ಓಂಕಾರ ಎಂದರೇನು?
ಓಂಕಾರವು, ನಮ್ಮ ಭಗವಂತ ಶ್ರೀ ಸತ್ಯಸಾಯಿ ಬಾಬಾರವರೊಂದಿಗೆ ಮಾನಸಿಕವಾಗಿ/ ಆಧ್ಯಾತ್ಮಿಕವಾಗಿ ಸಂಪರ್ಕ ಸಾಧಿಸುವ ಸಾಧನ, ಭಗವಂತ ಶಬ್ದ ಸ್ವರೂಪಿ. ಅವನು ಶಬ್ದವನ್ನು ತನ್ನ ಸ್ವರೂಪವನ್ನಾಗಿಸಿಕೊಂಡಿದ್ದಾನೆ. ಶಬ್ದವು ಎಲ್ಲ ಕಡೆಗಳಲ್ಲಿ ಇದೆ. ಸೃಷ್ಟಿಯ ಮೊದಲ ಶಬ್ದ ಓಂಕಾರ. ಓಂಕಾರ ಶಬ್ದ ನಿಸರ್ಗದ ಎಲ್ಲ ಅಂಶಗಳಲ್ಲಿ ಸಮ್ಮಿಳಿತವಾಗಿದೆ. ಪರ್ವತದಿಂದ ಧುಮ್ಮಿಕ್ಕುವ ನೀರು ‘ಓಂ’ ನಾದವನ್ನು ಹೊರಡಿಸುತ್ತದೆ. ಭೋಗರೆಯುವ ಸಮುದ್ರದ ಅಲೆಯಲ್ಲಿ ‘ಓಂ’ ಶಬ್ದವಿದೆ. ನಿಮ್ಮನ್ನು ಸ್ಪರ್ಶಿಸುವ ಗಾಳಿಯಲ್ಲಿ ‘ಓಂಕಾರ’ ಶಬ್ದವಿದೆ. ಭಯಂಕರವಾದ ಬಿರುಗಾಳಿಯಲ್ಲಿಯೂ ‘ಓಂಕಾರ’ ನಾದವಿದೆ.
ನಾವು ಹೃದಯದ ಕೇಂದ್ರ ಬಿಂದುವಿನಲ್ಲಿ ಧ್ಯಾನಾಸಕ್ತರಾದಾಗ, ನಮ್ಮ ಹೃದಯದಿಂದ ಓಂಕಾರ ಶಬ್ದ ಹೊರ ಹೊಮ್ಮುವುದನ್ನು ಆಲಿಸಬಹುದು. ಸಿಖ್ಖರ ಧರ್ಮ ಗ್ರಂಥ ‘ಗ್ರಂಥಸಾಹಿಬ್’ದಲ್ಲಿ ‘ಓಂಕಾರವನ್ನು ಆನಂದ ಶಬ್ದ’ವೆಂದು ಕರೆಯಲಾಗಿದೆ. ಓಂಕಾರ ಪ್ರಣವ ಸ್ವರೂಪ. ಮಾನವನ ದೇಹದ ಪ್ರಾಣಶಕ್ತಿ ಓಂಕಾರವಾಗಿದೆ.
ನಾವು ಓಂಕಾರವನ್ನು ಹೇಗೆ ಉಚ್ಛರಿಸಬೇಕು?
ಓಂಕಾರ, ಅ+ಉ+ಮ ಅಕ್ಷರಗಳಿಂದ ಉಂಟಾಗಿದೆ “ಅ” ಕಾರವನ್ನು ನಾಭಿಯಿಂದ ಪ್ರಾರಂಭಿಸಿ ಕಂಠದಿಂದ “ಉ” ಕಾರವನ್ನು ಮತ್ತು ತುಟಿಗಳ ಸ್ಪರ್ಶದೊಂದಿಗೆ “ಮ” ಕಾರವನ್ನು ಉಚ್ಚರಿಸುವ ಅಗತ್ಯವಿದೆ.
ಓಂ ಇದು ವಿಶ್ವದ ಎಲ್ಲಾ ಶಬ್ದಗಳ ಆಧಾರ, ನಿರಾಕಾರ, ನಿರ್ಗುಣ ಪರಬ್ರಹ್ಮ ಸ್ವರೂಪಿಯಾದ ಭಗವಂತ ತಾನು ಏಕತ್ವದಿಂದ ಅನೇಕತ್ವವನ್ನು (ವಿಶ್ವರೂಪ) ಹೊಂದುವ ಸಂಕಲ್ಪ ಮಾಡಿದಾಗ ಅಂತಹ ಆನಂದಮಯ ಜಾಗ್ರತಾವಸ್ಥೆಯಲ್ಲಿ ವ್ಯಕ್ತಪಡಿಸಿದ ದೈವಿ ಶಬ್ದ ‘ಅ’ ‘ಉ’ ‘ಮ’ ಓಂಕಾರ. ಭಗವಂತ ಓಂಕಾರ ಸ್ವರೂಪಿಯಾಗಿದ್ದಾನೆ. ಓಂಕಾರ ಪಂಚ ಮಹಾಭೂತಗಳ ಹುಟ್ಟಿಗೆ ಪ್ರೇರಣೆಯಾಗಿದೆ.
ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರು ಪ್ರತಿಯೊಬ್ಬ ಮನುಷ್ಯ ಕೆಳಸ್ಥರದಿಂದ ಮೇಲಿನಸ್ಥರಕ್ಕೆ ವಿಕಾಸ ಹೊಂದುವ ಬಗ್ಗೆ ಜ್ಞಾನವನ್ನು ನೀಡಿದ್ದಾರೆ. ಮೂಲಧಾತುವಿನಿಂದ ಅಮಿಬಾ, ಅಮಿಬಾದಿಂದ ಏಕಕೋಶ ಸಸ್ಯಗಳು, ಸಸ್ಯಗಳಿಂದ ಪ್ರಾಣಿ, ಪ್ರಾಣಿಯಿಂದ ಮಾನವ, ಮಾನವನಿಂದ ಪರಿಪೂರ್ಣವಾದ ಯೋಗಿಯಾಗಿ ಪರಿವರ್ತನೆ ಹೊಂದುವ ವಿಕಸನ. ಓಂಕಾರದ ಜ್ಞಾನ ಮತ್ತು ಚಿಂತನೆಯಿಂದ ಯೋಗಿ ಓಂಕಾರದೊಂದಿಗೆ ವಿಲೀನವಾಗುತ್ತಾನೆ.
ಆದುದರಿಂದ ಓಂಕಾರ ಪರಿಪೂರ್ಣ ದೈವತ್ವವನ್ನು ಪ್ರತಿನಿಧಿಸುತ್ತದೆ. ದೈವತ್ವದ ಎಲ್ಲಾ ನಾಮ ಮತ್ತು ರೂಪಗಳ ಒಟ್ಟೂ ಸಾರಂಶವೇ ಓಂಕಾರವಾಗಿದೆ. ಎಲ್ಲಾ ಸಮಯದ ಪರಿಕಲ್ಪನೆಗಳು ಎಲ್ಲಾ ಪ್ರಜ್ಞೆಯ / ಜ್ಞಾನದ ಹಂತಗಳು ಓಂಕಾರವಾಗಿದೆ. ಸರ್ವಾಂತರ್ಯಾಮಿ ಸರ್ವಶಕ್ತ, ಸರ್ವಜ್ಞ ಸ್ವರೂಪವೇ ಓಂಕಾರವಾಗಿದೆ.
ಸಾಯಿ ಲೀಲೆಗಳು
ದಿನಾಂಕ : ೨೭/೦೪/೧೯೭೩ ರಲ್ಲಿ ನಡೆದ ಘಟನೆ, ಭಗವಾನ್ ಬಾಬಾರವರು ಬೃಂದಾವನದ ಹೂದೋಟದಲ್ಲಿ ವಿದ್ಯಾರ್ಥಿಗಳ ಗುಂಪಿನೊಂದಿಗೆ ಸಾಗುತ್ತಿರುವಾಗ ಒಂದು ಗಿಡದ ಎಲೆಗಳನ್ನು ಕೀಳುತ್ತಾರೆ ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನನ್ನ ಕೈಯಲ್ಲಿ ಏನಿದೆ? ಎಂದು ಕೇಳುತ್ತಾರೆ. ವಿದ್ಯಾರ್ಥಿಗಳು ಉತ್ಸಾಹದಿಂದ ಒಟ್ಟಿಗೆ ‘ಎಲೆ’ ಎಂದು ಉತ್ತರಿಸುತ್ತಾರೆ.
ಸ್ವಾಮಿಯ ಪಕ್ಕದಲ್ಲಿ ನಿಂತಿರುವ ಹಿರಿಯ ಭಕ್ತರಲ್ಲಿ ಓರ್ವರಾದ ಡಾ|| ಎ. ನರಸಪ್ಪನವರು ಸ್ವಾಮಿಯನ್ನು ಉದ್ದೇಶಿಸಿ ನಿಮ್ಮ ಕೈಯಲ್ಲಿರುವುದು ‘ನಿಮ್ಮ ಸಂಕಲ್ಪದಿಂದ ಏನು ಬೇಕಾದರೂ ಆಗಬಹುದು’ ಎಂದು ಉತ್ತರಿಸುತ್ತಾರೆ. ಸ್ವಾಮಿ ಮುಗುಳುನಗುತ್ತಾ ತಮ್ಮ ಕೈಯನ್ನು ತೆರೆದಾಗ ಶೇಷ ಶಯನನಾದ ನಾರಾಯಣನ ಅತಿ ಸುಂದರವಾದ ಲಾಕೇಟ್ ಸ್ವಾಮಿಯ ಹಸ್ತದಲ್ಲಿರುತ್ತದೆ.
ಈ ಸುಂದರವಾದ ಭಗವಂತನ ಲೀಲೆಯಿಂದ ಸ್ವಾಮಿಯು ಜಗತ್ತಿಗೆ ಜೀವಿಯು ಎಲೆಯಿಂದ ದೈವೀಸ್ವರೂಪದ ಎತ್ತರದವರೆಗೂ ಪರಿವರ್ತನೆ ಹೊಂದಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. ಯಾವಾಗ ಒಬ್ಬ ವ್ಯಕ್ತಿ ಆಸೆ ಎಂಬ ಸರ್ಪದ ಮೇಲೆ ನಿರಾಂತಕವಾಗಿ ಮಲಗಲು ಸಾಧ್ಯವಾಗುತ್ತದೆಯೋ ಆಗ ಅವನು ದೈವತ್ವವನ್ನು ಹೊಂದಲು ಅರ್ಹನಾಗಿರುತ್ತಾನೆ. ಓಂಕಾರವು ಎಲ್ಲಾ ರೂಪಗಳನ್ನು, ಎಲ್ಲಾ ನಾಮಗಳನ್ನು, ಎಲ್ಲಾ ಹಂತದ ಜಾಗೃತಿ/ ಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ.