿಷತ್ತುಗಳು, ಮತ್ತು ಭಗವದ್ಗೀತೆ. ಇವುಗಳೊಂದಿಗೆ ಇನ್ನೂ ಹಲವಾರು ಶ್ರೇಷ್ಠ ಆಧ್ಯಾತ್ಮಿಕ ಗ್ರಂಥಗಳೂ ಸೇರಿವೆ.
ವೇದ ಎಂದರೆ ಅಂತರ್ಮುಖಿಗಳಾಗಿ ಧ್ಯಾನಸ್ಥರಾಗಿ ಕುಳಿತು ಜೀವ, ಆತ್ಮ, ಜಗತ್ತು, ಈಶ್ವರ ಎಂಬೀ ಮೂಲಭೂತ ವಿಚಾರಗಳ ಬಗ್ಗೆ ಚಿಂತಿಸಿದ ಋಷಿಗಳಿಗೆ ಹೊಳೆದ, ತಿಳಿದ, ದರ್ಶನ ಅನುಭವಗಳಿಗೂ ಬಂದ ಜ್ಞಾನರಾಶಿ. ಜ್ಞಾನ ಯಾರಿಗೆ ಬೇಡ? ಜಾತಿ, ಮತ, ಧರ್ಮ, ವರ್ಣ, ವರ್ಗ, ಲಿಂಗ ಎಂಬ ಯಾವ ಬೇಧವೂ ಇಲ್ಲದೆ ಎಲ್ಲರಿಗೂ ಬೇಕು. ಎಲ್ಲರೂ ಅಮೃತಾತ್ಮರು. ಎಲ್ಲರಿಗೂ ಇದರ ಅರಿವಾಗಬೇಕು, ಅನುಭವವಾಗಬೇಕು. ಎಲ್ಲರಿಗೂ ಆ ಆನಂದ, ಮತ್ತು ಮನಶ್ಶಾಂತಿ ದೊರೆಯಬೇಕು. ಎಲ್ಲರೂ ಪ್ರೀತಿಯಿಂದ ಒಂದಾಗಿ `ಸಮಬಾಳು ಸಹಬಾಳ್ವೆ’ ಎಂಬ ಸೂತ್ರದಂತೆ ನೂರು ಕಾಲ ಬದುಕಬೇಕು. ಇದನ್ನೇ ಮಹರ್ಷಿಗಳು ಅಂದಿಗೂ, ಎಂದಿಗೂ ಎಂದೆಂದಿಗೂ ಹಾರೈಸಿ ಘೋಷಿಸಿದರು. ಅಧ್ಯಾತ್ಮ, ಸಂಸ್ಕೃತಿ, ಸ್ವಸ್ಥ ಸಮಾಜ|ವೇ ಭಾರತೀಯರ ಜೀವಾಳ, ಅಂತಸ್ಸತ್ವ. ಸಾವಿರಾರು ವರ್ಷ ಕೇವಲ ಕಿವಿಯಿಂದ ಕಿವಿಗೆ, ಬಾಯಿಂದ ಬಾಯಿಗೆ ಅಚ್ಚಳಿಯದೆ ಹರಿದು ಬಂದ ಈ ಜ್ಞಾನ ಗಂಗೆಯನ್ನು ಕ್ರೋಡೀಕರಿಸಿ ವ್ಯವಸ್ಥಿತವಾಗಿ ವಿಭಾಗಮಾಡಿ ಜನತೆಗೆ ಕೊಟ್ಟ ಪರಮ ಪೂಜ್ಯ ವೇದವ್ಯಾಸರನ್ನು ಕೃತಜ್ಞತೆಯಿಂದ ನೆನೆಯಬೇಕು.
ಮಕ್ಕಳಿಗೆ ಎಳೆಯ ವಯಸ್ಸಿನಲ್ಲೇ ವೇದ ಮಂತ್ರಗಳನ್ನು ಕಲಿಸಿ, ಬಾಯಿಪಾಠ ಮಾಡಿಸಿದರೆ, ಒಳ್ಳೆಯ ಸಂಸ್ಕಾರ ಒಳ್ಳೆಯ ಸಂಸ್ಕೃತಿ ಪೋಷಿತವಾಗುತ್ತವೆ. ಆತ್ಮಜಾಗೃತಿಯಾಗಿ ಆತ್ಮವಿಶ್ವಾಸ, ಆತ್ಮಶಕ್ತಿ ವೃದ್ಧಿಯಾಗುತ್ತವೆ. ಆದ್ದರಿಂದಲೇ ಸ್ವಾಮಿ ಮಾದರಿಯಾಗಿ ವೇದಪಾಠಶಾಲೆಯನ್ನು ಪ್ರಶಾಂತಿ ನಿಲಯದಲ್ಲಿ ಆರಂಭಿಸಿದರು. ಈಗ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಲ್ಲೆಲ್ಲಾ ಬಾಲವಿಕಾಸ, ಸತ್ಸಂಗ, ಸೇವಾದಳದ ಎಲ್ಲರೂ ವೇದ ಪಠಣವನ್ನು ಕಲಿಯುವ ವ್ಯವಸ್ಥೆ ಮಾಡಿದ್ದಾರೆ. ಇದು ವೇದಗಳ ಪುನರುತ್ಥಾನದ ಕಾಲ.